Advertisement

ಆರೋಗ್ಯಪೂರ್ಣ-ಸುವ್ಯವಸ್ಥೆಯೊಂದಿಗೆ ಪರೀಕ್ಷೆ ನಡೆಸಿ

05:49 PM Jun 10, 2020 | Naveen |

ಮುದ್ದೇಬಿಹಾಳ: ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಆರೋಗ್ಯಪೂರ್ಣವಾಗಿ, ಸುವ್ಯವಸ್ಥೆಯೊಂದಿಗೆ ನಡೆಸುವುದನ್ನು ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಚಾಲೆಂಜ್‌ ಆಗಿ ಸ್ವೀಕರಿಸಿ ಯಶಸ್ವಿಗೊಳಿಸಬೇಕು ಎಂದು ವಿಜಯಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪ್ರಸನ್ನಕುಮಾರ ಹೇಳಿದ್ದಾರೆ.

Advertisement

ಇಲ್ಲಿನ ಬಿಇಒ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ದಾನಿಗಳ ನೆರವಿನ ಹಸ್ತಾಂತರ ಹಾಗೂ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಪರೀಕ್ಷೆ ಸಂಘಟಿಸುವ ವಿಷಯದಲ್ಲಿ ಈಗಾಗಲೇ ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ. ಈ ಬಾರಿ ಅದು ಮರುಕಳಿಸದಂತೆ ಅತ್ಯಂತ ಎಚ್ಚರಿಕೆ ವಹಿಸಬೇಕು. ಈ ವರ್ಷದ ಪರೀಕ್ಷೆ ಕೋವಿಡ್ ಕಾರಣಕ್ಕಾಗಿ ಜಟಿಲವಾಗಿದ್ದು, ವಿಭಿನ್ನವಾಗಿರುತ್ತದೆ. ಇದೊಂದು ಜೀವಮಾನದ ಹೊಸ ಅನುಭವ ಆಗಲಿದೆ. ವಿದ್ಯಾರ್ಥಿಯ ಆರೋಗ್ಯ ಮತ್ತು ಪರೀಕ್ಷೆಯ ಸುವ್ಯವಸ್ಥೆಗೆ ಹೆಚ್ಚಿನ ಒತ್ತು ಕೊಡಬೇಕು ಎಂದರು.

ಪರೀಕ್ಷೆ ಬಗ್ಗೆ ಎಚ್ಚರ ಇರಲಿ, ಹೆದರಿಕೆ ಬೇಡ ಎನ್ನುವ ಸಂದೇಶವನ್ನು ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬ ಶಿಕ್ಷಕರು ತಲುಪಿಸಬೇಕು. ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ, ಹ್ಯಾಂಡ್‌ ಸ್ಯಾನಿಟೈಜ್‌ ಕಡ್ಡಾಯವಾಗಿರುವಂತೆ ನೋಡಿಕೊಳ್ಳಬೇಕು. ಹೈಕೋರ್ಟ್‌ ಮಾರ್ಗಸೂಚಿ ಅನುಸಾರವೇ ಪರೀಕ್ಷೆ ನಡೆಸಬೇಕು. ಇದುವರೆಗಿನ ಸುಳ್ಳು ಲೆಕ್ಕ ಬಿಟಿºಡಿ. ಈಗಲಾದರೂ ನೈಜತೆಗೆ ಒತ್ತು ಕೊಡಿ ಎಂದು ಮಾರ್ಮಿಕವಾಗಿ ಹೇಳಿದರು.

