Advertisement

ಸೇಪ್ಟಿಕ್‌ ಟ್ಯಾಂಕ್‌ಗೆ ಇಲ್ಲ ಸೇಫ್ಟಿ

11:38 AM May 08, 2019 | |

ಮುದ್ದೇಬಿಹಾಳ: ಹಲವು ವರ್ಷಗಳ ಹಿಂದೆ ಹುಡ್ಕೋ ಕಾಲೋನಿ ಎಂದಾಕ್ಷಣ ಮುದ್ದೇಬಿಹಾಳ ಜನತೆಗೆ ಸ್ವಚ್ಛತೆ ಕಂಡು ಬರುತ್ತಿತ್ತು. ಆದರೆ ಇಡಿ ಕಾಲೋನಿಯ ಶೌಚಾಲಯದ ಗಲೀಜು ನೀರನ್ನು ಇ-ವೇಸ್ಟ್‌ ಸಂಗ್ರಹಣಾ ಕೊಠಡಿ ನಿರ್ವಹಣೆ ಇಲ್ಲದೇ ನರ ಬಲಿಗಾಗಿ ಕಾಯುತ್ತಿದೆ. ಇದಕ್ಕೆ ಪುರಸಭೆ ಅಧಿಕಾರಿಗಳ ನಿರ್ಲಕ್ಷವೇ ಕಾರಣವಾಗಿದೆ.

Advertisement

ಹೌದು, ಕರ್ನಾಟಕ ಗೃಹ ಮಂಡಳಿ ಇಲಾಖೆ ಮನೆ ನಿರ್ಮಿಸಿ ಜನರಿಗೆ ನೀಡಿ ಅದರ ನಿರ್ವಹಣೆಯನ್ನು ಸ್ಥಳೀಯ ಪುರಸಭೆಗೆ ಒಪ್ಪಿಸಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹುಡ್ಕೋ ಮನೆಗಳ ವೇಸ್ಟ್‌ ಸಂಗ್ರಹಣೆ ಇದ್ದರೂ ಇಲ್ಲದಂತಾಗಿದೆ. ಅಲ್ಲದೇ ಸಂಗ್ರಹಣಾ ಕೊಠಡಿಯಲ್ಲಿರುವ ಟ್ಯಾಂಕ್‌ಗಳಿಗೆ ಯಾವುದೇ ರಕ್ಷಣೆ ಇಲ್ಲದೇ ಯಾವ ಸಂದರ್ಭದಲ್ಲಿ ಯಾರು ಅಪಘಾತಕ್ಕೆ ಒಳಗಾಗುತ್ತಾರೊ ತಿಳಿಯದಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಹುಡ್ಕೋ ಕಾಲೋನಿಯಲ್ಲಿರುವ ಶೌಚಾಲಯದ ಇ-ವೇಸ್ಟ್‌ ಸಂಗ್ರಣವನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಸಂಗ್ರಹವಾಗುವ ಗಲೀಜು ನೀರನ್ನು ಶುದ್ಧೀಕರಿಸಿ ಮತ್ತೆ ಅದನ್ನು ಅಲ್ಲಿನ ಉದ್ಯಾನವನಗಳಿಗೆ ಇಲ್ಲವೆ ಚರಂಡಿಗೆ ಬಿಡುವ ಉದ್ದೇಶ ಇದರದ್ದಾಗಿದೆ. ಆದರೆ ಪುರಸಭೆ ಅಧಿಕಾರಿಗಳು ಮಾತ್ರ ಇದರ ಬಗ್ಗೆ ಕಾಳಜಿ ವಹಿಸದೇ ನಿರ್ಲಕ್ಷಿಸುತ್ತಿದ್ದಾರೆ.

