ಕೃಷಿಮೇಳದ 3ನೇ ದಿನವಾದ ರವಿವಾರ ಜಾನುವಾರು ಪ್ರದರ್ಶನಕ್ಕೆ ಶ್ವಾನ ಪ್ರದರ್ಶನ ರಂಗೇರುವಂತೆ ಮಾಡಿದ್ದು, ವಿವಿಧ ಬಗೆಯ ಶ್ವಾನಗಳು ನೋಡುಗರ ಗಮನ ಸೆಳೆದವು. ದೇಶ ಮತ್ತು ವಿದೇಶದ ವಿವಿಧ ಜಾತಿಯ ಶ್ವಾನಗಳ ವಿವಿಧ ಗಾತ್ರ, ಬಣ್ಣ, ವೈಶಿಷ್ಟತೆಗಳು ನೋಡುಗರ ಕಣ್ಮನ ಸೆಳೆದವು.
ಮನೆಯಲ್ಲಿ ವಾಸವಾಗಿದ್ದ ಶ್ವಾನಗಳು ಈ ಪರಿಯ ಜನಸಮೂಹವನ್ನು ನೋಡಿ ಕಕ್ಕಾಬಿಕ್ಕಿಯಾಗಿದ್ದಂತೂ ಸುಳ್ಳಲ್ಲ. ಬರೀ ಮನೆಯ ಗೇಟಿಗೆ ನಿಂತರೆ ಸಾಕು ಬೊಗಳುವ ಇವು ಜನಸಮೂಹ ನೀಡಿ ಬೊಗಳುತ್ತಲೇ ಇದ್ದವು. ತಮ್ಮ ಶ್ವಾನಗಳನ್ನು ಸಮಾಧಾನ ಪಡಿಸುವುದೇ ಅವುಗಳ ಮಾಲೀಕರಿಗೆ ದೊಡ್ಡ ತಲೆನೋವಾಗಿತ್ತು.
ಯುವಕರಂತೂ ಅವುಗಳನ್ನು ಕಾಡಿಸಿ ಮಜಾ ಪಡೆದರೆ ಇದರಿಂದ ಕಕ್ಕಾಬಿಕ್ಕಿಯಾದ ಕೆಲವು ಶ್ವಾನಗಳು ಸುಸ್ತಾಗಿ ಲಗಿಬಿಟ್ಟಿದ್ದವು. ಅದೇ ರೀತಿ ಕಮಾಂಡರ್, ಆಫ್ರಿಕನ್ ಹಾಂಡ್, ಚೌಚೌ, ಪೆಕಿನ್ಸ್, ಫಾಕ್ಸ್ ಟೆರಿಯರ್, ಪಗ್, ಬುಲ್ ಡಾಗ್ ಸೇರಿದಂತೆ 18 ತಳಿಯ 54 ಶ್ವಾನಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು.
ಇದಲ್ಲದೇ ಬಾಗಲಕೋಟೆಯ ಮುಧೋಳ ತಾಲೂಕಿನ ತಿಮ್ಮಾಪೂರದ ಶ್ವಾನ ಸಂಶೋಧನ ಹಾಗೂ ಮಾಹಿತಿ ಕೇಂದ್ರದಿಂದ ತರಲಾಗಿದ್ದ ಮುಧೋಳ ಜಾತಿಯ ಶ್ವಾನಗಳು ಜಾನುವಾರು ಪ್ರದರ್ಶನದ ಕೇಂದ್ರ ಬಿಂದುವಾಗಿದ್ದವು. ಎರಡು ದಿನಗಳಲ್ಲಿ 200 ನಾಯಿ ಮರಿಗಳಿಗೆ ಬೇಡಿಕೆ ಬಂದಿದ್ದು, ಹೆಣ್ಣು ಮರಿಗೆ 9500 ಹಾಗೂ ಗಂಡು ಮರಿಗೆ 10 ಸಾವಿರ ರೂ. ನಿಗದಿ ಮಾಡಲಾಗಿದೆ.
ಚಿತ್ತ ಸೆಳೆದ ಸೈಬೇರಿಯನ್ ಹಸ್ಕಿ: ಹಿಮಾಲಯ ಪ್ರದೇಶ ಹಾಗೂ ಹೆಚ್ಚಾಗಿ ಐಶ್ ಲ್ಯಾಂಡ್‌ನಲ್ಲಿ ಹಿಮದಲ್ಲಿ ಗಾಡಿ ಎಳೆಯಲು ಬಳಸುವ ಸೈಬೇರಿಯನ್ ಹಸ್ಕಿ ಎಂಬ ತಳಿ ಶ್ವಾನವೊಂದು ಇಡೀ ಶ್ವಾನ ಪ್ರದರ್ಶನದ ಕೇಂದ್ರ ಬಿಂದುವಾಗಿತ್ತು.ಆ ಶ್ವಾನದ ರೂಪ, ಶಾಂತ ನಡುವಳಿಕೆಯಿಂದ ಹೆಚ್ಚು ಗಮನ ಸೆಳೆಯುವಂತಿತ್ತು.
ಬುದ್ಧಿವಂತಿಕೆಗೆ ಹೆಸರುವಾಸಿಯಾದ ಈ ಶ್ವಾನ, ಕೃಷಿ ಮೇಳದ ಜನರನ್ನು ನೋಡಿ ಇತರ ಶ್ವಾನಗಳಂತೆ ಬೊಗಳದೆ ಶಾಂತಚಿತ್ತದಿಂದ ಎಲ್ಲವನ್ನೂ ನೋಡುತ್ತಾ ಇದ್ದಿದ್ದು ಕಂಡು ಬಂತು. ಧಾರವಾಡದ ಪೊಲೀಸ್ ಹೆಡ್‌ಕಾಟರ್ ನಿವಾಸಿಯೊಬ್ಬರ ಬಳಿ ಈ ಶ್ವಾನವಿದ್ದು, ಎರಡೂವರೆ ವರ್ಷಗಳ ಹಿಂದೆ 46 ಸಾವಿರ ರೂ. ನೀಡಿ ಈ ತಳಿಯ ಮರಿ ಖರೀದಿಸಿ ತಂದಿದ್ದರು. ಇದೀಗ ಈ ಮರಿಗೆ ಎರಡೂವರೆ ವರ್ಷಗಳಾಗಿದ್ದು, ಈ ವಾತಾವರಣಕ್ಕೆ ಹೊಂದಿಕೊಂಡಿದೆ.