ಮುದ್ದೇಬಿಹಾಳ: ಮಂಗಳೂರು ಭಾಗದಲ್ಲಿನ ವಿವಿಧ ಕಲ್ಲು ಕ್ವಾರಿಗಳಲ್ಲಿ ದುಡಿಯಲು ಗುಳೆ ಹೋಗಿದ್ದ ಮುದ್ದೇಬಿಹಾಳ, ಬಸವನ ಬಾಗೇವಾಡಿ ತಾಲೂಕಿನ ಕೂಲಿಕಾರ್ಮಿಕರನ್ನು ಅಲ್ಲಿನ ಜಿಲ್ಲಾಡಳಿತ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳ ಮೂಲಕ ಇಲ್ಲಿಗೆ ಕಳಿಸಿಕೊಟ್ಟಿದೆ.
ಶನಿವಾರ ಇಲ್ಲಿನ ಬಸ್ ನಿಲ್ದಾಣಕ್ಕೆ ಬಂದಿಳಿದ ಅವರೆಲ್ಲರ ಆರೋಗ್ಯ ತಪಾಸಣೆ ನಡೆಸಿದ ಆರೋಗ್ಯ ಇಲಾಖೆ ಸಿಬ್ಬಂದಿ ಅವರ ಊರುಗಳಿಗೆ ಕಳಿಸಿಕೊಟ್ಟರು.
ದಕ್ಷಿಣಕನ್ನಡ ಜಿಲ್ಲೆಯ ಮೂಡುಬಿದರೆ, ಬಂಟ್ವಾಳ ಮುಂತಾದ ತಾಲೂಕುಗಳಲ್ಲಿ ದುಡಿಯಲು ಹೋಗಿದ್ದ ಇವರೆಲ್ಲರೂ ಲಾಕ್ ಡೌನ್‌ನಿಂದಾಗಿ ಅಲ್ಲೇ ಸಿಕ್ಕಿಹಾಕಿಕೊಂಡಿದ್ದರು. ಕೆಲಸ ಬಂದ್ ಆಗಿದ್ದರಿಂದ ಜಿಲ್ಲಾಡಳಿತ, ಸಂಘ ಸಂಸ್ಥೆಗಳು ನೀಡಿದ್ದ ನೆರವು ಮತ್ತು ತಮ್ಮ ಬಳಿ ದುಡಿದು ಸಂಗ್ರಹಿಸಿದ್ದ ಹಣದಲ್ಲಿ ಹೇಗೋ ಜೀವನ ನಡೆಸಿದ್ದರು.
ಇವರ ಸಂಕಷ್ಟವನ್ನು ಆಯಾ ಕ್ವಾರಿಗಳ ಮಾಲೀಕರು ಅಲ್ಲಿನ ಜಿಲ್ಲಾಡಳಿತದ ಗಮನಕ್ಕೆ ತಂದು ಇವರೆಲ್ಲರೂ ಆರೋಗ್ಯವಾಗಿದ್ದು, ಇವರನ್ನು ಅವರವರ ಊರುಗಳಿಗೆ ಕಳಿಸಿಕೊಡಲು ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದರಿಂದ ಅಲ್ಲಿನ ಸರ್ಕಾರದ ನಿರ್ದೇಶನದ ಮೇರೆಗೆ ಅಲ್ಲಿನ ಜಿಲ್ಲಾಡಳಿತ ಕೂಲಿ ಕಾರ್ಮಿಕರನ್ನು ಇಲ್ಲಿಗೆ ಕಳಿಸಿಕೊಟ್ಟಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಪ್ರತಿ ಬಸ್‌ನಲ್ಲಿ 19 ಜನರಂತೆ ಎರಡು ಬಸ್‌ಗಳಲ್ಲಿ 38 ಜನರನ್ನು ಕರೆದುಕೊಂಡು ಬರಲಾಗಿದೆ. ಇವರೆಲ್ಲರನ್ನೂ ತಾಲೂಕು ಆರೋಗ್ಯಾ ಧಿಕಾರಿ ಡಾ| ಸತೀಶ ತಿವಾರಿ, ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಡಾ| ಪ್ರವೀಣ ಸುಣಕಲ್, ನಗರ ಕೋವಿಡ್-19 ತಂಡದ ಮೇಲ್ವಿಚಾರಕ ಎಂ.ಎಸ್.ಗೌಡರ, ಎಂಟಿಎಸ್ ಎಸ್.ಸಿ.ರುದ್ರವಾಡಿ, ಆರೋಗ್ಯ ಸಹಾಯಕರಾದ ಎಸ್.ಆರ್.ಸಜ್ಜನ, ಶಿವಕಾಂತ ಮೇಟಿ, ಆಶಾ ಕಾರ್ಯಕರ್ತೆ ಮೋದಿನ್‌ಮಾ ಮುಲ್ಲಾ, ಸಾರಿಗೆ ಸಂಸ್ಥೆ ಘಟಕದ ಭದ್ರತಾ ಸಿಬ್ಬಂದಿ ಮತ್ತಿತರರು ಆರೋಗ್ಯ ತಪಾಸಣೆ ನಡೆಸುವಲ್ಲಿ ಸಹಕರಿಸಿದರು. ಕಾರ್ಮಿಕರೆಲ್ಲರಿಗೂ ಅವರವರ ಊರುಗಳಿಗೆ ತಲುಪಿದ ಮೇಲೆ ಕಡ್ಡಾಯವಾಗಿ ಹೋಮ್ ಕ್ವಾರಂಟನ್ ನಲ್ಲಿಡಲು ಆರೋಗ್ಯ ಇಲಾಖೆ ಸಿಬ್ಬಂದಿ ಕ್ರಮ ಕೈಕೊಂಡರು