ಮುದ್ದೇಬಿಹಾಳ: ಹೊಲದಲ್ಲಿನ ಬೆಳೆಗೆ ನೀರು ಹಾಯಿಸಲು ಮೋಟಾರ್ ಚಾಲೂ ಮಾಡಲು ಹೋಗಿದ್ದ ರೈತನೊಬ್ಬ ವಿದ್ಯುತ್ ಶಾಕ್ ತಗುಲಿ ಗಾಭರಿಗೊಂಡು ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ರೈತನೊಬ್ಬ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಕೋಳೂರು ಗ್ರಾಮ ವ್ಯಾಪ್ತಿಯ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ನಡೆದಿದೆ. ಈ ಘಟನೆ ನಿನ್ನೆ ಸಂಜೆಯೇ ನಡೆದಿದ್ದು ಶವ ಕಾಲುವೆಯಲ್ಲಿ ತೇಲಿಕೊಂಡು ಕೆಸಾಪೂರ ಗ್ರಾಮದ ಬಳಿ ಬಂದಾಗ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೃತ ರೈತನನ್ನು ಕೋಳೂರು ಗ್ರಾಮದ ಹಣಮಂತ ಭೀಮಶೆಪ್ಪ ಹದ್ದಿನ (54) ಎಂದು ಗುರ್ತಿಸಲಾಗಿದೆ. ಮೃತನಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಇದ್ದಾರೆ.
1.5 ಎಕರೆ ಜಮೀನು : ಮೃತ ರೈತನಿಗೆ 4 ಎಕರೆ ಜಮೀನು ಇತ್ತು. ಕಾಲುವೆ ನಿರ್ಮಾಣದಲ್ಲಿ ಅಂದಾಜು 2 ಎಕರೆಗೂ ಹೆಚ್ಚು ಜಮೀನು ಮುಳುಗಡೆ ಆಗಿತ್ತು. ಇದ್ದ ಒಂದೂವರೆ ಎಕರೆ ಜಮೀನಿನಲ್ಲಿ ಬೇಸಿಗೆ ಶೇಂಗಾ ಬೆಳೆದಿದ್ದ. ಇದಕ್ಕೆ ಕಾಲುವೆ ನೀರನ್ನು ಅವಲಂಬಿಸಿದ್ದ. ಮುಖ್ಯ ಕಾಲುವೆಯಿಂದ ನೀರೆತ್ತಿ ಹೊಲಕ್ಕೆ ಹರಿಸಲು ವಿದ್ಯುತ್ ಚಾಲಿತ ಮೋಟಾರ್ ಅಳವಡಿಸಿದ್ದ. ಈ ಮೋಟಾರ್ ಚಾಲೂ ಮಾಡಲು ಹೋದಾಗ ಶಾಕ್ ಹೊಡೆದಂತಾಗಿ ಗಾಭರಿಯಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾನೆ. ಬಿದ್ದ ಜಾಗದಲ್ಲಿ ಕಾಲುವೆಯ ಆಳ ಹೆಚ್ಚಾಗಿದ್ದು, ನೀರಿನ ಒತ್ತಡವೂ ಬಹಳಷ್ಟಿರುವುದರಿಂದ ಆತ ಸಾವನ್ನಪ್ಪಿದ್ದಾನೆ. ಶವ ನೀರಿನ ಸೆಳವಿಗುಂಟ ಹರಿದು ಹೋಗಿದ್ದರಿಂದ ತಕ್ಷಣಕ್ಕೆ ಸಿಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೆಬಿಜೆಎನ್ನೆಲ್ ವಿರುದ್ದ ಆರೋಪ: ಘಟನೆ ಹಿನ್ನೆಲೆ ಉದಯವಾಣಿ ಡಿಜಿಟಲ್ ಜೊತೆ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರೇಮಸಿಂಗ್ ಚವ್ಹಾಣ ಅವರು, ಘಟನೆ ನಡೆದ ಕಾಲುವೆಯ ಸ್ಥಳ ತುಂಬಾ ಅಪಾಯಕಾರಿಯಾಗಿದೆ. ಕಾಲುವೆಯ ಐಪಿ ಸೈಡ್ ಮತ್ತು ಎಸ್ಆರ್ ಸೈಡ್ ರಸ್ತೆಯನ್ನೂ ಸರಿಯಾಗಿ ಮಾಡಿಲ್ಲ. ಈ ಭಾಗದಲ್ಲಿ ತಡೆಗೋಡೆ ನಿರ್ಮಿಸುವಂತೆ ರೈತರು ಮತ್ತು ನಾನು ಹಲವು ಬಾರಿ ಕೆಬಿಜೆಎನ್ನೆಲ್ಲನ ಕಾಲುವೆ ವಿಭಾಗದ ಇ ಇ ಮೋಹನ್ ಹಲಗತ್ತಿ, ಎಇ ರಾಜಕುಮಾರ ಚವ್ಹಾಣ ಅವರಿಗೆ ಹಲವು ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ತೋರಿಸಿದ್ದಾರೆ. ಅವರ ನಿರ್ಲಕ್ಷ್ಯದ ಪರಿಣಾಮ ಇಂದು ಒಬ್ಬ ರೈತನ ಜೀವ ಬಲಿಯಾಗಿದೆ. ಕೆಲ ತಿಂಗಳ ಹಿಂದೆ ಇದೇ ಜಾಗದಲ್ಲಿ ಟ್ರ್ಯಾಕ್ಟರ್ ಬಿದ್ದು ಮೂವರು ಯುವಕರು ಸಾವನ್ನಪ್ಪಿದ್ದಾರೆ. ಹೀಗಿದ್ದರೂ ಕೆಬಿಜೆಎನ್ನೆಲನವರು ಭಂಡತನ ತೋರಿಸುತ್ತಿದ್ದಾರೆ. ಜನರ ಸಾವಿಗೆ ಕೆಬಿಜೆಎನ್ನೆಲ್ ಅಧಿಕಾರಿಗಳೆ ಕಾರಣ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಚಿಂತನೆ ನಡೆಸಿದ್ದೇವೆ ಎಂದು ಆಕ್ರೋಶ ತೋಡಿಕೊಂಡರು.
ಇದನ್ನೂ ಓದಿ : ಪೊಲೀಸರಿಂದ ಮೋಸ ಆರೋಪ: ಸಿಎಂ ಎದುರೇ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ
ಶಾಸಕರ ಸೂಚನೆಗೂ ಇಲ್ಲ ಕಿಮ್ಮತ್ತು?:
ಘಟನೆ ನಡೆದ ಜಾಗದಲ್ಲಿ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿಯವರು ಕೆಲ ತಿಂಗಳ ಹಿಂದೆಯೇ ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯ ಅರಿವಿದ್ದರೂ ಅಧಿಕಾರಿಗಳು ಶಾಸಕರ ಸೂಚನೆ ಪಾಲಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಇದು ಶಾಸಕರ ಮಾತಿಗೂ ಕಿಮ್ಮತ್ತು ಕೊಡೊಲ್ಲ ಅನ್ನೋದನ್ನ ಸಾಬೀತುಪಡಿಸಿದಂತಾಗಿದೆ ಎಂದು ನೊಂದ ರೈತರು ಅಳಲು ತೋಡಿಕೊಂಡಿದ್ದಾರೆ.