Advertisement

Mudhol: ಅನೈತಿಕ‌ ಚಟುವಟಿಕೆ ಕೇಂದ್ರವಾಗಿರುವ ಸಮುದಾಯ ಭವನ, ಬೇಕಿದೆ ಸೂಕ್ತ ರಕ್ಷಣೆ

08:17 AM Sep 24, 2024 | Team Udayavani |

ಮುಧೋಳ: ಸೂಕ್ತ ನಿರ್ವಹಣೆ ಕೊರತೆಯಿಂದಾಗಿ‌ ನಗರದ ಮಧ್ಯಭಾಗದಲ್ಲಿರುವ ಸಮುದಾಯ ಭವನವೊಂದು ಪಾಳು ಕೊಂಪೆಯಂತಾಗುತ್ತಿದ್ದು, ಸಾರ್ವಜನಿಕರ ಅನೈತಿಕ ಚಟುವಟಿಕೆ‌ ತಾಣವಾಗಿ ಬದಲಾಗಿದೆ.

Advertisement

ಬಸ್ ನಿಲ್ದಾದಿಂದ ಕೂಗಳತೆ ದೂರದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ‌ ಭವನ‌ದ ನಿರ್ವಹಣೆಗೆ ನಗರಸಭೆ ಮುಂದಾಗದಿರುವ ಕಾರಣ ಭವನದ ಆವರಣ ಮತ್ತು ಭವನದೊಳಗೆ ಕಸಕಡ್ಡಿ‌ಯಥೇಚ್ಛವಾಗಿ ಬೆಳೆದುಕೊಂಡಿದೆ.

ಸುಂದರ ಸಮಾರಂಭ ಹಾಗೂ ವಿವಿಧ ಶುಭ ಕಾರ್ಯಗಳಿಗೆ ಬಳಕೆಯಾಗಬೇಕಿದ್ದ ಭವನಕ್ಕೆ ಗ್ರಹಣ ಹಿಡಿದಿದ್ದು ಅಧಿಕಾರಿಗಳು ಕನಿಷ್ಠ ಸ್ವಚ್ಛತೆಗೂ‌ ಮುಂದಾಗದಿರುವುದು‌ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಮಲಮೂತ್ರ ವಿಸರ್ಜನೆ ಕೆಂದ್ರವಾದ ಭವನ : ಕೋಟಿ‌ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ವಾಲ್ಮೀಕಿ‌ ಭವನ ಇಂದು‌ ಸಾರ್ವಜನಿಕರ‌‌ ಮಲಮೂತ್ರ ವಿಸರ್ಜನೆ ಕೇಂದ್ರವಾಗಿ‌ ಬದಲಾಗಿದೆ. ಭವನದೆದುರಿನ ಗೇಟ್ ಕಿತ್ತು ಹೋಗಿದ್ದು ಅಕ್ಕಪಕ್ಕದ ಸಾರ್ವಜನಿಕರು ಭವನದ ಅಂಗಳದಲ್ಲಿಯೇ‌ ಮಲಮೂತ್ರ ವಿಸರ್ಜನೆ‌ ಮಾಡುತ್ತಿದ್ದಾರೆ. ಭವನದ ಸಮೀಪ‌ ಸುತ್ತ ದುರ್ವಾಸನೆ‌ ಬೀರುತ್ತಿದ್ದು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ.

Advertisement

ಒಡೆದ ಕಿಟಕಿ ಗಾಜುಗಳು : ಭವನ ನಿರ್ಮಾಣವಾಗಿ ಕೆಲ ವರ್ಷಗಳು ಕಳೆದಿವೆ. ಆದರೂ‌ ಇದುವರೆಗೂ ಯಾವ ಶುಭ ಕಾರ್ಯಗಳಾಗಲಿ‌ ಸಮುದಾಯದ ಕಾರ್ಯಕ್ರಮಗಳಾಗಲಿ‌ ನಡೆದಿಲ್ಲ. ಅದಾಗಲೇ ಭವನದ ಕಿಟಕಿಗಳಿಗೆ ಅಳವಡಿಸಿರುವ ಗಾಜುಗಳು ಒಡೆದುಹೋಗಿದ್ದು, ಬಾಗಿಲುಗಳು ಹುಳು‌ ತಿನ್ನುವ ಹಂತಕ್ಕೆ‌ ತಲುಪಿವೆ. ಭವನದೊಳಗೆ ಕಸ ಗುಡಿಸದ ಕಾರಣ ನೆಲದಲ್ಲೆಲ್ಲ ಅಪಾರ‌ ಪ್ರಮಾಣದ ಧೂಳು ಸಂಗ್ರಹಗೊಂಡಿದೆ. ಭವನಕ್ಕೆ ಅಳವಡಿಸಿರುವ ಕಬ್ಬಿಣದ ವಸ್ತುಗಳು ಮಳೆಗಾಳಿಗೆ ತುಕ್ಕು‌ಹಿಡಿಯುತ್ತಿವೆ.

