ಮುದ್ದೇಬಿಹಾಳ: ಈ ಭಾಗದಲ್ಲೇ ಪ್ರಥಮ ಎನ್ನಿಸಿಕೊಂಡಿರುವ ಅಪ್ರತಿಮ ದೇಶಭಕ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಮೂರ್ತಿ ಅನಾವರಣ ಕಾರ್ಯಕ್ರಮ ಮುದ್ದೇಬಿಹಾಳದಿಂದ 5 ಕಿ.ಮೀ. ಅಂತರದಲ್ಲಿ ನಾಲತವಾಡ ರಸ್ತೆಯಲ್ಲಿರುವ ಕವಡಿಮಟ್ಟಿ ಗ್ರಾಮದಲ್ಲಿ ಮಾ. 15ರಂದು ಅದ್ಧೂರಿಯಾಗಿ ನಡೆಸಲು ಸಕಲ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಸಂಗೊಳ್ಳಿ ರಾಯಣ್ಣ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಬಸವರಾಜ ಹೊಕ್ರಾಣಿ, ಸಂಚಾಲಕರಾದ ಸಂಗಮೇಶ ವಾಲೀಕಾರ, ಚಂದಾಲಿಂಗ ಹಂಡರಗಲ್ಲ ತಿಳಿಸಿದ್ದಾರೆ.
ಇಲ್ಲಿನ ಹುಡ್ಕೋದ ಹೇಮರಡ್ಡಿ ಮಲ್ಲಮ್ಮ ವೃತ್ತದ ಬಳಿ ಇರುವ ಮದರಿ ಕಾಂಪ್ಲೆಕ್ಸ್‌ನ ಸಂಘದ ಕಚೇರಿಯಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷಾತೀತವಾಗಿ, ಜಾತ್ಯತೀತವಾಗಿ ನಡೆಯಲಿರುವ ಕಾರ್ಯಕ್ರಮಕ್ಕೆ ಅಂದಾಜು 15,000 ಜನ ಸೇರುವ ನಿರೀಕ್ಷೆ ಇದೆ. ಎಲ್ಲ ಸಮಾಜದ, ರಾಜಕೀಯ ಪಕ್ಷಗಳ ಗಣ್ಯರನ್ನು ಆಹ್ವಾನಿಸಲಾಗಿದೆ. ದಿನಪೂರ್ತಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಕವಡಿಮಟ್ಟಿಯ ಸಮಸ್ತ ಜನತೆ ಮತ್ತು ಕುರುಬರ ಸಂಘದ ಆಶ್ರಯದಲ್ಲಿ ತಮ್ಮ (ಮದರಿ) ಅಧ್ಯಕ್ಷತೆಯಲ್ಲಿ ಅಂದು ಬೆಳಗ್ಗೆ 10ಕ್ಕೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಮೂರ್ತಿ ಅನಾವರಣಗೊಳಿಸುವರು. ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ ಸಮಾರಂಭ ಉದ್ಘಾಟಿಸುವರು. ಸ್ಥಳೀಯ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ಮಾಜಿ ಸಚಿವ ಸಿ.ಎಸ್. ನಾಡಗೌಡ ಜ್ಯೋತಿ ಬೆಳಗಿಸುವರು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ, ಸಚಿವ ಭೈರತಿ ಬಸವರಾಜ, ಸಂಸದ ರಮೇಶ ಜಿಗಜಿಣಗಿ, ಕರ್ನಾಟಕ ರಾಜ್ಯ ಕುರಿ ಮೇಕೆ ಮಹಾಮಂಡಳದ ಅಧ್ಯಕ್ಷ ಪಂಡಿತರಾವ್ ಚಿದ್ರಿ, ರಾಜ್ಯ ಜೆಡಿಎಸ್ ಮಹಿಳಾ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ, ಮಾಜಿ ಸಚಿವರಾದ ಎಚ್. ವಿಶ್ವನಾಥ, ಎಚ್.ಎಂ.ರೇವಣ್ಣ, ಬಂಡೆಪ್ಪ ಖಾಶೆಂಪುರ, ಬಿ.ಬಿ.ಚಿಮ್ಮನಕಟ್ಟಿ, ಎಚ್.