ಮುದ್ದೇಬಿಹಾಳ: ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಅವರ ಮಕ್ಕಳು ತಾವು ಉಳಿತಾಯ ಮಾಡಿದ್ದ ಅಂದಾಜು 8 ಲಕ್ಷ ರೂ. ಪಾಕೆಟ್
ಮನಿಯಿಂದ ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿರುವ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಒದಗಿಸಲು ಬೆಂಗಳೂರಿನಿಂದ ಕಳುಹಿಸಿರುವ ಪೌಷ್ಠಿಕ ಆಹಾರ ಸಾಮಗ್ರಿ ಮತ್ತು ದಿನಬಳಕೆ ಅವಶ್ಯಕ ವಸ್ತುಗಳ ಕಿಟ್ ವಿತರಣೆಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಅವರ ಪತ್ನಿ ಮಹಾದೇವಿ ಅವರು ರವಿವಾರ ಸಂಜೆ ಚಾಲನೆ ನೀಡಿದರು.
ಜಮ್ಮಲದಿನ್ನಿ ಗ್ರಾಮದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರೆಂಟೈನ್ ಗೊಳಗಾಗಿರುವ ಕೊಪ್ಪತಾಂಡಾ, ಮುಂದೂರತಾಂಡಾ, ಗೆದ್ದಲಮರಿತಾಂಡಾ, ಕೋಳೂರುತಾಂಡಾ, ಬಿದರಕುಂದಿ, ಮುದ್ದೇಬಿಹಾಳ ವ್ಯಾಪ್ತಿಯ 165 ವಲಸೆ ಕಾರ್ಮಿಕರಿಗೆ ದಿನಬಳಕೆಯ ಟೂತ್‌ಪೇಸ್ಟ್, ಟೂತ್‌ಬ್ರಶ್, ಕೈ ತೊಳೆಯಲು, ಮೈ ತೊಳೆಯಲು ಮತ್ತು ಬಟ್ಟೆ ತೊಳೆಯಲು ಸಾಬುನು, 45 ಮಕ್ಕಳಿಗೆ, 6 ಗರ್ಭಿಣಿಯರಿಗೆ 15 ದಿನಕ್ಕಾಗುವಷ್ಟು ನಂದಿನಿ ಗುಡ್‌ಲೈಫ್ ಟೆಟ್ರಾ ಪ್ಯಾಕೇಟ್‌ನ ಹಾಲು, ಬಿಸ್ಕತ್, ಚಾಕೋಲೆಟ್, ಬ್ರೆಡ್, ಬನ್ ಮುಂತಾದ ಸಾಮಗ್ರಿ ಇರುವ ವಿಶೇಷ ಕಿಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ನಡಹಳ್ಳಿ ಅವರ ಧರ್ಮಪತ್ನಿ ಮಹಾದೇವಿ, ನಮ್ಮ ಮಕ್ಕಳು ಅವರ ತಂದೆಯ ದಾಸೋಹ ಕಾರ್ಯವನ್ನು ಕಂಡು ತಾವೂ ಏನಾದರೂ ಸಹಾಯ ಮಾಡಬೇಕು ಎಂದು ಯೋಚಿಸಿ ಅವರ ಪಾಕೆಟ್ ಮನಿ ಹಣವನ್ನು ಈ ಪುಣ್ಯ ಕಾರ್ಯಕ್ಕೆ ವಿನಿಯೋಗಿಸಿದ್ದು ಸಂತಸ ಸಂಗತಿ. ಸುಮಾರು 8 ಲಕ್ಷ ರೂಗಳನ್ನು ಒಟ್ಟುಗೂಡಿಸಿ, ತಾವೇ ಯೋಜನೆ ರೂಪಿಸಿ ಈ ಸಾಮಗ್ರಿಗಳನ್ನು ಕೊಡುವಂತೆ ನಮಗೆ ಕೇಳಿಕೊಂಡಿದ್ದರು. ಮಕ್ಕಳ ಆಸೆಯಂತೆ ನಾವಿಂದು