Advertisement

ಬಡವರ ಮನೆಗೆ ತಲುಪಲಿದೆ ಆಹಾರ ಕಿಟ್‌

11:55 AM Apr 17, 2020 | Naveen |

ಮುದ್ದೇಬಿಹಾಳ: ಕೊರೊನಾ ಸಂಕಷ್ಟ ಕಾಲದಲ್ಲಿ ಲಾಕ್‌ಡೌನ್‌ನಿಂದಾಗಿ ಕೆಲಸ ಇಲ್ಲದೆ, ಊಟಕ್ಕೂ ಪರದಾಡುತ್ತಿರುವ ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಪಟ್ಟಣಗಳ 20 ಸಾವಿರ ಬಡ ಕುಟುಂಬಗಳಿಗೆ ಒಂದು ಕೋಟಿ ರೂ. ವೆಚ್ಚದಲ್ಲಿ ದಿನಸಿ ಕಿಟ್‌ ವಿತರಣೆಗೆ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಭರದ ಸಿದ್ಧತೆ ನಡೆಸಿದ್ದು, ಜನಪ್ರತಿನಿಧಿಗಳಿಗೆ ಮಾದರಿ ಎನ್ನಿಸಿಕೊಂಡಿದೆ.

Advertisement

ಲಾಕ್‌ಡೌನ್‌ ಪ್ರಾರಂಭಗೊಂಡ ಮೇಲೆ ಗೋವಾದಲ್ಲಿನ ನಿರಾಶ್ರಿತ ಕನ್ನಡಿಗರ, ದಿನನಿತ್ಯ ದುಡಿದೇ ಬದುಕು ಸಾಗಿಸುವ ಸ್ಥಳೀಯ ಕಾರ್ಮಿಕರ ಸಂಕಷ್ಟ ಮನವರಿಕೆ ಮಾಡಿಕೊಂಡಿರುವ ಶಾಸಕರು, ಅವಕಾಶ ಸಿಕ್ಕಾಗಲೆಲ್ಲ ನೆರವು ನೀಡಿ ಸಂಕಷ್ಟದಲ್ಲಿ ಭಾಗಿಯಾಗುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಅನೇಕ ಬಡಹೆಣ್ಣುಮಕ್ಕಳು ಶಾಸಕರ ಮನೆಗೆ ಬಂದು ನಮಗೆ ಕೆಲಸ ಇಲ್ಲ, ಸರ್ಕಾರ ಅಕ್ಕಿ, ಗೋಧಿ ಮಾತ್ರ ಕೊಟ್ಟಿದೆ. ಅಡುಗೆ ಮಾಡಿಕೊಂಡು ತಿನ್ನಲು ಸಾಧ್ಯವಾಗದಷ್ಟು ಬಡತನ ಇದೆ ಎಂದು ಗೋಳು ತೋಡಿಕೊಂಡಿದ್ದರು. ಹೀಗಾಗಿ ದಿನಬಳಕೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಹಂಚಲು ನಿರ್ಧರಿಸಿ ಕಾರ್ಯರೂಪಕ್ಕೆ ತರುತ್ತಿದ್ದಾರೆ.

ಈಗಾಗಲೇ ಮತಕ್ಷೇತ್ರದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು, ಅವರೊಂದಿಗೆ ಆಸ್ಪತ್ರೆಗೆ ಬರುವ ಅವರ ಬಂಧುಗಳಿಗೆ ಉಚಿತ ಅನ್ನದಾಸೋಹ ಕಾರ್ಯ ನಡೆಸಿಕೊಡುತ್ತಿರುವ ಶಾಸಕರು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಹಾರ ಕಿಟ್‌ ವಿತರಣೆಗೆ ಮುಂದಾಗಿರುವುದು ಈ ಭಾಗದಲ್ಲಿ ಜನರ ಮೆಚ್ಚುಗೆಗೆ ಕಾರಣವಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳ ಸಹಕಾರದೊಂದಿಗೆ ತಮ್ಮ ಅಭಿಮಾನಿ ಬಳಗದ, ಬಿಜೆಪಿ ಕಾರ್ಯಕರ್ತರ ವಾರ್ಡ್‌ವಾರು ತಂಡ ರಚಿಸಿ ಬಿಪಿಎಲ್‌, ಅಂತ್ಯೋದಯ ಕಾರ್ಡ್‌ ಹೊಂದಿರುವ ಅಥವಾ ಆಯಾ ವಾರ್ಡ್‌ನಲ್ಲಿರುವ ನಿಜವಾದ ಬಡವರಿಗೆ ಮಾತ್ರ ವಿತರಿಸಲಿದ್ದಾರೆ.

ಬಡತನದ ಕಷ್ಟ ಎಂಥದ್ದು ಎನ್ನುವುದು ಅರಿತಿರುವೆ. ಇರುವುದನ್ನು ಹಂಚಿಕೊಂಡು ತಿಂದಾಗಲೇ ತೃಪ್ತಿ. ನನ್ನ ಕುಟುಂಬದ ಸಲಹೆ ಮೇರೆಗೆ ಈ ಕಾರ್ಯಕ್ಕೆ ಮುಂದಾಗಿದ್ದೇನೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಪ್ರೇರಣೆ. ನಿಜವಾದ ಅರ್ಹರು ಪ್ರಯೋಜನ ಪಡೆದುಕೊಳ್ಳಬೇಕು.
ಎ.ಎಸ್‌.ಪಾಟೀಲ ನಡಹಳ್ಳಿ,
ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next