Advertisement

ಜಾನುವಾರು ಶೆಡ್‌ಗಾಗಿ ಅಲೆದಾಟ

03:15 PM Sep 25, 2019 | Naveen |

ದೇವಪ್ಪ ರಾಠೊಡ
ಮುದಗಲ್ಲ:
ಸಮೀಪದ ತಲೇಖಾನ ಗ್ರಾಪಂ ವ್ಯಾಪ್ತಿಯಲ್ಲಿನ ಮಹಾತ್ಮ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಡಿ ಜಾನುವಾರು ಶೆಡ್‌ ನಿರ್ಮಿಸಿಕೊಳ್ಳಲು ಅರ್ಹರು ತಾಲೂಕು ಮತ್ತು ಗ್ರಾಮ ಪಂಚಾಯಿತಿ ಕಾರ್ಯಾಲಯಗಳಿಗೆ ಅಲೆದಾಡುವಂತಾಗಿದೆ.

Advertisement

2019-20ನೇ ಸಾಲಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ತಲೇಖಾನ ಗ್ರಾಪಂ ವ್ಯಾಪ್ತಿಯ ಪ್ರತಿ ವಾರ್ಡ್‌ಗೆ ಅಧಿಕಾರಿಗಳು ತೆರಳಿ ಗ್ರಾಮ ಸಭೆ ನಡೆಸಿದ್ದರು. ಬೇಡಿಕೆ ಅನುಸಾರ ಜಾನುವಾರು
ಶೆಡ್‌ ಸೇರಿ ಇತರೆ ಕಾಮಗಾರಿ ಕುರಿತು ಚರ್ಚಿಸಿ ಠರಾವು ಪುಸ್ತಕದಲ್ಲಿ ನಮೂದಿಸಿಕೊಂಡು ಜನರಿಂದ ಸಹಿ ಪಡೆದಿದ್ದರು. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಯಿಂದ ಕಾಮಗಾರಿಗೆ ಅನುಮೋದನೆ ಪಡೆಯುವುದಾಗಿ ಹೇಳಿದ್ದರು. ಆದರೆ ಅಧಿಕಾರಿಗಳು ಬರಿ ಕೂಲಿಕಾರರು ನಿರ್ವಹಿಸುವ ಕೆರೆ, ನಾಲೆ ಹೂಳೆತ್ತುವ ಕಾಮಗಾರಿ ಸೇರಿದಂತೆ 2-3 ರಸ್ತೆ ನಿರ್ಮಾಣ ಕಾಮಗಾರಿಗೆ ಅನುಮೋದನೆ ಪಡೆದಿದ್ದಾರೆ.

ಉಳಿದಂತೆ ಕೃಷಿ ಹೊಂಡ, ಜಾನುವಾರು ಶೆಡ್‌, ಪ್ರವಾಹ ನಿಯಂತ್ರಣ, ತಡೆಗೋಡೆ, ಸಸಿ ನೆಡುವುದು, ತೋಟಗಾರಿಕೆ, ರೇಷ್ಮೆ, ಅರಣ್ಯೀಕರಣದಂತಹ ಕಾಮಗಾರಿ ನಮೂದಿಸದೆ ಕ್ರಿಯಾಯೋಜನೆಗೆ ಜಿಪಂ ಸಿಇಒರಿಂದ ಅನುಮೋದನೆ ಪಡೆಯಲಾಗಿದೆ.

