ಮುದ್ದೇಬಿಹಾಳ: ರಾಜ್ಯ ಸರ್ಕಾರದ ಮುಂದೆ ಸಾಕಷ್ಟು ಸವಾಲುಗಳಿವೆ. ಮುಖ್ಯವಾಗಿ ಕೃಷ್ಣಾ, ಕಾವೇರಿ, ಮೇಕೆದಾಟು, ಸೌಥ್‌ವೆನ್ನಾರ್ ಇನ್ನಿತರ ಜಲವಿವಾದ ಹಾಗೂ ಕರ್ನಾಟಕ ಮಹಾರಾಷ್ಟ್ರ ಗಡಿ ಸಮಸ್ಯೆ ಮುಂತಾದವುಗಳನ್ನು ಶೀಘ್ರ ಬಗೆಹರಿಸಬೇಕಿದೆ. ಇದಕ್ಕಾಗಿಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮಿತಿಯೊಂದನ್ನು ರಚಿಸಿದ್ದಾರೆ ಎಂದು ರಾಜ್ಯ ಸರ್ಕಾರದ ನೂತನ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹೇಳಿದರು.
ಮುದ್ದೇಬಿಹಾಳ ಪಟ್ಟಣದ ವಿವಿವ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ದಿ ಮುದ್ದೇಬಿಹಾಳ ವೀರಶೈವ ವಿದ್ಯಾವರ್ಧಕ ಅಸೋಸಿಯೇಶನ್ ವತಿಯಿಂದ ಶನಿವಾರ ಏರ್ಪಡಿಸಿದ್ದ ನಾಗರಿಕ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯದ ಜಲ, ಗಡಿ ವಿವಾದಗಳನ್ನು ಬಗೆಹರಿಸಲು ಸರ್ಕಾರ ಗಂಭೀರ ನಿಲುವು ತೆಗೆದುಕೊಂಡಿದೆ. ಇದಕ್ಕಾಗಿ ರಚಿಸಿದ ಸಮಿತಿಯಲ್ಲಿ ಸದಸ್ಯನಾಗಿ ನಾನೂ ಇದ್ದೇನೆ. ಎಲ್ಲ ಸವಾಲುಗಳನ್ನು, ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರಕ್ಕೆ ಸರಿಯಾದ ಮಾರ್ಗದರ್ಶನ ಮಾಡುವ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸುವ ವಿಶ್ವಾಸ ಇದೆ ಎಂದರು.
ಅಡ್ವೋಕೇಟ್ ಜನರಲ್ ಹುದ್ದೆ ಸೃಷ್ಟಿ ಕುರಿತು ವಿವರಿಸಿದ ಅವರು, ಸಂವಿಧಾನ ರಚನೆಗೊಂಡಾಗ ಕಾನೂನು ಸಚಿವರೇ ಅಡ್ವೋಕೇಟ್ ಜನರಲ್ ಆಗಿ ಜವಾಬ್ದಾರಿ ನಿಭಾಯಿಸಬೇಕಿತ್ತು. ಆಗ ಅದಕ್ಕೆ ರಾಜಕೀಯ ಮಹತ್ವ ಇದ್ದು. ಆಗ ಕಾನೂನು ಮಂತ್ರಿಯಾಗಿದ್ದ ಡಾ| ಬಿ.ಆರ್. ಅಂಬೇಡ್ಕರ್ ಅವರು ಅಡ್ವೋಕೇಟ್ ಜನರಲ್ ಹುದ್ದೆಯಯನ್ನು ರಾಜಕೀಯದಿಂದ ಮುಕ್ತಗೊಳಿಸಲು ರಾಜಕೀಯೇತರ ವ್ಯಕ್ತಿಗೆ ಆ ಹುದ್ದೆ ಕೊಡಲು ಸಂವಿಧಾನಕ್ಕೆ ತಿದ್ದುಪಡಿ ತಂದರು. ಹೀಗಾಗಿ ಆ ಹುದ್ದೆಗೆ ರಾಜಕೀಯೇತರ ವ್ಯಕ್ತಿಯನ್ನು ನೇಮಿಸುವ ಪರಿಪಾಠ ಬೆಳೆದು ಬಂದಿದೆ ಎಂದರು.
