Advertisement

ಗರಿಗೆದರಿದ ರೈಲು ಮಾರ್ಗದ ಕನಸು

10:39 AM Jun 09, 2019 | Naveen |

ಶಿವುಕುಮಾರ ಶಾರದಳ್ಳಿ
ಮುದ್ದೇಬಿಹಾಳ: ಮೋದಿ ಸರಕಾರದಲ್ಲಿ ರಾಜ್ಯದ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರಿಗೆ ರೈಲ್ವೆ ರಾಜ್ಯ ಖಾತೆ ಸಚಿವ ಸ್ಥಾನ ಸಿಕ್ಕಿದ್ದು ಮುದ್ದೇಬಿಹಾಳ ಪಟ್ಟಣದ ಜನತೆಯಲ್ಲಿ ಜೀವ ಕಳೆದುಕೊಂಡಿದ್ದ ಆಲಮಟ್ಟಿ-ಮುದ್ದೇಬಿಹಾಳ-ಯಾದಗಿರಿ ಮಾರ್ಗದ ರೈಲು ಮಾರ್ಗ ನಿರ್ಮಾಣದ ಕನಸಿಗೆ ಮತ್ತೆ ಜೀವ ಬಂದಂತಾಗಿದೆ.

Advertisement

ಈ ಕನಸು ನಿನ್ನೆ ಮೊನ್ನೆಯದಲ್ಲ, ಸ್ವಾತಂತ್ರ್ಯ ಪೂರ್ವದಲ್ಲಿಯೇ ಮುದ್ದೇಬಿಹಾಳ ಹೋರಾಟಗಾರರ ಬೇಡಿಕೆ. ಆದರೆ ಅಂದಿನಿಂದ ಇಂದಿನವರೆಗೂ ಇಲ್ಲಿಯ ಹೋರಾಟಗಾರರಿಗೆ ನ್ಯಾಯ ಸಿಕ್ಕಿಲ್ಲ. ಇದು ರಾಜಕೀಯ ತಂತ್ರವೋ ಅಥವಾ ಕಾಮಗಾರಿ ಮಾಡಲು ಸರಕಾರದಲ್ಲಿ ಹಣವಿಲ್ಲವೋ ಗೊತ್ತಿಲ್ಲ. ಆದರೆ ಇಲ್ಲಿ ರೈಲ್ ಮಾರ್ಗವಾದರೆ ಎಲ್ಲರಿಗೂ ಅನುಕೂಲವಾಗುವುದು ಮಾತ್ರ ಖಚಿತ.

ಬ್ರಿಟಿಷರ ಆಡಳಿತಾವಧಿಯಲ್ಲಿ ವ್ಯಾಪಾರಿ ಕಂಪನಿಗಳ ಮತ್ತು ಆಸಕ್ತರ ಮುಖಾಂತರ ರೈಲು ಮಾರ್ಗಗಳನ್ನು ನಿರ್ಮಿಸಲಾಗುತ್ತಿತ್ತು. ಅದರಂತೆ ಆಲಮಟ್ಟಿ-ಯಾದಗಿರಿ ರೈಲು ಮಾರ್ಗಕ್ಕೂ ಅಂದಿನ ಬ್ರಿಟಿಷ್‌ ಆಡಳಿತ ಅಸ್ತು ಎಂದು ಕಾಮಗಾರಿಯನ್ನೂ ಪ್ರಾರಂಭಿಸಿತ್ತು. ಆದರೆ ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವದ ಅಧಿಕಾರಾವಧಿಯಲ್ಲಿ ರಾಜಕಾರಣಿಗಳು ಇದರತ್ತ ಆಸಕ್ತಿ ತೋರಿಸದೇ ಈ ಕಾಮಗಾರಿ ನೆಲಕಚ್ಚಿದೆ.

ಈಗಲೂ ಲಭ್ಯ ಬ್ರಿಟಿಷರ ರೈಲು ಮಾರ್ಗ: ಮುದ್ದೇಬಿಹಾಳ ತಾಲೂಕಿನ ಹುಲ್ಲೂರ ಗ್ರಾಮದಲ್ಲಿ ಆಲಮಟ್ಟಿ-ಯಾದಗಿರಿ ರೈಲು ಮಾರ್ಗದ ಕಾಮಗಾರಿಯನ್ನು ಬ್ರಿಟಿಷರು ಪ್ರಾರಂಭಿಸಿದ ಪುರಾವೆಗಳು ಈಗಲೂ ಸಿಗುತ್ತವೆ. ರೈಲು ಮಾರ್ಗಕ್ಕಾಗಿ ಹಾಕಿದಂತಹ ಮಣ್ಣಿನ ದಿಬ್ಬಿಗಳು ಹಾಗೂ ಕಿರು ಸೇತುವೆಗಳು ಕಾಣುತ್ತವೆ.

