Advertisement

ಸಾರ್ವಜನಿಕ ಆಸ್ತಿ ಅತಿಕ್ರಮಣ ತನಿಖೆ ನಡೆಸಲು ನಡಹಳ್ಳಿ ಸೂಚನೆ

04:32 PM Sep 11, 2019 | Naveen |

ಮುದ್ದೇಬಿಹಾಳ: ನಿಯಮ ಉಲ್ಲಂಘಿಸಿ ರಚನೆಯಾಗಿರುವ ಎನ್‌ಎ ಪ್ಲಾಟುಗಳ ಲೇಔಟ್ ಮರು ಪರಿಶೀಲನೆ ನಡೆಸಬೇಕು ಮತ್ತು ಪುರಸಭೆ ಸುಪರ್ದಿಯಲ್ಲಿರಬೇಕಿದ್ದ ಸಾರ್ವಜನಿಕ ಆಸ್ತಿಯನ್ನು ಅತಿಕ್ರಮಣ ಮಾಡಿದ್ದರ ಕುರಿತು ತನಿಖೆ ನಡೆಸಿ ಅಂಥ ಆಸ್ತಿಗಳನ್ನು ಮರಳಿ ಪುರಸಭೆ ವಶಕ್ಕೆ ಪಡೆದುಕೊಳ್ಳಬೇಕು ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರು ಪುರಸಭೆ ಆಡಳಿತಾಧಿಕಾರಿಯೂ ಆಗಿರುವ ವಿಜಯಪುರ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಸೂಚನೆ ನೀಡಿದ್ದಾರೆ.

Advertisement

ಇಲ್ಲಿನ ಪುರಸಭೆ ಸಭಾ ಭವನದಲ್ಲಿ ನಡೆದ ಪುರಸಭೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಜನರಿಗೆ ಮೂಲಸೌಕರ್ಯ ಒದಗಿಸುವಲ್ಲಿ ಪುರಸಭೆ ಅಕಾರಿಗಳು ವಿಫಲರಾಗಿರುವುದು ಈಚೆಗೆ ನಡೆಸಿದ ವಾರ್ಡ್‌ ಭೇಟಿ ಕಾರ್ಯಕ್ರಮದಲ್ಲಿ ಬೆಳಕಿಗೆ ಬಂದಿದೆ. ಅನೇಕ ಕಡೆ ಉತ್ತಮ ಸಂಪರ್ಕ ರಸ್ತೆ, ಚರಂಡಿ ಸೇರಿ ಮೂಲಸೌಕರ್ಯಗಳ ಕೊರತೆ ಕಂಡು ಬಂದಿದೆ. ಜನ ಪುರಸಭೆ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎಂದು ತಿಳಿಸಿದರು.

ನಿಯಮದ ಪ್ರಕಾರ ಶೇ. 40-ಶೇ. 60 ಮಾದರಿಯಲ್ಲಿ ಲೇಔಟ್‌ಗಳು ಅಭಿವೃದ್ಧಿ ಹೊಂದಬೇಕು. ಈಗಾಗಲೇ ಅಸ್ತಿತ್ವಕ್ಕೆ ಬಂದಿರುವ ಲೇಔಟ್‌ಗಳು ಇದನ್ನು ಪಾಲನೆ ಮಾಡಿಲ್ಲ. ಸಾರ್ವಜನಿಕ ಉದ್ದೇಶಕ್ಕೆ, ಗಾರ್ಡನ್‌ಗೆ ಬಿಟ್ಟಿರುವ ನಿವೇಶನಗಳನ್ನು ಹಲವರು ಕಬಳಿಸಿದ್ದರೂ ಪುರಸಭೆ ಆಡಳಿತ ಇದನ್ನು ತಡೆಗಟ್ಟಲು ಮುಂದಾಗಿಲ್ಲದಿರುವುದು ಬೆಳಕಿಗೆ ಬಂದಿದೆ ಎಂದರು.

