Advertisement

ಸಂಚಾರಿ ನಿಯಮ ಪಾಲಿಸಲು ಸಿಪಿಐ ಸಲಹೆ

03:21 PM Jan 12, 2020 | Naveen |

ಮುದ್ದೇಬಿಹಾಳ: ಪ್ರತಿಯೊಬ್ಬ ವಾಹನ ಚಾಲಕರು ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದಲ್ಲಿ ಅಪಘಾತಗಳನ್ನು ತಡೆಗಟ್ಟಬಹುದು ಎಂದು ಮುದ್ದೇಬಿಹಾಳ ಸಿಪಿಐ ಆನಂದ ವಾಗಮೋಡೆ ಹೇಳಿದರು.

Advertisement

ಇಲ್ಲಿನ ಬಸ್‌ ನಿಲ್ದಾಣ ಪಕ್ಕದಲ್ಲಿರುವ ಹಳೆ ಸಿಪಿಐ ಕಚೇರಿ ಆವರಣದಲ್ಲಿ ಶನಿವಾರ ಪೊಲೀಸ್‌ ಇಲಾಖೆ ವತಿಯಿಂದ ಏರ್ಪಡಿಸಿದ್ದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಾಹನ ಚಾಲಕರು ತಾವು ಚಲಾಯಿಸುವ ವಾಹನಕ್ಕೆ ಎಷ್ಟು ಪ್ರಯಾಣಿಕರನ್ನು ನಿಗದಿಪಡಿಸಲಾಗಿದೆಯೋ ಅಷ್ಟೇ ಜನರನ್ನು ಸಾಗಿಸಬೇಕು. ಮುಖ್ಯವಾಗಿ ಶಾಲಾ ಮಕ್ಕಳನ್ನು ಸಾಗಿಸುವವರು ಹೆಚ್ಚು ಜಾಗೃತರಾಗಿರಬೇಕು. ಒಂದು ವಾರದವರೆಗೆ ಈ ಕಾರ್ಯಕ್ರಮ ನಡೆಯಲಿದ್ದು ಪ್ರತಿ ದಿನ ಒಂದೊಂದು ರೀತಿಯಲ್ಲಿ, ಒಂದೊಂದು ಸ್ಥಳದಲ್ಲಿ ಅರಿವು ಮೂಡಿಸುವ ಪ್ರಯತ್ನಗಳನ್ನು ಇಲಾಖೆ ವತಿಯಿಂದ ನಡೆಸಲಾಗುತ್ತದೆ ಎಂದರು.

ಸಮಾರಂಭ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಡಿ. ಗಾಂಜಿ ಮಾತನಾಡಿ, ಜೀವನದಲ್ಲಿ
ಅನ್ನ, ಗಾಳಿ, ನೀರು ಇವೆಲ್ಲಕ್ಕಿಂತ ಹೆಚ್ಚಾಗಿ ಪ್ರಾಣ ಮುಖ್ಯ. ಇದನ್ನರಿತು ಚಾಲಕರು ಎಂದಿಗೂ ಸಹನೆ, ತಾಳ್ಮೆ ಕಳೆದುಕೊಳ್ಳಬಾರದು. ಪ್ರತಿಯೊಂದು ಸಂದರ್ಭವೂ ನಮ್ಮ ಕೈಯಲ್ಲಿ ಇರುತ್ತದೆ ಎಂದು ತಿಳಿದುಕೊಳ್ಳಬಾರದು. ಅತ್ಯಂತ ಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ಮೂಲಕ ರಸ್ತೆ ಅಪಘಾತ ತಡೆಗಟ್ಟಲು ಮುಂದಾಗಬೇಕು ಎಂದರು.

ಪಿಎಸೈ ಮಲ್ಲಪ್ಪ ಮಡ್ಡಿ ಮಾತನಾಡಿ, ವಾಹನ ಚಾಲಕರು ವಾಹನ ಚಲಾಯಿಸುವಾಗ ಯಾವುದೇ ಕಾರಣಕ್ಕೂ ಮೊಬೈಲ್‌ ಬಳಸಬಾರದು. ರಸ್ತೆ ನಿಯಮ ಉಲ್ಲಂಘಿಸಬಾರದು ಮತ್ತು ವಾಹನ ಚಾಲನಾ ಪರವಾನಗಿ, ವಾಹನದ ದಾಖಲೆಗಳನ್ನು ಕಡ್ಡಾಯವಾಗಿ ಜೊತೆಗಿಟ್ಟುಕೊಳ್ಳಬೇಕು ಎಂದರು. ಘಟಕ ವ್ಯವಸ್ಥಾಪಕ ರಾಹುಲ್‌ ಹೊನಸೂರೆ ಮಾತನಾಡಿ, ಸಪ್ತಾಹ ಆಚರಣೆಗಳು ಸಾರ್ಥಕಗೊಳ್ಳಬೇಕು. ಒಬ್ಬರ ಜೀವ ಅತ್ಯಮೂಲ್ಯ ಅನ್ನೋದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಚಾಲಕರು ಇನ್ನೊಬ್ಬರ ಜೀವ ಅಮೂಲ್ಯ ಎನ್ನುವುದನ್ನು ಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಬೇಕು ಎಂದರು.

Advertisement

ಖಾಸಗಿ ವಾಹನಗಳ ಚಾಲಕರು, ಮಾಲೀಕರ ಸಂಘದ ಅಧ್ಯಕ್ಷ ಬಾಂಬೇಗೌಡ ಬಿರಾದಾರ
ವೇದಿಕೆಯಲ್ಲಿದ್ದರು. ಹೆಲ್ಮೆಟ್‌ ಧರಿಸುವುದು, ಕುಡಿದು ವಾಹನ ಚಾಲನೆ ಮಾಡದಿರುವುದು, ಚಾಲನಾ ಪರವಾನಗಿ ಹೊಂದಿರುವುದು, ಗೂಡ್ಸ್‌ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸದಿರುವುದು, ವಾಹನ ಪಾರ್ಕಿಂಗ್‌ನಲ್ಲೇ ನಿಲುಗಡೆ ಮಾಡುವುದು, ನಿಗದಿಪಡಿಸಿದ ಅಳತೆ ನಂಬರ್‌ ಪ್ಲೇಟ್‌ ವಾಹನಗಳಿಗೆ ಅಳವಡಿಸುವುದು, ವಾಹನಗಳಿಗೆ ಕಡ್ಡಾಯವಾಗಿ ಇನ್ಸೂರೆನ್ಸ್‌ ಮಾಡಿಸುವುದು, ಶಾಲಾ ವಾಹನ ಇದ್ದರೆ ಎದ್ದು ಕಾಣುವಂತೆ ವಾಹನದ ಮೇಲೆ ಬರೆಸುವುದು ಸೇರಿ 16 ಮಹತ್ವದ ಸೂಚನೆಗಳಿರುವ ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಅವಘಡ ಸಂಭವಿಸಿದರೆ, ಸಂಭವಿಸುವ ಸಂಶಯ ಇದ್ದರೆ ಕೂಡಲೇ ಮುದ್ದೇಬಿಹಾಳ ಪೊಲೀಸ್‌ ಠಾಣೆ (ದೂ: 08356-220333), ಪಿಎಸೈ (9480804264), ಸಿಪಿಐ (9480804237)
ಅಥವಾ ವಿಜಯಪುರ ಪೊಲೀಸ್‌ ಕಂಟ್ರೋಲ್‌ ರೂಂ (ದೂ: 08352-250844) ಸಂಪರ್ಕಿಸುವಂತೆ ಕೋರಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next