ವೈ.ಮೇಟಿ, ಆರ್.ಶಂಕರ್, ಎಂ.ಸಿ.ಮನಗೂಳಿ ಸೇರಿದಂತೆ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಸ್ಥಳೀಯ ಸಂಸ್ಥೆಯ ಹಾಲಿ, ಮಾಜಿ ಜನಪ್ರತಿನಿಧಿಗಳು, ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ, ಸಂಸ್ಥೆ, ಸಹಕಾರಿ ಪದಾಧಿ ಕಾರಿಗಳು, ಹಾಲುಮತ ಸಮಾಜದ ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ನಾಯಕರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ರಾಷ್ಟ್ರಪ್ರಶಸ್ತಿ ಪುರಸ್ಕಾರ ಪಡೆದ ಡಿವೈಎಸ್ಪಿ ಎಸ್.ಎಸ್. ಹುಲ್ಲೂರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಮೂರ್ತಿ ನಿರ್ಮಾತೃ ವಿಜಯ ಬಿಡದಿ, ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ ಸೇರಿದಂತೆ 35-40 ಸಾಧಕರು, ಗಣ್ಯರನ್ನು ಬಸನಗೌಡ ಪಾಟೀಲರ 10 ಎಕರೆ ವಿಶಾಲವಾದ ಜಮೀನಿನಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ. ಕಾರ್ಯಕ್ರಮಕ್ಕೂ ಮುನ್ನ ಎಲ್ಲ ಗಣ್ಯರನ್ನು ಡೊಳ್ಳು ಸಹಿತ ಸಕಲ ವಾದ್ಯಗಳೊಂದಿಗೆ ಸೋಮನಗೌಡರ ತೋಟದಿಂದ ಕಾರ್ಯಕ್ರಮ ಸ್ಥಳದವರೆಗೆ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ.
ಕಾರ್ಯಕ್ರಮಕ್ಕೆ ಬರುವವರಿಗೆ ಸಿಹಿ ಖಾದ್ಯ ಮಾದರಿ, ಅನ್ನಸಾಂಬಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಗ್ರಾಮದ ಯುವ ಮುಖಂಡ ಮುತ್ತು ಪೂಜಾರಿ ಮಾತನಾಡಿ, ಅಂದೇ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಯುವ ಬಳಗದಿಂದ ನಡೆಯಲಿದ್ದು ಮೂರ್ತಿ ಅನಾವರಣಕ್ಕೆ ಶ್ರಮಿಸಿದ ಎಲ್ಲ ಗಣ್ಯರನ್ನು, ಸಮಾಜದ ಹಿರಿಯರು, ಧುರೀಣರನ್ನು ಸನ್ಮಾನಿಸಿ ಅಭಿನಂದಿಸಲಾಗುತ್ತದೆ ಎಂದು ತಿಳಿಸಿದರು.
ಪ್ರಮುಖರಾದ ಎಚ್.ಟಿ. ಪೂಜಾರಿ, ಎಸ್.ಬಿ. ಬಾಚಿಹಾಳ, ಸಿದ್ದಣ್ಣ ಪೂಜಾರಿ, ಹನುಮಂತ ಹಂಡರಗಲ್ಲ, ಗೌಡಪ್ಪ ಹೊಕ್ರಾಣಿ, ಸಂಗಪ್ಪ ಮೇಲಿನಮನಿ, ಬೀರಪ್ಪ ಹೊಕ್ರಾಣಿ, ಬಸವಲಿಂಗಪ್ಪ ಮೇಟಿ, ಮಹಾದೇವ ಪೂಜಾರಿ, ರವಿ ಜಗಲಿ, ಸಂತೋಷ , ಹನುಮಂತ್ರಾಯ ದೇವರಳ್ಳಿ, ಶ್ರೀಶೈಲ ಹೂಗಾರ, ಬಿ.ಎಚ್. ಹಾಲಣ್ಣವರ್, ರಾಯಣ್ಣ ವಾಲೀಕಾರ ಸೇರಿದಂತೆ ಹಲವರು ಇದ್ದರು.