Advertisement

ಮುದಗಲ್‌ ಠಾಣೆ ಪಿಎಸ್‌ಐ ಅಮಾನತಿಗೆ ಒತ್ತಾಯ

03:47 PM Nov 18, 2021 | Team Udayavani |

ರಾಯಚೂರು: ವ್ಯಕ್ತಿ ಮೇಲೆ ಹಲ್ಲೆಗೈದ ಆರೋಪಿಗಳ ವಿರುದ್ಧ ದೂರು ನೀಡಿದರೂ ಸ್ವೀಕರಿಸಲು ವಿಳಂಬ ಮಾಡಿದ ಮುದಗಲ್‌ ಠಾಣೆ ಪಿಎಸ್‌ಐ ಡಾಕೇಶರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು.

Advertisement

ಈ ಕುರಿತು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಲಿಂಗಸುಗೂರು ತಾಲೂಕಿನ ಕಿಲಾರಟ್ಟಿಯಲ್ಲಿ ದುರುಗನಗೌಡ ಹಾಗೂ ಇತರೇ 9 ಜನರು ಸೇರಿ ಬೈಲಪ್ಪ ಎನ್ನುವವರನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಈ ಕುರಿತು ಬೈಲಪ್ಪ ಮುದಗಲ್‌ ಠಾಣೆಗೆ ಹೋಗಿ ದೂರು ನೀಡಲು ಮುಂದಾದರೆ ಪಿಎಸ್‌ಐ ಡಾಕೇಶ ದೂರು ದಾಖಲಿಸದೆ ರಾಜಕೀಯ ಒತ್ತಡಕ್ಕೆ ಮಣಿದು ರಾಜಿ ಸಂಧಾನ ಮಾಡಿಕೊಳ್ಳುವಂತೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.

ಥಳಿತದಿಂದ ಗಾಯಗೊಂಡ ಬೈಲಪ್ಪ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ದಲಿತ ಸಂಘಟನೆಗಳ ಮುಖಂಡರ ಒತ್ತಾಯದ ಮೇರೆಗೆ ನ.15ರ ಸಂಜೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಿಎಸ್‌ಐ ಡಾಕೇಶ ಅವರು ಮಾಜಿ ಶಾಸಕ ಮಾನಪ್ಪ ವಜ್ಜಲ್‌, ಹನುಮಂತಪ್ಪ ಕಂದಗಲ್‌, ಗುಂಡಪ್ಪ ಸಾಹುಕಾರ ಅವರ ವಿರುದ್ಧ ದೂರು ದಾಖಲಿಸಲು ವಿಳಂಬ ಮಾಡಿದ್ದಾರೆ. ಪಿಎಸ್‌ಐ ಕರ್ತವ್ಯ ಲೋಪವೆಸಗಿದ್ದು, ದಲಿತರಿಗೆ ರಕ್ಷಣೆ ನೀಡಲು ವಿಫಲರಾಗಿದ್ದಾರೆ. ಅವರನ್ನು ಕೂಡಲೇ ಅಮಾನತು ಮಾಡುವಂತೆ ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ರವೀಂದ್ರನಾಥ ಪಟ್ಟಿ, ಸದಸ್ಯರಾದ ಎಂ.ವಸಂತಕುಮಾರ್‌, ಎಸ್‌.ಪ್ರಸಾದ, ಯಲ್ಲಪ್ಪ ಅರಳಿಬೆಂಚಿ, ಶರಣಬಸವ ಅಸ್ಕಿಹಾಳ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next