ನರ ಬಲಿಗೆ ಕಾದಿರುವ ಇ-ವೇಸ್ಟ್‌ ಟ್ಯಾಂಕ್‌ಗಳು: ಇ-ವೇಸ್ಟ್‌ ಸಂಗ್ರಹಣಾ ಕೊಠಡಿಯಲ್ಲಿ ಸುಮಾರು 8 ಸೇಪ್ಟಿಕ್‌ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಒಂದೇ ಒಂದು ಟ್ಯಾಂಕಿನ ಬಾಗಿಲು ಮುಚ್ಚಿಲ್ಲ. ಅಲ್ಲದೇ ಇದೇ ಸಂಗ್ರಹಣಾ ಕೊಠಡಿ ಪಕ್ಕದಲ್ಲಿ ನಲ್ಲಿಯಲ್ಲಿ ಬೆಳಗ್ಗೆಯಿಂದಲೂ ಸುಮಾರು ಯುವಕರು ನೀರನ್ನು ತೆಗೆದುಕೊಳ್ಳಲು ಬರುತ್ತಾರೆ. ಆಯ ತಪ್ಪಿ ಟ್ಯಾಂಕಿನಲ್ಲಿ ಬಿದ್ದರೆ ಅವರ ದೇಹವೂ ಸಿಗಲಾರದ ಪರಿಸ್ಥಿತಿ ಇದೆ. ಸೇಪ್ಟಿಕ್‌ ಟ್ಯಾಂಕ್‌ಗೆ ಸೇಫ್ಟಿನೇ ಇಲ್ಲದಂತಾಗಿದೆ.

ರಕ್ಷಣಾ ಗೋಡೆ ನಿರ್ಮಿಸಿ: ಹುಡ್ಕೋ ಕಾಲೋನಿಯಲ್ಲಿರುವ ಇ-ವೇಸ್ಟ್‌ ಸಂಗ್ರಹಣಾ ಕೊಠಡಿ ಸುತ್ತಲೂ ಮೊದಲು ರಕ್ಷಣಾ ಗೋಡೆಯನ್ನು ನಿರ್ಮಿಸಬೇಕಿದೆ. ಇದರಿಂದ ಸೇಪ್ಟಿಕ್‌ ಟ್ಯಾಂಕಿನ ಹತ್ತಿರ ಜನರು ಸುಳಿಯದಂತಾಗುತ್ತದೆ. ನಂತರ ಇ-ವೇಸ್ಟ್‌ ಸಂಗ್ರಹಣ ಕೊಠಡಿಯನ್ನು ಸ್ವಚ್ಛಗೊಳಿಸಬೇಕೆಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

Advertisement

ಮಾಹಿತಿ ಇಲ್ಲದ ಮುಖ್ಯಾಧಿಕಾರಿ: ಹುಡ್ಕೋ ಕಾಲೋನಿಯನ್ನು ಗೃಹ ಮಂಡಳಿಯವರು ಯಾವ ವರ್ಷದಲ್ಲಿ ಪುರಸಭೆಗೆ ಹಸ್ತಾತರಿಸಲಾಗಿದೆ ಎಂದು ಸಾರ್ವಜನಿಕರು ಕೇಳಿದರೆ ಇಲ್ಲಿನ ಪುರಸಭೆ ಮುಖ್ಯಾಧಿಕಾರಿಗಳು ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಅನೈತಿಕ ತಾಣ: ಇ-ವೇಸ್ಟ್‌ ಕೊಠಡಿಯಲ್ಲಿ ಯಾರೂ ಇಲ್ಲದ ಕಾರಣ ನಿತ್ಯವೂ ರಾತ್ರಿ ವೇಳೆಯಲ್ಲಿ ಪುಢಾರಿಗಳಿಗೆ ಇದು ಅನೈತಿಕ ಚಟುವಟಿಕೆ ನಡೆಸಲು ಸುಭದ್ರವಾದ ತಾಣವಾಗಿ ಪರಿಣಮಿಸಿದೆ. ಕೊಠಡಿಯೊಳಗೆ ಕಾಲಿಟ್ಟರೆ ಮದ್ಯದ ಬಾಟಲಿ ಮತ್ತು ಸಿಗರೇಟ್ ಬಿಟ್ಟರೇ ಬೆರೇನೂ ಕಾಣುವುದೇ ಇಲ್ಲಾ ಎಂದು ಪ್ರಜ್ಞಾವಂತ ನಾಗರಿಕರು ಆರೋಪಿಸಿದ್ದಾರೆ.

