Advertisement

Muddebihal ಭೀಕರ ಅಪಘಾತ: ಅತ್ತೆ, ಅಳಿಯ ಸಾವು; ಮಕ್ಕಳಿಬ್ಬರು ಚಿಂತಾಜನಕ

10:26 PM May 25, 2023 | Vishnudas Patil |

ಮುದ್ದೇಬಿಹಾಳ: ಭಾರಿ ವಾಹನವೊಂದು ಎರಡು ಬೈಕ್ ಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಚಕ್ರದಡಿ ಸಿಲುಕಿದ ಒಂದು ಬೈಕನಲ್ಲಿನ ಅತ್ತೆ, ಅಳಿಯ ಸ್ಥಳದಲ್ಲೇ ಸಾವನ್ನಪ್ಪಿ ಇಬ್ಬರು ಮಕ್ಕಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಇನ್ನೊಂದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ಮುದ್ದೇಬಿಹಾಳ ಪಟ್ಟಣದ ಹೊರವಲಯದ ತಂಗಡಗಿ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ 9-30 ಗಂಟೆ ಸುಮಾರಿಗೆ ನಡೆದಿದೆ.

Advertisement

ಮೃತ ಇಬ್ಬರ ದೇಹಗಳು ಚೂರು ಚೂರಾಗಿ ರಸ್ತೆಯಲ್ಲಿ ಚಲ್ಲಾಪಿಲ್ಲಿ ಆಗಿರುವುದು ಅಪಘಾತದ ಭೀಕರತೆ ಎತ್ತಿ ತೋರಿಸುವಂತಿತ್ತು. ಮೃತರನ್ನು ಹೆದ್ದಾರಿ ಪಕ್ಕದಲ್ಲೇ ಇರುವ ಮುದ್ನಾಳ ಗ್ರಾಮದ ಶರಣಮ್ಮ ಕಂಬಳಿ (55) ಮತ್ತು ಅಳಿಯ ನಾಗೇಶ ಶಿವಪೂರ (35) ಎಂದು ಗುರುತಿಸಲಾಗಿದೆ.

ಗಾಯಗೊಂಡಿರುವ ಕೃತಿಕಾ (10) ಮತ್ತು ಭೂಮಿಕಾ (8) ಇವರು ಮೃತ ನಾಗೇಶ ಅವರ ಮಕ್ಕಳು ಎಂದು ಮೂಲಗಳು ತಿಳಿಸಿವೆ. ಇನ್ನೊಂದು ಬೈಕ್ ಸವಾರ ಮುದ್ದೇಬಿಹಾಳದ ಮುತ್ತೂಟ್ ಫೈನಾನ್ಸನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸುಧೀರ ಬೇನಾಳ ಎಂದು ತಿಳಿದುಬಂದಿದ್ದು ಇವರೆಲ್ಲರಿಗೂ ಸ್ಥಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳಿಸಲು ಕ್ರಮ ಕೈಕೊಳ್ಳಲಾಗಿದೆ.

ಅತ್ತೆ ಮತ್ತು ಅಳಿಯ ಇಬ್ಬರೂ ಪಟ್ಟಣದ ಹಳೇ ತಹಶೀಲ್ದಾರ್ ಕಚೇರಿ ಎದುರು ಇರುವ ಮಿನಿ ಕಾಯಿಪಲ್ಯೆ ಮಾರ್ಕೆಟನಲ್ಲಿ ತರಕಾರಿ ಮಾರುವವರು. ರಾತ್ರಿ ದಿನದ ವ್ಯಾಪಾರ ಮುಗಿಸಿಕೊಂಡು ಮಕ್ಕಳ ಸಮೇತ ಊರಿಗೆ ಬೈಕನಲ್ಲಿ ಹೋಗುವಾಗ ಈ ದುರಂತ ಸಂಭವಿಸಿದೆ. ಕೇವಲ ಒಂದು ಕಿಮಿ ಅಂತರ ಕ್ರಮಿಸಿದ್ದರೆ ಇವರು ಮನೆ ಸೇರುತ್ತಿದ್ದರು. ಆದರೆ ಜವರಾಯ ಲಾರಿಯ ರೂಪದಲ್ಲಿ ಇವರ ಮೇಲೆರಗಿ ಪ್ರಾಣವನ್ನೇ ಕಸಿದದ್ದೂ ಅಲ್ಲದೆ ಮಕ್ಕಳನ್ನೂ ತಂದೆ ಇಲ್ಲದ ತಬ್ಬಲಿಯನ್ನಾಗಿ ಮಾಡಿದೆ ಎಂದು ಸೇರಿದ್ದ ಜನಸ್ತೋಮ ಮಾತನಾಡಿಕೊಳ್ಳುತ್ತಿತ್ತು.

ಘಟನೆಯ ಮಾಹಿತಿ ಪಡೆದ ಪೊಲೀಸರು ನೇಬಗೇರಿ ಗ್ರಾಮದ ಬಳಿ ಲಾರಿಯನ್ನು ಚಾಲಕನ ಸಮೇತ ವಶಪಡಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಂಬ್ಯುಲೆನ್ಸ್ ಮೃತ ದೇಹಗಳ ಛಿದ್ರವಾದ ಭಾಗಗಳನ್ನು ಸಲಿಕೆಯಿಂದ ಚೀಲದಲ್ಲಿ ತುಂಬಿ ಮರಣೋತ್ತರ ಪರೀಕ್ಷೆಗೆ ಒಯ್ಯಲಾಯಿತು. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಮೃತರ ಸಂಬಂಧಿಕರ ರೋಧನ ಮುಗಿಲು ಮುಟ್ಟುವಂತಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next