Advertisement

ವಸತಿ ಶಾಲೆ ಕ್ವಾರಂಟೈನ್‌ ಕೇಂದ್ರವಾಗಿಸಲು ವಿರೋಧ

12:53 PM Apr 19, 2020 | Naveen |

ಮುದ್ದೇಬಿಹಾಳ: ಕೋವಿಡ್ ಪೀಡಿತರ ಸಂಪರ್ಕಕ್ಕೆ ಬಂದಿದ್ದರೂ ಕೋವಿಡ್ ಶಂಕಿತರಲ್ಲದವರನ್ನು ಮುನ್ನೆಚ್ಚರಿಕೆ ಕ್ರಮವಾಗಿ 28 ದಿನಗಳ ಕ್ವಾರಂಟೈನ್‌ ನಲ್ಲಿಡಲು ತಾಲೂಕಾಡಳಿತ ಪಟ್ಟಣದ ಮಾರುತಿ ನಗರದಲ್ಲಿನ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯನ್ನೇ ಕ್ವಾರಂಟೈನ್‌ ಕೇಂದ್ರವಾಗಿ ಪರಿವರ್ತಿಸಲು ಒಂದೆಡೆ ಪ್ರಯತ್ನ ನಡೆಸಿದ್ದರೆ ಮತ್ತೂಂದೆಡೆ ಬಡಾವಣೆ ಜನರು ಇದನ್ನು ವಿರೋಧಿಸಿ ಅ ಕಾರಿಗಳಿಗೆ ಘೇರಾವ್‌ ಹಾಕಿದ್ದೂ ಅಲ್ಲದೆ ಶಾಸಕರ ನಿವಾಸಕ್ಕೆ ತೆರಳಿ ವಿರೋಧ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆದಿದೆ.

Advertisement

ತಾಲೂಕುಮಟ್ಟದ ಕೋವಿಡ್‌-19 ನಿಯಂತ್ರಣ ತಂಡದ ಮುಖ್ಯಸ್ಥರಾಗಿರುವ ತಹಶೀಲ್ದಾರ್‌ ಜಿ.ಎಸ್‌.ಮಳಗಿ, ಸಿಪಿಐ ಆನಂದ ವಾಗಮೋಡೆ, ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ, ನೋಡಲ್‌ ಅ ಧಿಕಾರಿ ಎಚ್‌.ಎಲ್‌. ಕರಡ್ಡಿ, ಪುರಸಭೆ ಕಂದಾಯ ಅಧಿಕಾರಿ ಎಂ.ಬಿ. ಮಾಡಗಿ ಅವರು ಬೆಳಗ್ಗೆ ಶಾಲೆಗೆ ಭೇಟಿ ಕೊಟ್ಟು ಅಲ್ಲಿನ ವ್ಯವಸ್ಥೆ ಪರಿಶೀಲಿಸಿದ್ದರು. ಊರಿನ ಹೊರ ವಲಯದಲ್ಲಿರುವ ಈ ಶಾಲೆಯನ್ನೇ ತಾತ್ಕಾಲಿಕವಾಗಿ ಕ್ವಾರಂಟೈನ್‌ ಕೇಂದ್ರವನ್ನಾಗಿ ಪರಿವರ್ತಿಸುವ ಕುರಿತು ಚರ್ಚಿಸಿದ್ದರು. ಸಂಜೆ ಜಿಲ್ಲಾ ನೋಡಲ್‌ ಅಧಿಕಾರಿ ಇಲ್ಲಿಗೆ ಬಂದ ನಂತರ ಅದನ್ನು ಅಂತಿಮಗೊಳಿಸುವ ಕುರಿತು ತೀರ್ಮಾನಿಸಿದ್ದರು. ಅಲ್ಲದೆ ಕೇಂದ್ರದಲ್ಲಿ ಕ್ವಾರಂಟೈನ್‌ಗೊಳಗಾದವರಿಗೆ ಎಲ್ಲ ಸೌಲಭ್ಯ ಕಲ್ಪಿಸುವುದರ ಜೊತೆಗೆ ಇವರನ್ನು ಹೊರಗೆ ಹೋಗದಂತೆ ಕಾಯಲು ಪೊಲೀಸ್‌ ಸಿಬ್ಬಂದಿ ನಿಯೋಜಿಸುವ ಕುರಿತೂ ತೀರ್ಮಾನಿಸಿದ್ದರು.