ನನಗೆ ಇಲ್ಲಿವರೆಗೂ ಅಧಿಕಾರವನ್ನೆ ನೀಡಿಲ್ಲ. ಇದರಿಂದ ಹುಡ್ಕೋ ಕಾಲೋನಿ ಅಭಿವೃದ್ಧಿಯ ಸಮಯ ವಿಳಂಬವಾಗುತ್ತಿದೆ. ಹುಡ್ಕೋದಲ್ಲಿರುವ ಇ-ವೇಸ್ಟ್‌ ಕೊಠಡಿ ಬಗ್ಗೆ ಈಗಾಗಲೇ ಪುರಸಭೆ ಮುಖ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಕೂಡಲೇ ಕ್ರಮ ಕೈಗೊಳ್ಳಲು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ.
•ಸಂಗಮ್ಮ ದೇವರಳ್ಳಿ, ಪುರಸಭೆ ಸದಸ್ಯೆ

ಇ-ವೇಸ್ಟ್‌ ಕೊಠಡಿ ಬಗ್ಗೆ ಸಾಕಷ್ಟು ಬಾರಿ ಪುರಸಭೆ ಕಾರ್ಯಾಲಯಕ್ಕೆ ದೂರು ನೀಡಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇಲ್ಲಿನ ಟ್ಯಾಂಕಿನ ಮೇಲೆ ಮುಚ್ಚಳವಿಲ್ಲದಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಇದರಲ್ಲಿ ಯಾರಾದರೂ ಬಿದ್ದರೆ ಯಾರಿಗೂ ತಿಳಿಯುವುದಿಲ್ಲ. ಟ್ಯಾಂಕಿನಿಂದ ಬರುವ ವಾಸನೆಯಲ್ಲಿ ದೇಹದ ವಾಸನೆಯೂ ಹರಡುವುದಿಲ್ಲ. ಅಂತಹ ಸ್ಥಿತಿ ಬಂದಿದೆ.
•ಬಸವರಾಜ ನಂದಿಕೇಶ್ವರಮಠ,
ಅಧ್ಯಕ್ಷ ನಗರಾಭಿವೃದ್ಧಿ ಯುವ ಹೋರಾಟ ಸಮಿತಿ, ಮುದ್ದೇಬಿಹಾಳ

ಇ-ವೇಸ್ಟ್‌ನಲ್ಲಿರುವ ಸೇಪ್ಟಿಕ್‌ ಟ್ಯಾಂಕ್‌ ಮೇಲೆ ಹಾಕಿದ ಮುಚ್ಚಳಗಳನ್ನು ಕದಿಯಲಾಗುತ್ತಿದೆ. ಅಲ್ಲಯ ಜನರೇ ಈ ಕೆಲಸ ಮಾಡುತ್ತಿದ್ದಾರೆ. ಪ್ರತಿ ಬಾರಿಯೂ ಅದರ ಮೇಲೆ ಮುಚ್ಚಿದ ಕಲ್ಲುಗಳನ್ನು ಕದ್ದರೆ ನಾವೇನು ಮಾಡೊದು. ಈಗ ಮತ್ತೆ ಕಲ್ಲು ಹಾಕಿಸುತ್ತೇನೆ.
ಎಸ್‌.ಎಫ್‌. ಈಳಗೇರ,
ಮುಖ್ಯಾಧಿಕಾರಿ ಪುರಸಭೆ, ಮುದ್ದೇಬಿಹಾಳ

ಶಿವಕುಮಾರ ಶಾರದಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next