ಇಲ್ಲಿನ ಲೇಔಟ್‌ಗಳನ್ನು ನೋಡಿದರೆ ತಲೆ ಕೆಡುತ್ತೆ. ಅಂಥ ಪರಿಸ್ಥಿತಿ ಇದೆ. ರಸ್ತೆಗಳು ಕಿರಿದಾಗಿವೆ. ಚರಂಡಿ ವ್ಯವಸ್ಥೆ ಸರಿ ಇಲ್ಲ. ಡ್ರೈನೇಜ್‌ ಪದ್ಧತಿ ಸರಿಪಡಿಸಬೇಕು. ಡ್ರೈನೇಜ್‌ಗೆ ಎಂಡ್‌ ತೋರಿಸದಿದ್ದರೆ ಪ್ರಯೋಜನ ಇಲ್ಲ. ಈ ಬಗ್ಗೆ ವೈಜ್ಞಾನಿಕ ಸಮೀಕ್ಷೆ ಆಗಬೇಕು. ಪ್ರತಿಯೊಂದು ಲೇಔಟ್ ಚಕ್‌ ಮಾಡಬೇಕು. ಕನೆಕ್ಟಿವ್‌ ರೋಡ್‌ ಇರಬೇಕು. ಎಲ್ಲ ಅವ್ಯವಸ್ಥೆ ಸರಿಪಡಿಸಲು ಪುರಸಭೆಯಿಂದ ಸಂಪೂರ್ಣ ವರದಿ ತರಿಸಿಕೊಂಡು ವ್ಯವಸ್ಥಿತವಾಗಿ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದರು.

ಎಲ್ಲ ಅವ್ಯವಸ್ಥೆ ಸರಿಪಡಿಸಬೇಕು ಅನ್ನೋದನ್ನ ತೀರ್ಮಾನಿಸಿಯೇ ಎಸಿ ಅಧ್ಯಕ್ಷತೆಯಲ್ಲಿ ಚರ್ಚಿಸಲು ಡಿಸಿ ಮೇಲೆ ಒತ್ತಡ ಹೇರಿ ಸಭೆ ಆಯೋಜಿಸಿದ್ದೇನೆ. ಹೊಸ ಸರ್ಕಾರ ಬಂದ ಮೇಲೆ ಹಲವು ಕಾಮಗಾರಿ ಮಂಜೂರಾಗಿವೆ. ಇನ್ನೊಂದು ತಿಂಗಳಲ್ಲಿ ಮತ್ತೆ ಸಂಬಂಧಿಸಿದ ಎಲ್ಲ ಹಂತದ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಹೊಸ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಹಿಂದೆ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಬೇಕು ಎಂದು ಸಭೆ ನಡೆಸುತ್ತಿಲ್ಲ. ಇನ್ನು ಮುಂದೆ ಹಿಂದಿನ ತಪ್ಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ಕೊಡಲು ಸಭೆ ನಡೆಸಲಾಗುತ್ತಿದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, 2005-06ನೇ ಸಾಲಿನಿಂದ ಇಲ್ಲಿವರೆಗೆ ಅಂದಾಜು 34 ಎನ್‌ಎ ಪ್ರಕರಣ ದಾಖಲಾಗಿವೆ. ಸಾರ್ವಜನಿಕ ಆಸ್ತಿ ಪುರಸಭೆಗೆ ಉಳಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಚರಂಡಿ, ಸಂಪರ್ಕ ರಸ್ತೆ, ಎನ್‌ಎ ಸೈಟು ಶೇ. 100 ಅಭಿವೃದ್ಧಿ ಆಗದೆ ಮಾರಾಟ ಮಾಡಿದ್ದು, ಈಗಾಗಲೇ ಮಾರಾಟಗೊಂಡಿರುವ ಆಸ್ತಿ, ನೀರಿನ ಕರ ಎಷ್ಟಿದೆ, ಎಷ್ಟು ವಸೂಲಾಗಿದೆ, ಪುರಸಭೆಗೆ ಎಷ್ಟು ಪ್ರಾಪರ್ಟಿ ಇದೆ, 14ನೇ ಹಣಕಾಸು ಕಾಮಗಾರಿ ಎಷ್ಟು ಪ್ರಗತಿ ಆಗಿದೆ. ಎಸ್ಸಿಪಿ ಟಿಎಸ್‌ಪಿ ಯೋಜನೆ ಅಡಿ ಏನೇನು ಸೌಲಭ್ಯ ಕೊಡಲಾಗಿದೆ ಎನ್ನುವುದು ಸೇರಿ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಿ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಎಸ್‌.ಎಫ್‌. ಈಳಗೇರ, ಸಿಬ್ಬಂದಿ ರಮೇಶ ಮಾಡಬಾಳ ಸೇರಿದಂತೆ ಕಚೇರಿಯ ಎಲ್ಲ ನೌಕರರು ಸಭೆಯಲ್ಲಿ ಪಾಲ್ಗೊಂಡು ತಮ್ಮ ವಿಭಾಗದ ಪ್ರಗತಿ ಮಾಹಿತಿ ನೀಡಿದರು. ಹಲವು ಬಾರಿ ಸಂಬಂಧಿಸಿದ ಸಿಬ್ಬಂದಿಗಳನ್ನು ಎಸಿ ಗೆಣ್ಣೂರ, ಶಾಸಕ ನಡಹಳ್ಳಿ ಅವರು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next