*ಅಭಿವೃದ್ಧಿ ಕೆಲಸಕ್ಕೆ ನಮ್ಮವರೇ ಮುಳ್ಳು: ಆಲಮಟ್ಟಿ-ಯಾದಗಿರಿ ರೈಲು ಮಾರ್ಗ ಕಾಮಗಾರಿ ಪ್ರಾರಂಭಿಸಿ ಬ್ರಿಟಿಷರು ದೇಶದ ಸ್ವತಂತ್ರ್ಯದ ದೇಶವನ್ನೆ ಬಿಟ್ಟರು. ನಂತರ ಪ್ರಜಾಪ್ರಭುತ್ವದಲ್ಲಿ ಅಧಿಕಾರವನ್ನು ಸ್ವೀಕರಿಸಿದ ಜನಪ್ರತಿನಿಧಿಗಳು ಈ ಯೋಜನೆಯನ್ನು ಮುಂದುವರಿಸುವಲ್ಲಿ ಆಸಕ್ತಿ ತೋರಲಿಲ್ಲ. ಇದರಿಂದ ಮುದ್ದೇಬಿಹಾಳ ಜನತೆಗೆ ಹೆಚ್ಚಿನ ಅನುಕೂಲವಾಗಲಿದ್ದು ಮಹತ್ತರ ಯೋಜನೆಗೆ ಬ್ರಿಟಿಷರು ಚಾಲನೆ ನೀಡಿದ್ದರು. ಅದನ್ನು ನಮ್ಮ ರಾಜಕಾರಣಿಗಳೆ ಮಣ್ಣಲ್ಲಿ ಹೂತರು ಎಂಬ ಆರೋಪಗಳು ಕೇಳಿಬರುತ್ತಿವೆ.

Advertisement

ಆಸಕ್ತಿ ತೋರಿದ್ದ ದೇವೇಗೌಡ: ನಿಂತು ಹೋಗಿದ್ದ ಆಲಮಟ್ಟಿ-ಯಾದಗಿರಿ ರೈಲೆ ಮಾರ್ಗವನ್ನು ಹೇಗಾದರೂ ಮರು ಚಾಲನೆ ಮಾಡಬೇಕು ಎಂದು ಆಸಕ್ತಿ ತೋರಿದ್ದ ಮುದ್ದೇಬಿಹಾಳ ಜನತೆಯು ಅಂದು ಪ್ರಧಾನಿಯಾಗಿದ್ದ ದೇವೇಗೌಡರಿಗೆ ರೈಲು ಮಾರ್ಗವನ್ನು ಮರು ಚಾಲನೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿ ದೇವೇಗೌಡ, ಈ ರೈಲು ಮಾರ್ಗದ ಸರ್ವೇ ಮಾಡಲು ಸೂಚಿಸಿದ್ದರು. ನಂತರ ಮತ್ತೆ ಅವರ ಅಧಿಕಾರ ಅವಧಿ ಮುಗಿದು ಮತ್ತೆ ಯೋಜನೆಯು ಎರಡನೇ ಬಾರಿಗೆ ನಿಂತು ನೀರಾಗಿತು.

ಹಳೆ ಕನಸಿಗೆ ಮತ್ತೇ ಜೀವ: ಸದ್ಯ ಕೇಂದ್ರದಲ್ಲಿ ಮೋದಿ ಸರಕಾರವಿದೆ. ಅಲ್ಲದೇ ರಾಜ್ಯಕ್ಕೆ ಮುದ್ದೇಬಿಹಾಳ ಜನತೆಯ ಕನಸಿಗೆ ಜೀವನ ಬರುವಂತೆ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರಿಗೆ ರೈಲ್ವೆ ಖಾತೆಯ ಸಚಿವಗಿರಿ ನೀಡಿದ್ದಾರೆ. ಹಳೆ ಕನಸಿಗೆ ಜೀವ ಬಂದಂತೆ ಈಗಲಾದರೂ ಆಲಮಟ್ಟಿ-ಮುದ್ದೇಬಿಹಾಳ-ಯಾದಗಿರಿ ರೈಲು ಮಾರ್ಗ ಆಗುತ್ತಾ ಎಂಬ ನಿರೀಕ್ಷೆಯಲ್ಲಿ ಜನತೆ ಕಾತುರದಲ್ಲಿದ್ದಾರೆ.