ಈ ವಿಷಯ ತಿಳಿದ ಬಡಾವಣೆಯ ನೂರಾರು ನಿವಾಸಿಗಳು ಮಧ್ಯಾಹ್ನ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರ ದಾಸೋಹ ನಿಲಯಕ್ಕೆ ಧಾವಿಸಿ ತಮ್ಮ ಬಡಾವಣೆಯಲ್ಲಿನ ಈ ಶಾಲೆಯಲ್ಲಿ ಕೇಂದ್ರಕ್ಕೆ ಅವಕಾಶ ಮಾಡಿಕೊಡಬಾರದು. ಇಲ್ಲಿನ ನಿವಾಸಿಗಳು ಆರೋಗ್ಯದಿಂದಿದ್ದಾರೆ. ಹಾಸ್ಪಿಟಲ್‌ ಕ್ವಾರಂಟೈನ್‌ಗೊಳಗಾದವರನ್ನು ಇಲ್ಲಿ ತಂದಿಟ್ಟ ಮೇಲೆ ಅವರಲ್ಲಿ ಕೋವಿಡ್ ಪಾಸಿಟಿವ್‌ ಲಕ್ಷಣಗಳು ಕಂಡುಬಂದರೆ ಇಡಿ ಬಡಾವಣೆಯ ಚಟುವಟಿಕೆಗಳೇ ಸ್ತಬ್ಧಗೊಳ್ಳುವುದರ ಜೊತೆಗೆ ಜನತೆ ಆತಂಕದಲ್ಲಿ ಜೀವಿಸಬೇಕಾಗುತ್ತದೆ. ಆದ್ದರಿಂದ ಈ ಬಡಾವಣೆಯಲ್ಲಿ ಕೇಂದ್ರ ತೆರೆಯದಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿಕೊಂಡರು. ಇದಕ್ಕೆ ಶಾಸಕರು ಸ್ಪಂದಿಸಿ ಅಧಿಕಾರಿಗಳಿಗೆ ತಿಳಿಸುವುದಾಗಿ ಭರವಸೆ ನೀಡಿ ಕಳಿಸಿದ್ದರು.

ಆದರೆ ಸಂಜೆ ಅಧಿಕಾರಿಗಳ ತಂಡ ಮತ್ತೂಂದು ಬಾರಿ ಶಾಲೆಗೆ ಬಂದಾಗ ಘೇರಾವ್‌ ಹಾಕಲು ನೂರಾರು ಜನ ಸೇರಿದ್ದರು. ಈ ವೇಳೆ ಬಂದ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಲ್ಲಿಂದ ನಿರ್ಗಮಿಸುವಂತೆ ನೋಡಿಕೊಂಡರು. ಬಿದರಕುಂದಿ ಹೊರ ವಲಯದಲ್ಲಿರುವ ಅರಬ್ಬಿ ಮದ್ರಸಾ ಶಾಲೆ ಖಾಲಿ ಇದ್ದು ಅಲ್ಲಿ ಬೇಕಾದರೆ ಕೇಂದ್ರ ಮಾಡಿ. ಒಂದು ವೇಳೆ ಇಲ್ಲಿ ಕ್ವಾರಂಟೈನ್‌ ಕೇಂದ್ರ ತೆರೆದದ್ದೇ ಆದಲ್ಲಿ ಇಡಿ ಬಡಾವಣೆಯ ಜನತೆ ಇದನ್ನು ವಿರೋಧಿ ಸುವುದಾಗಿ ಎಚ್ಚರಿಕೆ ನೀಡಿದರು.

ಇದರಿಂದಾಗಿ ಈ ಶಾಲೆಯನ್ನು ಕ್ವಾರಂಟೈನ್‌ ಕೇಂದ್ರ ಮಾಡುವ ತಾಲೂಕಾಡಳಿತದ ಪ್ರಯತ್ನಕ್ಕೆ ಸಧ್ಯ ಹಿನ್ನೆಡೆ ಆದಂತಾಗಿದೆ. ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿನ ಐಸೋಲೇಷನ್‌ ವಾರ್ಡ್‌ನಲ್ಲಿರುವ ತಮದಡ್ಡಿ ಗ್ರಾಮದ 9 ಜನರಿಗೆ ಅಲ್ಲೇ ಕ್ವಾರಂಟೈನ್‌ ಮುಂದುವರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next