ಈಗ ಜನರಿಗೆ ಅವಶ್ಯಕವಾಗಿರುವ ತೋಟಗಾರಿಕೆ, ರೇಷ್ಮೆ ಬೆಳೆ ನಾಟಿ, ಮಳೆ-ಬಿಸಿಲಿನಿಂದ ಜಾನುವಾರು ರಕ್ಷಿಸಿಕೊಳ್ಳು ಶೆಡ್‌ ನಿರ್ಮಾಣಕ್ಕೆ ಬೇಡಿಕೆ ಇಟ್ಟರೆ ನಿಮ್ಮ ಹೆಸರು ಕ್ರಿಯಾಯೋಜನೆಯಲ್ಲಿ ಇಲ್ಲ. ಅಂದಾಜು ಪತ್ರಿಕೆ ತಯಾರಿಸಲು ಬರುವುದಿಲ್ಲ ಎಂದು ನರೇಗಾ ಅಭಿಯಂತರ ಸತ್ಯನಾರಾಯಣ ಹೇಳುತ್ತಾರೆಂದು ಗ್ರಾಮಸ್ಥರು ದೂರಿದ್ದಾರೆ. ಇತ್ತ ತಾಪಂ ಅಧಿಕಾರಿಗಳಿಗೆ ವಿಚಾರಿಸಿದರೆ ಪ್ರತಿವರ್ಷ ಮುಕ್ತ ಕ್ರಿಯಾಯೋಜನೆ ತಯಾರಿಸಲಾಗುತ್ತಿತ್ತು. ಆದರೆ ಈ ಬಾರಿ ಕ್ರಿಯಾ ಯೋಜನೆಯಲ್ಲಿ ಮಂಜೂರಾಗಿರುವ ಕಾಮಗಾರಿಗಳನ್ನು ಮಾತ್ರ ಅನುಷ್ಠಾನಗೊಳಿಸುವಂತೆ ಜಿಲ್ಲಾ ಪಂಚಾಯಿತಿಯಿಂದ ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ಖಾತ್ರಿ ಕ್ರಿಯಾ ಯೋಜನೆಯಲ್ಲಿ ಇರುವ ಕಾಮಗಾರಿ ಮಾತ್ರ ಅನುಷ್ಠಾನ ಮಾಡಲಾಗುವುದು ಎಂದು ಹೇಳುತ್ತಾರೆ.

ಬಿಲ್‌ ಪಾವತಿಸಿಲ್ಲ: 2018-19ರಲ್ಲಿ ನಿರ್ಮಿಸಿಕೊಂಡ ಜಾನುವಾರು ಶೆಡ್‌ಗಳ ಕೂಲಿ ಹಣ ಹೊರತುಪಡಿಸಿ ಬಿಒಸಿ ಅನುದಾನವನ್ನು ಫಲಾನುಭವಿಗಳಿಗೆ ಪಾವತಿಸದೇ ಅಧಿ ಕಾರಿಗಳು ಸತಾಯಿಸುತ್ತಿದ್ದಾರೆ. ಅನುದಾನಕ್ಕಾಗಿ ತಾಪಂ ಅ ಧಿಕಾರಿಗಳ ಹತ್ತಿರ ಅಲೆಯುವಂತಾಗಿದೆ ಎಂದು ರಾಜು ವಸನಪ್ಪ, ಹನುಮಂತಪ್ಪ, ಅಮರೇಶ ದೂರಿದ್ದಾರೆ.

Advertisement

ಚುನಾಯಿತ ಪ್ರತಿನಿಧಿ ಗಳು ತಮ್ಮ ಹಿಂಬಾಲಕರು, ಬೆಂಬಲಿಗರ ಹೆಸರಲ್ಲಿ ಕಾಮಗಾರಿ ಬರೆಸುತ್ತಾರೆಂಬ ಕಾರಣಕ್ಕೆ ವಾರ್ಡ್‌ಗಳಲ್ಲಿ ಗ್ರಾಮಸಭೆ ನಡೆಸಿ ಜನರ ಮೂಲಕ ಕಾಮಗಾರಿ ಬರೆಸಿಕೊಳ್ಳುವ ಅಧಿಕಾರಿಗಳು ಗ್ರಾಮಸಭೆ ಠರಾವುದಲ್ಲಿ ನಮೂದಿಸಿದ ಕಾಮಗಾರಿಗಳಿಗೆ ಅನುಮೋದನೆ ಪಡೆಯದಿರುವುದು ಹಲವು ಸಂಶಯಕ್ಕೆಡೆ ಮಾಡಿದೆ. ಸಂಬಂಧಿಸಿದ ಅಧಿಕಾರಿಗಳು ಗ್ರಾಪಂಗೆ ಭೇಟಿ ನೀಡಿ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next