ಮುದ್ದೇಬಿಹಾಳ: ಶತಮಾನ ಕಂಡಿರುವ ಇಲ್ಲಿನ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ (ಕೆಬಿಎಂಪಿಎಸ್)ಯ ಸಮಗ್ರ ಅಭಿವೃದ್ಧಿಗೆ ಮತ್ತು ಗುಣಮಟ್ಟ ಹೆಚ್ಚಳಕ್ಕೆ ಶಾಲೆಯ ಶಿಕ್ಷಕರು, ಶಾಲೆಯ ಹಳೇಯ ವಿದ್ಯಾರ್ಥಿಗಳು ದಾನ ನೀಡಲು ಮುಂದೆ ಬಂದಿದ್ದಾರೆ ಎಂದು ಬಿಇಒ ಎಸ್.ಡಿ. ಗಾಂಜಿ ತಿಳಿಸಿದ್ದಾರೆ.
ಗುರುವಾರ ಶಾಲೆಗೆ ಭೇಟಿ ನೀಡಿ ಶಾಲಾ ಚಟುವಟಿಕೆ ಪರಿಶೀಲಿಸುವ ಸಂದರ್ಭ ತಮ್ಮನ್ನು ಭೇಟಿ ಯಾದ ಶಿಕ್ಷಕರು, ಕೆಲ ಹಳೆಯ ವಿದ್ಯಾರ್ಥಿಗಳ ನೆರವಿನ ಮಾಹಿತಿ ದಾಖಲಿಸಿಕೊಂಡ ನಂತರ “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಶಾಲೆಯ ಅಭ್ಯುದಯ, ಪ್ರಗತಿಗಾಗಿ ಶಾಲೆಯ ಭೌತಿಕ ಸೌಕರ್ಯ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಹಲವರು ದಾನದ ರೂಪದಲ್ಲಿ ನೆರವು ನೀಡಲು ಮುಂದೆ ಬಂದಿರುವುದು ಶ್ಲಾಘನೀಯ ಕಾರ್ಯ ಎಂದರು.
ಪಟ್ಟಣದ ಗಣ್ಯರು, ಹಳೇಯ ವಿದ್ಯಾರ್ಥಿಗಳು ಶಾಲೆಯ ಶತಮಾನೋತ್ಸವ ಆಚರಣೆ ಮಾಡುವ ಮನೋಭಾವ, ತುಡಿತ ಹೊಂದಿದ್ದಾರೆ. ಇದನ್ನು ಮಾದರಿ ಶಾಲೆಯನ್ನಾಗಿ ಮಾಡಲು ಎಲ್ಲರೂ ಕೈಜೋಡಿಸುತ್ತಿರುವುದು ಸೇವಾ ಮನೋಭಾವಕ್ಕೆ ಕನ್ನಡಿ ಹಿಡಿದಂತಾಗಿದೆ ಎಂದರು.
ದಾನ ನೀಡಲು ಮುಂದೆ ಬಂದ ಶಿಕ್ಷಕರ ಪರವಾಗಿ ಮಾತನಾಡಿದ ಸುಜಾತಾ ಕಡಿ, ಆಯಿಷಾ ನದಾಫ ಅವರು, ಬಿಇಒ ಸಾಹೇಬರ ಸಮಾಜಮುಖೀ ಕೆಲಸದಿಂದ ಪ್ರೇರಣೆಗೊಂಡಿದ್ದೇವೆ. ಈ ಶಾಲೆಯನ್ನು ಕೇವಲ ಮಾದರಿ ಶಾಲೆಯನ್ನಾಗಿ ಮಾತ್ರವಲ್ಲದೇ
ಗುಣಮಟ್ಟದ ಶಾಲೆಯನ್ನಾಗಿ ಮಾಡಲು ಇಚ್ಛಿಸಿದ್ದೇವೆ. ಶಾಲೆಯ ಶತಮಾನೋತ್ಸವ ಆಚರಿಸಿ ಇಡೀ ರಾಜ್ಯಕ್ಕೆ ಮಾದರಿ ಶಾಲೆಯನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದರು.
ಶಾಲೆಯ ಭೌತಿಕ ಅಭಿವೃದ್ಧಿಗೆ ವಿವಿಧ ರೀತಿಯಲ್ಲಿ ನೆರವು ನೀಡಲು ಮುಂದೆ ಬಂದ ಶಿಕ್ಷಕರಾದ ಶಾಂತಾಬಾಯಿ ಪಣೇದಕಟ್ಟಿ, ಸುಜಾತಾ ಕಡಿ, ಮೀನಾಕ್ಷಿ ಸಜ್ಜನ, ಬಸಮ್ಮ ಗದ್ದಿ, ಆಯಿಷಾ ನದಾಫ, ರುಕ್ಮಿಣಿ ಗೋರ್ಕಲ್, ಚಿನ್ನಮ್ಮ ಬಿದರಿ, ಬಸವರಾಜ ಹಾವರಗಿ ಅವರ ಸೇವೆ ಶ್ಲಾಘಿಸಲಾಯಿತು.
ಕ್ಷೇತ್ರ ಸಮನ್ವಯಾಧಿ ಕಾರಿ ಯು.ಬಿ.ಧರಿಕಾರ, ದೆ„ಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಲ್.ಕರಡ್ಡಿ, ಕೆಬಿಎಂಪಿಎಸ್ ಮುಖ್ಯಶಿಕ್ಷಕ ಟಿ.ಎನ್. ರೂಢಗಿ, ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ.ಎಸ್. ಕವಡಿಮಟ್ಟಿ, ಸಿಆರ್‌ಪಿ ಟಿ.ಡಿ. ಲಮಾಣಿ, ಹಳೇ ವಿದ್ಯಾರ್ಥಿ ರವಿ
ಜಗಲಿ ಮತ್ತಿತರರಿದ್ದರು.