ಬಾಗಲಕೋಟೆ: ಕಳೆದ 45 ದಿನಗಳಿಂದ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಧೋಳದಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದೆ.
ಇದರ ಮಧ್ಯೆಯೇ ನಿಷೇಧಾಜ್ಞೆ ಜಾರಿ ಬೆನ್ನಲ್ಲೇ ಮತ್ತಷ್ಟು ಆಕ್ರೋಶಗೊಂಡ ರೈತರು, ಹಳ್ಳಿ-ಹಳ್ಳಿಯಿಂದ ಮುಧೋಳಕ್ಕೆ ಆಗಮಿಸಿ ಹೋರಾಟ ಮತ್ತಷ್ಟು ತೀವ್ರಗೊಳಿಸಿದ್ದಾರೆ. ಮುಧೋಳದಿಂದ ವಿವಿಧ ಹಳ್ಳಿಗಳಿಗೆ ತೆರಳುವ ಪ್ರಮುಖ ರಸ್ತೆ-ಹೆದ್ದಾರಿಗಳನ್ನು ಬಂದ್ ಮಾಡಿ, ರಸ್ತೆಯಲ್ಲೇ ಒಲೆ ಹೂಡಿ ಅಡುಗೆ ಮಾಡಿ ಮಧ್ಯಾಹ್ನದ ಊಟ ಮಾಡಿದ್ದಾರೆ.
ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ವರ್ಷ ಟನ್ ಕಬ್ಬಿಗೆ 2900 ರೂ. ದರ ನೀಡಬೇಕು ಹಾಗೂ ಕಳೆದ ವರ್ಷದ ಕಬ್ಬಿನ ಬಾಕಿ ಪಾವತಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆ. ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರತಿ ಟನ್ ಕಬ್ಬಿಗೆ 2900 ರೂ. ದರ ಘೋಷಣೆ ಮಾಡಿ ಕಬ್ಬು ನುರಿಸುವುದನ್ನು ಆರಂಭಿಸಿದ್ದರೆ ಇನ್ನುಳಿದ ಹದಿಮೂರು ಖಾಸಗಿ ಸಕ್ಕರೆ ಕಾರ್ಖಾನೆಗಳು, ಪ್ರಸಕ್ತ ವರ್ಷದ ಕಬ್ಬು ದರ ಘೋಷಣೆ ಮಾಡಿಲ್ಲ.
ಕಳೆದ 45 ದಿನಗಳಿಂದ ರೈತರ ಹೋರಾಟ ನಡೆಯುತ್ತಿದ್ದು ಜಿಲ್ಲಾಧಿಕಾರಿಗಳು, ಸಚಿವರ ಮಧ್ಯಸ್ಥಿಕೆಯಲ್ಲಿ ಮೂರು ಬಾರಿ ಸಭೆ ನಡೆದಿವೆ.
ಈ ವೇಳೆ ಕೆಲವು ಕಾರ್ಖಾನೆಯವರು 2750 ಹಾಗೂ 2800 ರೂ. ದರ ನೀಡುವುದಾಗಿ ಹೇಳಿದ್ದಾರೆ. ಆದರೆ, ರೈತರು ಒಗ್ಗಟ್ಟಿನಿಂದ ಕೇಳುತ್ತಿರುವ ದರಕ್ಕೆ ಒಪ್ಪಿಗೆ ನೀಡಿಲ್ಲ. ಹೀಗಾಗಿ ಆಕ್ರೋಶಗೊಂಡ ರೈತರು, ಹೋರಾಟ ತೀವ್ರಗೊಳಿಸಿದ್ದಾರೆ.