ಮುದ್ದೇಬಿಹಾಳ: ಪಟ್ಟಣದ ಹುಡ್ಕೋದ ಪಲ್ಲವಿ ಕಾಂಪ್ಲೆಕ್ಸ್ ನಲ್ಲಿರುವ ಯೂನಿಯನ್ ಬ್ಯಾಂಕ್ (ಹಿಂದಿನ ಕಾರ್ಪೋರೇಷನ್ ಬ್ಯಾಂಕ್) ಎಟಿಎಂ ದರೋಡೆ ಪ್ರಕರಣವನ್ನು ಮುದ್ದೇಬಿಹಾಳ ಪೊಲೀಸರು ಕೇವಲ ನಾಲ್ಕೇ ದಿನದಲ್ಲಿ ಭೇದಿಸಿ ಒಟ್ಟು 7 ಆರೋಪಿಗಳನ್ನು ಬಂಧಿಸಿದ್ದಾರೆ.
ದರೋಡೆಗೆ ಒಳಗಾದ 16 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡು ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಎಟಿಎಂ ದರೋಡೆ ಆಗಿರುವ ಘಟನೆ ನ.21 ರಂದು ಸಂಜೆ ಬೆಳಕಿಗೆ ಬಂದಿತ್ತು. ಎಟಿಎಂ ಇದ್ದ ಕೊಠಡಿಯ ಶಟರ್ಸ್‍ನ ಬಾಗಿಲ ಬೀಗ ಮುರಿದದ್ದು ಹೊರತು ಪಡಿಸಿದರೆ ಬೇರೆ ಯಾವುದೇ ಸುಳಿವು ಇರಲಿಲ್ಲ. ಎಟಿಎಂ ಯಂತ್ರಕ್ಕೆ ಧಕ್ಕೆಯೂ ಆಗಿರಲಿಲ್ಲ. ಆದರೆ ಅದರೊಳಗಿದ್ದ ಹಣ ಮಾತ್ರ ಮಾಯವಾಗಿತ್ತು. ಪ್ರಾರಂಭದಲ್ಲಿ ಈ ಪ್ರಕರಣ ಪೊಲೀಸರಿಗೆ ಸವಾಲೆನ್ನಿಸಿಕೊಂಡಿತ್ತು. ದರೋಡೆ ಹಿಂದೆ ಬ್ಯಾಂಕ್ ಸಿಬ್ಬಂದಿ ಕೈವಾಡ ಇರಬಹುದೆ ಎನ್ನುವ ಜಾಡಿನಲ್ಲಿ ತನಿಖೆ ನಡೆಸಿದಾಗ ಪ್ರಕರಣದ ಎಳೆ ಸಿಕ್ಕು ಅದನ್ನು ಹಿಂಬಾಲಿಸಿದಾಗ ಇಡೀ ಪ್ರಕರಣ ಬಯಲಿಗೆ ಬಂದಿದೆ.
ಇದೇ ಬ್ಯಾಂಕಿನಲ್ಲಿ ಹಿಂದೆ ಅಕೌಂಟಂಟ್ ಆಗಿದ್ದು ಈಗ ಬೇರೆ ಶಾಖೆಗೆ ವರ್ಗಾವಣೆಗೊಂಡಿರುವ ಮಹಿಳಾ ಸಿಬ್ಬಂದಿಯ ಪ್ರಿಯಕರ ಎ- 1 ಆರೋಪಿ ಎನ್ನುವುದು ಗೊತ್ತಾದ ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಆಕೆಯೂ ಸೇರಿ ಒಟ್ಟು ಏಳು ಆರೋಪಿಗಳನ್ನು ಬಲೆಗೆ ಕೆಡವಿದರು. ಎ-1 ಆರೋಪಿ ತನ್ನ ಪ್ರೇಯಸಿಯ ಮೋಬೈಲನಿಂದ ಕದ್ದಿದ್ದ ಎಟಿಎಂ ಸಿಕ್ರೇಟ್ ಕೋಡ್ ಬಳಸಿ, ಮೂವರು ಸ್ಥಳೀಯ ಗೊಲ್ಲರ ಯುವಕರು, ಓರ್ವ ಕಾರು ಚಾಲಕ, ಬ್ಯಾಂಕಿನ ಕಾವಲುಗಾರ ಹಾಗೂ ಇವರಿಗೆ ಸಹಕರಿಸಿದ ಒಟ್ಟು ಏಳು ಆರೋಪಿಗಳನ್ನು ಬಂಧಿಸಿದ್ದಾರೆ.
ಶನಿವಾರ ಮದ್ಯಾಹ್ನದ ನಂತರ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಟರ ಕಚೇರಿಗೆ ತೆರಳಿ ಆರೋಪಿಗಳ ಹೆಸರು ಬಹಿರಂಗಪಡಿಸಲು ಸಿದ್ದತೆ ನಡೆಸಿದ್ದಾರೆ. ಬಸವನ ಬಾಗೇವಾಡಿ ಡಿಎಸ್ಪಿ ಅರುಣಕುಮಾರ ಕೋಳೂರ, ಮುದ್ದೇಬಿಹಾಳ ಸಿಪಿಐ ಆನಂದ ವಾಘ್ಮೋಡೆ, ಮಹಿಳಾ ಪಿಎಸೈ ರೇಣುಕಾ ಜಕನೂರ, ಪ್ರೊಬೇಷನರಿ ಪಿಎಸೈ ದೀಪಾ ಮತ್ತು ಸ್ಥಳೀಯ ಠಾಣೆಯ ಕ್ರೈಂ ಮತ್ತು ಸಿವಿಲ್ ಪೊಲೀಸ್ ಸಿಬ್ಬಂದಿಯ ಕಾರ್ಯತತ್ಪರತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.