ರೈಲು ಮಾರ್ಗದಿಂದ ಏನೇನು ಲಾಭ?
ಉತ್ತರ ಕರ್ನಾಟಕದಲ್ಲಿ ವಿಜಯಪುರ ಕೈಗಾರಕಾ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿಲ್ಲ. ಅಲ್ಲದೇ ಈ ರೈಲು ಮಾರ್ಗದ ಕನಸು ಈಡೇರಿಸಿದರೆ ಆಲಮಟ್ಟಿ ಮುದ್ದೇಬಿಹಾಳದಿಂದ ಯಾದಗಿರಿವರೆಗೆ ವಾಣಿಜ್ಯ ಕೇಂದ್ರಗಳು ಹೆಚ್ಚುತ್ತವೆ. ಈ ಭಾಗದ ರೈತರ ಬೆಳೆಗಳನ್ನು ದೂರದ ಮಾರುಕಟ್ಟೆಗಳಿಗೆ ಸಾಗಿಸಲು ಅನುಕೂಲವಾಗುತ್ತದೆ. ಕೈಗಾರಿಕೆಗಳು ಬೆಳೆಯಲು ಅನುಕೂಲವಾಗುತ್ತದೆ.

ಆಲಮಟ್ಟಿ- ಮುದ್ದೇಬಿಹಾಳ-ಯಾದಗಿರಿ ರೈಲ್ವೆ ಮಾರ್ಗ ಕಾಮಗಾರಿಗಾಗಿ ಸಾಕಷ್ಟು ಬಾರಿ ಹೋರಾಟ ಮಾಡಲಾಗಿದೆ. ದೇವೇಗೌಡ ಪ್ರಧಾನಿಯಾಗಿದ್ದ ವೇಳೆ 4 ಬಾರಿ ಮುದ್ದೇಬಿಹಾಳದಿಂದ ದೆಹಲಿಗೆ ನಿಯೋಗ ಮಾಡಿಕೊಂಡು ಹೋಗಿದ್ದೇವು. ಈ ರೈಲ್ವೆ ಮಾರ್ಗದಿಂದ ಮುದ್ದೇಬಿಹಾಳ ತಾಲೂಕಿಗೂ ಹಾಗೂ ಇಲ್ಲಿನ ವಾಣಿಜ್ಯಕ್ಕೂ ಬಹುಉಪಯೋಗಿ ಆಗುತ್ತದೆ ಎಂದು ಮನವರಿಕೆ ಮಾಡಲಾಗಿತ್ತು. ಆದರೆ ರಾಜಕಾರಣಿಗಳು ಯಾರೊಬ್ಬರೂ ಆಸಕ್ತಿ ತೋರಲಿಲ್ಲ.
ಬಾಬು ಬಿರಾದಾರ,
ರೈಲ್ವೆ ಹೋರಾಟ ಸಮಿತಿ ಉಪಾಧ್ಯಕ್ಷ

ಮುದ್ದೇಬಿಹಾಳ ರೈಲ್ವೆ ಹೋರಾಟಕ್ಕಾಗಿ ಹಿಂದೆ ರಾಜಕೀಯ ಇಚ್ಛಾಶಕ್ತಿ ಕೊರತೆ ಇತ್ತು. ಆದರೆ ಈಗ ರಾಯಚೂರು, ಕಲಬುರಗಿ, ವಿಜಯಪುರ, ಬೆಳಗಾವಿ, ಬಾಗಲಕೋಟೆಯಲ್ಲಿ ಬಿಜೆಪಿಯ ಸಂಸದರು ವಿಜೇತರಾಗಿದ್ದಾರೆ. ಅಲ್ಲದೇ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸ್ಥಾನ ಸಿಕ್ಕಿದ್ದು ಸದ್ಯಕ್ಕೆ ಎಲ್ಲ ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತೆ ರೈಲು ಮಾರ್ಗಕ್ಕಾಗಿ ಮನವಿ ಮಾಡಲಾಗುವುದು.
ಸಿದ್ದರಾಜ ಹೊಳಿ,
ರೈಲ್ವೆ ಹೋರಾಟ ಸಮಿತಿ ಸದಸ್ಯ

ಮುದ್ದೇಬಿಹಾಳ ತಾಲೂಕಿಗೆ ಆಲಮಟ್ಟಿ- ಮುದ್ದೇಬಿಹಾಳ-ಯಾದಗಿರಿ ರೈಲು ಮಾರ್ಗ ಸುಮಾರು 100 ವರ್ಷದ ಬೇಡಿಕೆಯಾಗಿದ್ದು ಆದರೆ ಹೋರಾಟ ಕೇವಲ ಮುದ್ದೇಬಿಹಾಳಕ್ಕೆ ಸೀಮಿತಗೊಂಡಿದ್ದು ಹೋರಾಟಕ್ಕೆ ಇನ್ನೂ ಪ್ರತಿಫಲ ಸಿಕ್ಕಿಲ್ಲ. ಇದರ ಜಾಗೃತಿಗಾಗಿ ಅತಿ ಶೀಘ್ರದಲ್ಲಿಯೇ ಸಮಿತಿಯಿಂದ ಕ್ರಮ ಕೈಗೊಳ್ಳಲಾಗುವುದು.
ಬಸಯ್ಯ ನಂದಿಕೇಶ್ವರಮಠ,
ನಗರಾಭಿವೃದ್ಧಿ ಹೋರಾಟ ಸಮೀತಿ, ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next