ನಮ್ಮ ನಡೆ ಕಾನೂನು ಚೌಕಟ್ಟಿನಲ್ಲಿರಬೇಕು, ಸಾರ್ವಜನಿಕ ಹಿತಾಸಕ್ತಿ ಕಾಪಾಡುವಂತಿರಬೇಕು. ಮಾತಾಡುವುದೇ ಸಾಧನೆ ಆಗಬಾರದು. ಸಾಧನೆ ಮಾತನಾಡಬೇಕು. ಮಾಡಿದ ಸಾಧನೆ ಜನರಿಂದ ಮನ್ನಣೆ ಪಡೆಯದಿದ್ದರೆ ಅದಕ್ಕೆ ಅರ್ಥ ಇರೊಲ್ಲ. ನನ್ನ ಬೆಳವಣಿಗೆಯಲ್ಲಿ ನನ್ನ ತಾಯಿ, ತಂದೆ, ಮಡದಿ ಮತ್ತು ಕೇಂದ್ರದ ಮಾಜಿ ಸಚಿವ ದಿ| ಅರುಣ್ ಜೇಟ್ಲಿ, ಕೇಂದ್ರಸಚಿವ ರವಿಶಂಕರ ಪ್ರಸಾದ್ ಪಾತ್ರ ಬಹಳಷ್ಟು ಇದೆ. ನನ್ನನ್ನು ಇಲ್ಲಿ ಕರೆಸಿ ಸನ್ಮಾನಿಸಿ ಗೌರವಿಸಿದ್ದಕ್ಕೆ ನಾನು ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಈ ಸನ್ಮಾನ ಕಾರ್ಯಕ್ರಮ ಸಂಘಟಿಸಿದ ವೀವಿವ ಸಂಸ್ಥೆ ಮತ್ತು ಚುಕ್ಕಾಣಿ ಹಿಡಿದಿರುವ ಎಂ.ಬಿ. ನಾವದಗಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಸಿ.ಎಸ್. ನಾಡಗೌಡ ಅವರು ಈ ಸರ್ಕಾರಕ್ಕೆ ಪ್ರಭುಲಿಂಗ ಅವರಂತಹ ಪ್ರಾಮಾಣಿಕ, ಸಂಶೋಧನಾ ಮನೋಭಾವ ಉಳ್ಳವರ ಅವಶ್ಯಕತೆ ಇದೆ. ಪ್ರಭುಲಿಂಗರು ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ನ್ಯಾಯ ಕೊಡಲು ಶ್ರಮಿಸಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸಮಾರಂಭದ ಅಧ್ಯಕ್ಷರ ಪರವಾಗಿ ವೀವಿವ ಸಂಸ್ಥೆ ಗೌರವ ಕಾರ್ಯದರ್ಶಿ ಎಂ.ಬಿ. ನಾವದಗಿ ಮಾತನಾಡಿದರು. ಮಾಜಿ ಶಾಸಕ ಎಂ.ಎಂ. ಸಜ್ಜನ, ಸಂಸ್ಥೆ ಕಾರ್ಯಾಧ್ಯಕ್ಷ ಬಿ.ಸಿ. ಮೋಟಗಿ, ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ, ಪ್ರಭುಲಿಂಗರ ಪತ್ನಿ ಸೋನಲ್ ವೇದಿಕೆಯಲ್ಲಿದ್ದರು. ಸಂತೆ ಕೆಲ್ಲೂರ ಘನಮಠೇಶ್ವರ ಮಠದ ಗುರುಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ವೀವಿವ ಸಂಸ್ಥೆ, ಕಾರ್ಯನಿರತ ಪತ್ರಕರ್ತರ ಸಂಘ ಸೇರಿ 100ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಆಡಳಿತ ಮಂಡಳಿಯವರು, ಮುದ್ದೇಬಿಹಾಳ, ನಾಲತವಾಡ, ತಾಳಿಕೋಟೆ, ಇಳಕಲ್ಲ, ಬಾಗಲಕೋಟೆ, ವಿಜಯಪುರ ಭಾಗದ ಗಣ್ಯರು, ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಯವರು, ನಾವದಗಿ ಮನೆತನಕ್ಕೆ ನಿಕಟತೆ ಹೊಂದಿದ ಹಿರಿಯರು ಪ್ರಭುಲಿಂಗರನ್ನು ದಂಪತಿ ಸಮೇತ ಸನ್ಮಾನಿಸಿದರು. ಸಂಗಮೇಶ ಶಿವಣಗಿ ಪ್ರಾರ್ಥಿಸಿದರು. ವಿ.ಎಂ. ನಾಗಠಾಣ ಸ್ವಾಗತಿಸಿದರು. ಹಿರಿಯ ಸಾಹಿತಿ ಪ್ರೊ| ಬಿ.ಎಂ. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಎಂ.ಬಿ. ನಾವದಗಿ ಗೌರವಾರ್ಪಣೆ ನಡೆಸಿಕೊಟ್ಟರು. ಸುಧಾರಾಣಿ ಹಾಗೂ ಹೇಮಾ ಬಿರಾದಾರ ನಿರೂಪಿಸಿದರು. ಮಹೇಶ ಕಿತ್ತೂರ ವಂದಿಸಿದರು.