ಮುದಗಲ್ಲ: ಪಟ್ಟಣದ ಪೆಟ್ರೋಲ್ ಪಂಪ್ ಕ್ರಾಸ್ ನಿಂದ ಮೇಗಳಪೇಟೆ ದಾಟುವವರೆಗೆ ಸುಮಾರು ಮೂರುವರೆ ಕಿಮೀ ರಾಜ್ಯ ಹೆದ್ದಾರಿ ಸಂಪೂರ್ಣ ಹಳಾಗಿದ್ದು, ಪ್ರಯಾಣಿಕರು, ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಪಟ್ಟಣದೊಳಗೆ ಹಾದು ಹೋಗಿರುವ ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ಸರಕಾರದಿಂದ ನಗರೋತ್ಥಾನ ಮೂರನೇ ಹಂತದಲ್ಲಿ ಸಾಕಷ್ಟು ಅನುದಾನ ನಿಗದಿ ಮಾಡಿ ರಸ್ತೆ ಅಗಲೀಕರಣಕ್ಕೆ ಮತ್ತು ನಿರ್ಮಾಣಕ್ಕೆ ಮುಹೂರ್ತ ನಿಗದಿ ಮಾಡುವಷ್ಟರಲ್ಲಿ ಸರ್ಕಾರ ಅನುದಾನ ಹಿಂಪಡೆದ ಕಾರಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಪಟ್ಟಣದ ಹೊರಬಾಗದಲ್ಲಿ ರಾಜ್ಯಹೆದ್ದಾರಿ ದುರಸ್ತಿ ಮಾಡಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪಟ್ಟಣದಲ್ಲಿನ ರಸ್ತೆ ಪುರಸಭೆ ವ್ಯಾಪ್ತಿಗೆ ಬರುತ್ತದೆ ಎಂದು ಹೇಳುವ ಮೂಲಕ ತಮ್ಮ ಜವಾಬ್ದಾರಿಯಿಂದ ಜಾರಿಕೊಂಡಿದ್ದಾರೆ. ಪಟ್ಟಣದಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳು ಬಿದ್ದಿವೆ.
ಈ ಗುಂಡಿಗಳಿಗೆ ಪುರಸಭೆ ಎರಡ್ಮೂರು ಬಾರಿ ಮರಂ ಹಾಕಿ ತೇಪೆ ಹಚ್ಚುವ ಕಾರ್ಯ ಮಾಡಿದೆ. ಆದರೆ ದುರಸ್ತಿಗೆ ಮಾತ್ರ ಮುಂದಾಗಿಲ್ಲ.
ಧೂಳು: ರಾಜ್ಯ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳಿಗೆ ಪದೇ ಪದೇ ಮರಂ ಹಾಕುವುದರಿಂದ ಧೂಳಿನಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ವಾಹನಗಳು ವೇಗವಾಗಿ ಸಂಚರಿಸಿದರೆ ಧೂಳು ಏಳುತ್ತಿದೆ. ಜನರು ಮೂಗು ಮುಚ್ಚಿಕೊಂಡು, ಇಲ್ಲವೇ ಮೂಗಿಗೆ ಬಟ್ಟೆ ಕಟ್ಟಿಕೊಂಡು ಸಂಚರಿಸುವಂತಾಗಿದೆ. ಇನ್ನು ರಸ್ತೆ ಅಕ್ಕಪಕ್ಕದ ಅಂಗಡಿಗಳಲ್ಲಿನ ತಿಂಡಿ-ತಿನಿಸುಗಳು, ಹಣ್ಣು-ಹಂಪಲುಗಳ ಮೇಲೆ, ಹೋಟೆಲ್‌ನ ತಿಂಡಿಗಳ ಮೇಲೆ ಧೂಳು ಕುಳಿತುಕೊಳ್ಳುತ್ತಿದೆ. ಇಂತಹ ಪದಾರ್ಥಗಳನ್ನೇ ಮಾರಲಾಗುತ್ತಿದೆ. ಹೀಗಾಗಿ ಪುರಸಭೆಯಿಂದ ನಿತ್ಯ ರಸ್ತೆಗೆ ನೀರು ಸಿಂಪಡಿಸಿ ಧೂಳು ಏಳದಂತೆ ಕ್ರಮ ವಹಿಸಬೇಕು. ಇಲ್ಲವೇ ಬೇಗ ಹೆದ್ದಾರಿ ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹೆದ್ದಾರಿ ದುರಸ್ತಿ ಹಾಗೂ ಅಗಲೀಕರಣಕ್ಕೆ ನಿಗದಿಯಾಗಿದ್ದ ಅನುದಾನವನ್ನು ಸರಕಾರ ತಾಂತ್ರಿಕ ಕಾರಣದಿಂದ ಹಿಂದಕ್ಕೆ ಪಡೆದುಕೊಂಡಿದ್ದರಿಂದ ರಾಜ್ಯ ಹೆದ್ದಾರಿ ಕಾಮಗಾರಿ ತಡವಾಗಿದೆ.
ಟಿ.ನರಸಿಂಹಮೂರ್ತಿ,
ಮುಖ್ಯಾಧಿಕಾರಿ ಪುರಸಭೆ ಮುದಗಲ್ಲ
ಈ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರಾಜ್ಯ ಹೆದ್ದಾರಿ ಕಾಮಗಾರಿ ಕೈ ಬಿಡಲಾಗಿದೆ. ಸಂಬಂಧಿಸಿದವರು ಸರಕಾರದಿಂದ ಅನುದಾನ ತಂದು ಪಟ್ಟಣದಲ್ಲಿನ ಮೂರುವರೆ ಕಿ.ಮೀ.ಹೆದ್ದಾರಿ ದುರಸ್ತಿಗೆ ಮುಂದಾಗಬೇಕು.
ಗುಂಡಪ್ಪ ಗಂಗಾವತಿ,
ಪುರಸಭೆ ಸದಸ್ಯ