Advertisement

ಕಳಪೆ ಬೆಲ್ಲ ಮಾರಾಟ ಪರಿಶೀಲನೆ

03:55 PM Nov 25, 2019 | Naveen |

ಮುದ್ದೇಬಿಹಾಳ: ಕುದಿಸಿದಾಗ ಕಪ್ಪು ಬಣ್ಣಕ್ಕೆ ತಿರುಗಿದ ಕಳಪೆ ಗುಣಮಟ್ಟದ ಬೆಲ್ಲ ಮಾರಾಟ ಮಾಡಿದ್ದ ಇಲ್ಲಿನ ಬಸವೇಶ್ವರ ವೃತ್ತದಲ್ಲಿರುವ ರಾಜಸ್ತಾನ ಸೇಡಜಿಗೆ ಸೇರಿದ ಮಹಾಲಕ್ಷ್ಮೀ ಕಿರಾಣಿ ಅಂಗಡಿ ಮೇಲೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಅಧಿ ಕಾರಿ ಶಂಕರಗೌಡ ಕಂತಲಗಾಂವಿ ರವಿವಾರ ದಾಳಿ ನಡೆಸಿ ಕಳಪೆ ಆರೋಪ ಕೇಳಿಬಂದ ಬೆಲ್ಲವನ್ನು ಸೀಜ್‌ ಮಾಡಿದ್ದಾರೆ. ಜೊತೆಗೆ ಬೆಲ್ಲ ಮಾರಾಟ ಮಾಡಿದ ಅಂಗಡಿಕಾರ, ಪೂರೈಕೆದಾರ ಹಾಗೂ ಮಂಡ್ಯದ ಸಗಟು ಪೂರೈಕೆದಾರರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

Advertisement

ಮುದ್ದೇಬಿಹಾಳ ತಾಲೂಕಿನ ಕೆಸಾಪುರ ಗ್ರಾಮದ ಬಸಮ್ಮ ಬೋಯೇರ ಅವರು ಈ ಅಂಗಡಿಯಲ್ಲಿ ಖರೀದಿಸಿದ್ದ ಬೆಲ್ಲವನ್ನು ಸಜ್ಜಕ ಮಾಡಲು ಕುದಿಸತೊಡಗಿದಾಗ ನೀರು ಕಪ್ಪು ಬಣ್ಣಕ್ಕೆ ತಿರುಗಿ ಆತಂಕ ಉಂಟು ಮಾಡಿ ಬೆಲ್ಲದ ಗುಣಮಟ್ಟದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರ ಕುರಿತು ಉದಯವಾಣಿ ರವಿವಾರ ವರದಿ ಪ್ರಕಟಿಸಿತ್ತು. ಬಸಮ್ಮ ಅವರ ಪುತ್ರ ಗದ್ದೆಪ್ಪ ಕೂಡ ಈ ಬಗ್ಗೆ ಶನಿವಾರ ರಾತ್ರಿಯೇ ಅ ಧಿಕಾರಿಗೆ ದೂರನ್ನೂ ನೀಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿ ರವಿವಾರ ರಜೆ ದಿನವಾಗಿದ್ದರೂ ಇಲ್ಲಿನ ಕಿರಾಣಿ ಅಂಗಡಿಗೆ ದೂರುದಾರ ಗದ್ದೆಪ್ಪ ಸಮೇತ ಆಗಮಿಸಿದ ಶಂಕರಗೌಡ ಅವರು ಗ್ರಾಹಕರಿಗೆ ಬೆಲ್ಲ ವಿತರಿಸುವುದನ್ನು ಸ್ಥಗಿತಗೊಳಿಸುವಂತೆ ಸೂಚಿಸಿ ಅಂಗಡಿಯಲ್ಲಿ ಉಳಿದಿದ್ದ ಅಂದಾಜು ಒಂದು ಕ್ವಿಂಟಲ್‌ ಬೆಲ್ಲ ಸೀಜ್‌ ಮಾಡಿ ಮುಂದಿನ ಆದೇಶ ಆಗುವ ತನಕ ಅದನ್ನು ಮಾರಾಟ ಮಾಡದಂತೆ ಅಂಗಡಿ ಮಾಲೀಕ ಹನುಮಾನ್‌ಜಿ ರಾಜಪುರೋಹಿತಗೆ ಸೂಚಿಸಿದರು.