ಈ ಬಾರಿಯ ಪರೀಕ್ಷೆಯಲ್ಲಿ ಯಾರೂ ಶಿಸ್ತು ಕ್ರಮಕ್ಕೆ ಅವಕಾಶವಾಗದ ರೀತಿಯಲ್ಲಿ ಕೆಲಸ ಮಾಡಬೇಕು. ಶಿಕ್ಷಣ ಇಲಾಖೆ ಮತ್ತು ಜಿಲ್ಲೆಯ ಮುಖ ಕೆಳಗೆ ಆಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಮಾನವನ್ನು ರಾಜ್ಯಮಟ್ಟದಲ್ಲಿ ಹರಾಜು ಹಾಕಬೇಡಿ. ಮುಂಜಾಗ್ರತೆ ವಹಿಸಿ. ಇತಿಮಿತಿಯಲ್ಲಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ತಾಳಿಕೋಟೆಯಲ್ಲೇ ಅಧಿಕ ನಕಲು ಆರೋಪ: ಮುದ್ದೇಬಿಹಾಳದ ವಿಬಿಸಿ ಪರೀಕ್ಷಾ ಕೇಂದ್ರಕ್ಕೆ ಕಂಪೌಂಡ್‌ ಇಲ್ಲ ಎಂದು ಗೊತ್ತಿದ್ದರೂ ಅದನ್ಯಾಕೆ ಕೇಂದ್ರ ಮಾಡಬೇಕು. ತಾಳಿಕೋಟೆಯಲ್ಲಿ ಹೆಚ್ಚಿನ ನಕಲು ನಡೆಯುವ ಆರೋಪ ಇದೆ. ಬಳಬಟ್ಟಿ ಕೇಂದ್ರದ ವಿಷಯ ಸೀರಿಯಸ್‌ ಇದ್ದು, ಊರವರು ಕೇಂದ್ರ ಪ್ರವೇಶಕ್ಕೆ ಅವಕಾಶ ಕೊಡಬೇಡಿ. ಇಂಥ ಕೇಂದ್ರಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದ ಅವರು, ಬೇಕೂಂತಲೇ ವಿದ್ಯುತ್‌ ಕಡಿತಗೊಳಿಸಿ ಸಿಸಿ ಕ್ಯಾಮರಾ ಬಂದ್‌ ಮಾಡಿಸುವುದನ್ನು ಸಹಿಸೊಲ್ಲ. ಪರೀಕ್ಷಾ ಸಿಬ್ಬಂದಿಗೆ ಮಾಸ್ಕ್, ಹ್ಯಾಂಡ್‌ಗ್ಲೌಜ್‌, ಸ್ಯಾನಿಟೈಜರ್‌ ಕಡ್ಡಾಯವಾಗಿದೆ ಎಂದರು.

Advertisement

ಪರೀಕ್ಷಾ ತಯಾರಿಯ ಕುರಿತು ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಎಂ.ಎಸ್‌.ಬ್ಯಾಹಟ್ಟಿ, ಆರೋಗ್ಯಪೂರ್ಣವಾಗಿ ಪರೀಕ್ಷೆ ನಡೆಸುವ ಕುರಿತು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದು ಹಂಚಿನಾಳ, ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಶಾಸಕ ಎ.ಎಸ್‌ .ಪಾಟೀಲ ನಡಹಳ್ಳಿ ಸೇರಿದಂತೆ ದಾನಿಗಳ ನೆರವಿನ ಕುರಿತು ಬಿಇಒ ರೇಣುಕಾ ಕಲಬುರ್ಗಿ ಮಾತನಾಡಿದರು.

ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ತುಂಗಳ, ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ, ಬಾಲಾಜಿ ಸಕ್ಕರೆ ಕಾರ್ಖಾನೆಯ ಸಹ ಉಪಾಧ್ಯಕ್ಷ ರಾಹುಲ್‌ ಪಾಟೀಲ, ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಮಾರುತಿ ಗುರವ, ಅನುದಾನಿತ ಪ್ರೌಢಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಗುಡ್ಡೊಡಗಿ, ದೆ„ಹಿಕ ಶಿಕ್ಷಣ ಪರಿವೀಕ್ಷಕ ಎಚ್‌.ಎಲ್‌.ಕರಡ್ಡಿ ವೇದಿಕೆಯಲ್ಲಿದ್ದರು.

ಉದ್ಯಮಿ ಜಿ.ಶಂಕರ್‌ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪೂರೈಸಿದ್ದ ಉಚಿತ ಮಾಸ್ಕ್, ಬಾಲಾಜಿ ಸಕ್ಕರೆ ಕಾರ್ಖಾನೆ ಪೂರೈಸಿದ್ದ ಸ್ಯಾನಿಟೈಜರ್‌, ಬೆಂಗಳೂರಿನ ಎಂಬೆಸ್ಸಿ ಗ್ರೂಪ್‌ ನವರು ಕಳಿಸಿದ ಹ್ಯಾಂಡ್‌ ಸ್ಯಾನಿಟೈಜರ್‌ ಅನ್ನು ಬಿಒಓಗೆ ಹಸ್ತಾಂತರಿಸಿ ಸಭೆಯಲ್ಲಿದ್ದ ಎಲ್ಲ ಮುಖ್ಯೋಪಾಧ್ಯಾಯರಿಗೆ ವಿತರಿಸಲಾಯಿತು. ಶಿಕ್ಷಣ ಸಂಯೋಜಕ ಅಲ್ಲಾಭಕ್ಷ ಬಾಗವಾನ ಸ್ವಾಗತಿಸಿದರು. ಬಿ.ಎಚ್‌.ಮೇಟಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next