Advertisement

ಕಾಲುವೆಯಲ್ಲಿ ಈಜಲು ಹೋದ ವಿದ್ಯಾರ್ಥಿ ನೀರುಪಾಲು : ಮುಂದುವರಿದ ಶೋಧ ಕಾರ್ಯ

05:45 PM Apr 04, 2022 | Team Udayavani |

ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆಯಲ್ಲಿ ಸಹಪಾಠಿಗಳೊಂದಿಗೆ ಈಜಾಡಲು ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರು ಪಾಲಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

Advertisement

ತಾಳಿಕೋಟೆ ತಾಲೂಕು ಬಿ.ಸಾಲವಾಡಗಿಯ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿ ಮದನ ಹಣಮಂತ ಸಾಲವಾಡಗಿ ನೀರು ಪಾಲಾದವನು ಎಂದು ತಿಳಿದು ಬಂದಿದೆ. ವಿದ್ಯಾರ್ಥಿಯ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಹುಡುಕಾಟ ನಡೆಸಿದ್ದರೂ ಸಂಜೆ 5.30ರವರೆಗೂ ಶವ ಪತ್ತೇ ಆಗಿಲ್ಲ. ಈ ವಿದ್ಯಾರ್ಥಿಯ ಪಾಲಕರು ಗೋವಾಕ್ಕೆ ದುಡಿಯಲು ಗುಳೇ ಹೋಗಿದ್ದಾರೆ.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿರುವ ಈತ ಕಾಲುವೆಯ ಪಕ್ಕದಲ್ಲೇ ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‍ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿರುತ್ತಿದ್ದ. ಬಿಸಿಲಿನ ತಾಪ ಹೆಚ್ಚಾದ ಕಾರಣ ಸಹಪಾಠಿಗಳೊಂದಿಗೆ ಕಾಲುವೆಯಲ್ಲಿ ಈಜಲು ತೆರಳಿದ್ದಾನೆ. ತನಗೆ ಈಜಲು ಬರುವುದಿಲ್ಲ ಎನ್ನುವುದು ಗೊತ್ತಿದ್ದರೂ ಧೈರ್ಯ ಮಾಡಿ ಕಾಲುವೆಗೆ ಜಿಗಿದಿದ್ದಾನೆ. ನೀರಿನ ಸೆಳೆತದಿಂದಾಗಿ ಈಜಲು ಸಾಧ್ಯವಾಗದೆ ನೀರಲ್ಲಿ ಮುಳುಗುತ್ತಿರುವುದನ್ನು ಕಂಡು ಸ್ನೇಹಿತರು ಆತನ ಕೈ ಹಿಡಿದು ದಂಡೆಗೆ ತರಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ ಅವರ ಪ್ರಯತ್ನ ವಿಫಲಗೊಂಡು, ಸ್ನೇಹಿತರ ಕೈಯಿಂದ ಜಾರಿ ನೀರಿನಲ್ಲಿ ಮುಳುಗಿದವನು ಮೇಲೆ ಏಳಲೇ ಇಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ: ಐಐಟಿ ಗುವಾಹಟಿಯಿಂದ ಹೊಸ ತಂತ್ರಜ್ಞಾನ

ಸ್ಥಳಕ್ಕೆ ತಹಶೀಲ್ದಾರ್ ಬಿ.ಎಸ್‍.ಕಡಕಭಾವಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ, ಹಾಸ್ಟೇಲ್‍ ವಾರ್ಡನ್‍ ಎಸ್‍.ಎಚ್‍.ಜೈನಾಪೂರ, ಸಿಪಿಐ ಆನಂದ ವಾಘ್ಮೋಡೆ, ಪಿಎಸೈ ರೇಣುಕಾ ಜಕನೂರ, ಮುದ್ದೇಬಿಹಾಳ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದು ಶವ ಹುಡುಕಾಟಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಮೃತ ವಿದ್ಯಾರ್ಥಿಯ ಅಜ್ಜನೂ ಸ್ಥಳಕ್ಕೆ ಆಗಮಿಸಿದ್ದು ಆತನ ಗೋಳಾಟ, ಆಕ್ರಂದನ ಎದೆಬಿರಿಯುವಂತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next