ಕಳಪೆ ಆರೋಪ ಕೇಳಿಬಂದ ಬೆಲ್ಲದ ಸ್ಯಾಂಪಲ್‌ ಅನ್ನು 4 ಪ್ಯಾಕೇಟುಗಳಲ್ಲಿ ಸಂಗ್ರಹಿಸಿ ಅದರಲ್ಲಿ ಒಂದನ್ನು ಗುಣಮಟ್ಟ ಪರಿಶೀಲನೆಗೆ ಪ್ರಯೋಗಾಲಯಕ್ಕೆ ಕಳಿಸಲು ಕ್ರಮ ಕೈಗೊಂಡರು. ಮಾರಾಟಗಾರ ಹನುಮಾನ್‌ಜಿ ರಾಜಪುರೋಹಿತ, ಡೀಲರ್‌ ವಿ.ಕೆ. ದೇಶಪಾಂಡೆ ಮತ್ತು ಮಂಡ್ಯದ ಎಪಿಎಂಸಿಯಲ್ಲಿ ಬೆಲ್ಲವನ್ನು ರೈತರಿಂದ ಖರೀದಿಸಿ ಬೇರೆಯವರಿಗೆ ಮಾರಾಟ ಮಾಡಿದ ಮುಖ್ಯ ಡೀಲರ್‌ ಪೂರ್ಣಿಮಾ ಟ್ರೇಡಿಂಗ್‌ ಕಂಪನಿಯ ಮುಖ್ಯ ವ್ಯವಸ್ಥಾಪಕರಿಗೆ ನೋಟಿಸ್‌ ಜಾರಿ ಮಾಡಿದರು.

ಅಂಗಡಿಯಲ್ಲಿ ವಿಚಾರಣೆ ನಡೆಸುತ್ತಿದ್ದ ವೇಳೆ ಇಲ್ಲಿನ ಡೀಲರ್‌ ದೇಶಪಾಂಡೆ ಅವರನ್ನು ಸ್ಥಳಕ್ಕೆ ಕರೆಸಿ ಬೆಲ್ಲ ಎಲ್ಲಿಂದ ತರಿಸಿಕೊಂಡಿದ್ದೀರಿ ಎಂದು ವಿಚಾರಿಸಿ ಆ ಬಗ್ಗೆ ರಸೀದಿಯನ್ನು ವಶಕ್ಕೆ ಪಡೆದುಕೊಂಡರು. 3.35 ಲಕ್ಷ ಮೌಲ್ಯದ 10,746 ಕೆಜಿ ಬೆಲ್ಲ ತರಿಸಿಕೊಂಡಿದ್ದು ಅದನ್ನು ಕಿರುಕುಳ ಮಾರಾಟಗಾರರಿಗೆ ಪೂರೈಸಿದ್ದಾಗಿ ದೇಶಪಾಂಡೆ ಮಾಹಿತಿ ನೀಡಿದರು. ಅಂಗಡಿಕಾರ ರಾಜಪುರೋಹಿತ ಕೂಡ ಗುಣಮಟ್ಟದ ಬಗ್ಗೆ ತಮಗೆ ಮಾಹಿತಿ ಇಲ್ಲ. ದೇಶಪಾಂಡೆ ಅವರಿಂದ 3,960 ರೂ. ಹಣಕ್ಕೆ 120 ಕೆಜಿ ಬೆಲ್ಲ ಖರೀದಿಸಿದ್ದನ್ನು ತಿಳಿಸಿ ಆ ಬಗ್ಗೆ ರಸೀದಿ ಹಾಜರುಪಡಿಸಿದರು.

Advertisement

ಗುಣಮಟ್ಟದ ಬಗ್ಗೆ ಆರೋಪ ಬಂದಿದ್ದರಿಂದ ಅದು ಅಂತಿಮ ರೂಪ ಪಡೆಯುವರೆಗೂ ಆ ಬೆಲ್ಲವನ್ನು ಮಾರಾಟ ಮಾಡುವುದಿಲ್ಲ ಎಂದು ತಿಳಿಸಿದರು. ದಾಳಿ ಮುಕ್ತಾಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಂಕರಗೌಡ, ಬೆಲ್ಲದಲ್ಲಿ ಹೆಚ್ಚಿನ ಪ್ರಮಾಣದ ರಾಸಾಯನಿಕ ಬಳಸಿರುವ ಸಂಶಯ ಇದೆ. ಸ್ಯಾಂಪಲ್‌ ಅನ್ನು ಎಫ್‌ಎಸ್‌ಎಸ್‌ಎಐ ಮಾನದಂದಡ ಪ್ರಕಾರ ಗುಣಮಟ್ಟ ಖಚಿತಪಡಿಸಿಕೊಳ್ಳಲು ಪ್ರಯೋಗಾಲಯಕ್ಕೆ ಕಳಿಸಲಾಗುತ್ತದೆ. ಅಲ್ಲಿಂದ ವರದಿ ಬಂದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಬೆಲ್ಲ ಮಾನವನ ಆರೋಗ್ಯಕ್ಕೆ ಅಪಾಯಕಾರಿ ಎಂದು ವರದಿ ತಿಳಿಸಿದಲ್ಲಿ ಸಂಬಂಧಿಸಿದವರ ವಿರುದ್ಧ ಗಂಭೀರ ಸ್ವರೂಪದ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಇಂಥ ಬೆಲ್ಲದ ಮೂಲ ಕಂಡು ಹಿಡಿದು ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next