ಬಡ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ, ದಿನಬಳಕೆಯ ವಸ್ತುಗಳನ್ನು ವಿತರಣೆ ಮಾಡಿದ್ದೇವೆ. ಮುದ್ದೇಬಿಹಾಳ, ತಾಳಿಕೋಟೆ ಎರಡೂ ತಾಲೂಕಿನ 30 ಸಾಂಸ್ಥಿಕ ಕ್ವಾರೆಂಟೈನ್ ಕೇಂದ್ರಗಳಲ್ಲಿರುವ ಎಲ್ಲರಿಗೂ ಈ ವಿಶೇಷ ಕಿಟ್‌ಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿರುವ ಎಲ್ಲರಿಗೂ ಎರಡು ವಾರಕ್ಕಾಗುವಷ್ಟು ಜೋಳದ ರೊಟ್ಟಿ, ಆಯುರ್ವೇದ ಪದ್ಧತಿಯಲ್ಲಿ ತಯಾರಿಸಿದ ಚಟ್ನಿಯನ್ನು ನಮ್ಮ ಕುಟುಂಬದಿಂದಲೇ ವಿತರಿಸಲಾಗುತ್ತದೆ. ಸರ್ಕಾರ ಕೊಡುತ್ತಿರುವ ಊಟದ ಜತೆಗೆ ನಮ್ಮಿಂದಾದ ಸೇವೆಯನ್ನೂ ಮಾಡಲು ಮುಂದಾಗಿದ್ದೇವೆ ಎಂದು ಮಹಾದೇವಿ ಪಾಟೀಲ ಹೇಳಿದರು.
ಶಾಸಕ ಎ.ಎಸ್ ಪಾಟೀಲ(ನಡಹಳ್ಳಿ) ಮಾತನಾಡಿ, ಪ್ರತಿಯೊಬ್ಬ ವಲಸಿಗರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಯಾರೂ ಕೇಂದ್ರ ಬಿಟ್ಟು ಹೊರಗೆ ಬರಬಾರದು. ಅಧಿಕಾರಿಗಳು, ಕೇಂದ್ರದ ಉಸ್ತುವಾರಿ ಸಿಬ್ಬಂದಿಗಳು ಸೂಚಿಸುವ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಕ್ವಾರೆಂಟೈನ್ ಅವಧಿ ಮುಗಿದ ಮೇಲೆ ಎಲ್ಲರಿಗೂ 15-20 ದಿನಗಳಿಗಾಗುವಷ್ಟು ಆಹಾರ ಸಾಮಗ್ರಿ ಕಿಟ್ ಕೊಟ್ಟು ಬಸ್‌ಗಳ ಮೂಲಕ ಗೌರವಯುತವಾಗಿ ಅವರವರ ಮನೆಗಳಿಗೆ ಬೀಳ್ಕೊಡಲಾಗುವುದು ಎಂದು ಹೇಳಿದರು.
ತಹಸೀಲ್ದಾರ್ ಜಿ.ಎಸ್.ಮಳಗಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಪಿಎಸ್‌ಐ ಮಲ್ಲಪ್ಪ ಮಡ್ಡಿ, ವಸಂತ ಬಂಡಗಾರ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಬಸಮ್ಮ ಸಿದರಡ್ಡಿ, ಕ್ವಾರೆಂಟೈನ್ ಕೇಂದ್ರದ ಉಸ್ತುವಾರಿ ಅಧಿಕಾರಿಗಳು ಇದ್ದರು. ಈ ವೇಳೆ ಶಾಲೆಯ ಮೈದಾನದಲ್ಲಿ ಎಲ್ಲರನ್ನೂ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಲಾಗಿ ಕೂಡ್ರಿಸಿ ಕಿಟ್ ಹಂಚಿಕೆ ಮಾಡಿದ್ದು ವಿಶೇಷವಾಗಿತ್ತು.