ಕಿತ್ತುಹೋಗಿರುವ ಮುಖ್ಯ ಗೇಟ್ : ಮಂಟೂರು ರಸ್ತೆಪಕ್ಕದಲ್ಲಿರುವ ಭವನದ‌‌ ಮುಖ್ಯ ಗೇಟ್ ಕಿತ್ತು ಹೋಗಿದ್ದು, ಭವನಕ್ಕೆ ಸೂಕ್ತ ರಕ್ಷಣೆಯೇ ಇದಲ್ಲದಂತಾಗಿದೆ. ಅದೂ ಅಲ್ಲದೆ ಭವನದ ಸುತ್ತ ನಿರ್ಮಿಸಿರುವ ಕಾಂಪೌಂಡ್ ಕೆಳಮಟ್ಟದಲ್ಲಿದ್ದು, ಸುತ್ತಮುತ್ತಲಿನ‌ ಜನರು ಕಾಂಪೌಂಡ್ ಜಿಗಿದು ಭವನದ ಆವರಣದಲ್ಲಿ‌ ಗಲೀಜು‌‌ ಮಾಡುತ್ತಿದ್ದಾರೆ. ಭವನಕ್ಕೆ ನೂತನ‌ ಕಾಂಪೌಂಡ್ ನಿರ್ಮಿಸಿ‌ಭವನದ ರಕ್ಷಣೆಗೆ ಅಧಿಕಾರಿಗಳು‌‌ ಮುಂದಾಗಬೇಕಿದೆ.

ಅನೈತಿಕ‌ ಚಟುವಟಿಕೆ‌‌ ಕೇಂದ್ರವಾಗಿರುವ ಕಟ್ಟಡ : ನಗರದ ಹೃದಯಭಾಗದಲ್ಲಿ‌ರುವ ಕಟ್ಟಡ ಕತ್ತಲಾದರೆ ಸಾಕು‌ ಕುಡುಕರ ಹಾಗೂ ಅನೈತಿಕ‌ ಚಟುವಟಿಕೆ ಕೇಂದ್ರವಾಗಿ ಮಾರ್ಪಾಡಾಗುತ್ತದೆ. ಕತ್ತಲೆ ಹೊತ್ತಲ್ಲಿ‌ ಗಂಟೆಗಟ್ಟಲೆ ಕುಳಿತುಕೊಳ್ಳುವ ಕುಡುಕರು ತಾವು ಕುಡಿದ ಬಾಟಲಿಗಳನ್ನು ಅಲ್ಲಿಯೇ ಬಿಸಾಕಿ‌ ಭವನವನ್ನು ಅನೈತಿಕ ಚಟುವಟಿಕೆ‌ ಕೇಂದ್ರವನ್ನಾಗಿಸಿಕೊಂಡಿದ್ದಾರೆ.

ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು, ಹತ್ತಾರು ಶುಭ ಸಮಾರಂಭಗಳಿಗೆ ಸಾಕ್ಷಿಯಾಗಬೇಕಿದ್ದ ಸುಂದರ ಭವನವೊಂದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೊಳಗಾಗಿ‌ ನಗರದಲ್ಲಿ ತನ್ನ ಅಸ್ತಿತ್ವವನ್ನೆ‌ ಕಳೆದುಕೊಳ್ಳುತ್ತಿದೆ. ಇಮ್ನಾದರೂ ಅಧಿಕಾರಿಗಳು‌ ಭವನಕ್ಕೆ ಸೂಕ್ತ ಕಾಯಕಲ್ಪ‌ಒದಗಿಸಿ ಸಾರ್ವಜನಿಕ‌ಕಾರ್ಯಗಳಿಗೆ ಉಪಯೋಗವಾವಾಗುವಂತೆ ನೋಡಿಕೊಳ್ಳಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.
**
ಶ್ರೀ ಮಹರ್ಷಿ ವಾಲ್ಮೀಕಿ ಭವನದ ಸ್ವಚ್ಛತೆಗೆ ನಮ್ಮ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಶೀಘ್ರವೇ ಭವನವನ್ನು ಸ್ವಚ್ಛಗೊಳಿಸಿ ಭವನ ಉಪಯೋಗಕ್ಕೆ ರೂಪುರೇಷೆ ಸಿದ್ದಗೊಳಿಸಲಾಗುವುದು.
– ಗೋಪಾಲ‌‌ ಕಾಸೆ ನಗರಸಭೆ ಪೌರಾಯುಕ್ತ ಮುಧೋಳ

– ಗೋವಿಂದಪ್ಪ ತಳವಾರ ಮುಧೋಳ

Advertisement

Udayavani is now on Telegram. Click here to join our channel and stay updated with the latest news.

Next