ಮುದ್ದೇಬಿಹಾಳ: ಅಪರಿಚಿತ ಘನ ವಾಹನ ಹರಿದು ಬೈಕ್ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಮುಖ್ಯ ರಸ್ತೆ ಮೇಲೆ ಶುಕ್ರವಾರ ರಾತ್ರಿ 8 ಗಂಟೆ ಸುಮಾರು ಬೆಳಕಿಗೆ ಬಂದಿದೆ.
ತಂಗಡಗಿ ಕ್ರಾಸನಿಂದ ಅಂದಾಜು 5-6 ಕಿಮಿ ಅಂತರದಲ್ಲಿ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಬಾಗಲಕೋಟ ಜಿಲ್ಲೆ ಕಿರಸೂರ ಗ್ರಾಮದ ಸಂಗಪ್ಪ ಭೀಮಶೆಪ್ಪ ಈರಗಾರ (35) ಎಂದು ಗುರುತಿಸಲಾಗಿದೆ. ಈತ ಸಮೀಪದ ಡಾಬಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಭಾರೀ ವಾಹನದ ಚಕ್ರಗಳು ಹೊಟ್ಟೆಯ ಮೇಲೆಯ ಹರಿದ ಪರಿಣಾಮ ಕರುಳು ದೇಹದಿಂದ ಹೊರಬಂದಿರುವುದು ಅಪಘಾತದ ತೀವ್ರತೆ ತೋರಿಸುತ್ತದೆ. ಇದೇ ರಸ್ತೆಯ ಸ್ವಲ್ಪ ದೂರದಲ್ಲಿ ಸಕ್ಕರೆ ಕಾರ್ಖಾನೆ ಇದೆ. ಅಲ್ಲಿಗೆ ಕಬ್ಬು ಸಾಗಿಸುವ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸುತ್ತವೆ. ಈ ಪೈಕಿ ಯಾವುದಾದರೂ ವಾಹನ ಹರಿದಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ.
ತಾನೇ ಚಲಾಯಿಸುತ್ತಿದ್ದ ಬೈಕ್ ಪಕ್ಕದಲ್ಲೇಬಿದ್ದಿದ್ದು. ಮುದ್ದೇಬಿಹಾಳ ಪಿಎಸೈ ಆರೀಫ ಮುಷಾಪುರಿ ಅವರು ಸಿಬಂದಿ ಸಮೇತ ಸ್ಥಳಕ್ಕೆ ಧಾವಿಸಿದ್ದು ಆಂಬುಲೆನ್ಸ್ ತರಿಸಿ ಶವವನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ತಕ್ಷಣದ ಕಾನೂನು ಕ್ರಮ ಕೈಕೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಸಂಪೂರ್ಣ ಕತ್ತಲೆ ಆವರಿಸಿದ್ದು ತನಿಖೆಗೆ ಅಡ್ಡಿಯಾಗಿತ್ತು.