Advertisement

ಬಾಳೆಹಣ್ಣು ತಿಂದರೆ ಅನಾರೋಗ್ಯ ಗ್ಯಾರಂಟಿ!

01:19 PM Apr 12, 2020 | Naveen |

ಮುದ್ದೇಬಿಹಾಳ: ಪಟ್ಟಣ ಸೇರಿದಂತೆ ತಾಲೂಕಿನ ಹಲವು ಕಡೆ ಕಳಪೆ ಮಟ್ಟದ, ಅತಿಯಾದ ರಾಸಾಯನಿಕ ಬಳಸಿ ಕೃತಕವಾಗಿ ಮಾಗಿಸಿದ ಬಾಳೆಹಣ್ಣು ವ್ಯಾಪಕವಾಗಿ ಮಾರಾಟವಾಗತೊಡಗಿದ್ದು, ಆರೋಗ್ಯ ವೃದ್ಧಿಸಬೇಕಿರುವ ಹಣ್ಣು ಸೇವನೆಯಿಂದಲೇ ಅನಾರೋಗ್ಯ ಕಾಡುವ ಆತಂಕವಿದ್ದು, ಗ್ರಾಹಕರು ಹಣ್ಣು ಖರೀದಿಸುವ ಮುನ್ನ ಎಚ್ಚರ ವಹಿಸಬೇಕಿದೆ.

Advertisement

ಕೊರೊನಾದಿಂದಾಗಿ ಲಾಕ್‌ ಡೌನ್‌ ಆಗಿರುವ ಪರಿಣಾಮ ಜನರು ತಳ್ಳುಗಾಡಿಯಲ್ಲಿ ಬಡಾವಣೆಗೆ ಬರುವ ಮಾರಾಟಗಾರರಿಂದ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ಬಾಳೆಹಣ್ಣು ಉಪಯುಕ್ತ, ಆರೋಗ್ಯವರ್ಧಕವೆಂದು ತಿಳಿದಿರುವ ಅನೇಕರು ಸೇವಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಇದರ ದುರ್ಲಾಭ ಪಡೆಯುತ್ತಿರುವ ಕೆಲವು ಸಗಟು ಮಾರಾಟಗಾರರು ಕೃತಕವಾಗಿ ಹಣ್ಣುಮಾಡಿದ ಬಾಳೆಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಹಣದಾಸೆಗೆ ಕೆಲವು ಹಣ್ಣು ಮಾರಾಟಗಾರರು ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.

ಇಲ್ಲಿನ ಗ್ರಾಹಕರೊಬ್ಬರು ಬೆಳಗ್ಗೆ ಖರೀದಿಸಿದ್ದ ಬಾಳೆಹಣ್ಣು ಮರುದಿನವೇ ಸಿಪ್ಪೆ ಹಳದಿ ಬಣ್ಣ ಕಳೆದುಕೊಂಡು ಕಂದುಬಣ್ಣಕ್ಕೆ ತಿರುಗಿದೆ. ಸಿಪ್ಪೆ ಸುಲಿದು ನೋಡಿದರೆ ತಿರುಳಿನಲ್ಲಿ ಚುಕ್ಕೆರೂಪದ ಸಣ್ಣ ಪ್ರಮಾಣದ ಕಪ್ಪು ರಂಧ್ರಗಳು ಕಂಡುಬಂದಿದ್ದು, ಗ್ರಾಹಕರಲ್ಲಿ ಇನ್ನೂ ಆತಂಕ ಹೆಚ್ಚಿಸಿದೆ. ಇಂಥದ್ದೇ ಅನುಭವ ಹಲವರಿಗೆ ಆಗಿದ್ದು, ಕಾಯಿ ಬೇಗ ಮಾಗಲು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕದಲ್ಲಿ ಅದ್ದಿರಬಹುದು. ಅಥವಾ ಹಣ್ಣಿನೊಳಕ್ಕೆ ನೇರವಾಗಿ ಇಂಜೆಕ್ಷನ್‌ನ ಮೂಲಕ ರಾಸಾಯನಿಕ ಬಿಟ್ಟು ಬೇಗ ಹಣ್ಣಾಗುವಂತೆ ಮಾಡಿರಬಹುದು.

ತೋಟದಿಂದ ತರುವ ಕಾಯಿಯನ್ನು ಹಣ್ಣು ಮಾಡಲು ಸಗಟು ಮಾರಾಟಗಾರರು ಮಿಥೈಲ್‌ ಅಥವಾ ಕ್ಯಾಲ್ಸಿಯಂ ಕಾಬೈìಡ್‌ ಬಳಸುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಇವುಗಳ ಪ್ರಮಾಣ ಹೆಚ್ಚಾದಲ್ಲಿ ಹೃದಯ ರೋಗ ಹಾಗೂ ಕಿಡ್ನಿ ಅಪಾಯ ಸಂಭವವಿದೆ. ಎರಡೂ ಪ್ರಕರಣಗಳಲ್ಲಿ ರಾಸಾಯನಿಕ ಪ್ರಮಾಣ ಹೆಚ್ಚಾಗಿದ್ದರಿಂದಲೇ ಬಾಳೆಹಣ್ಣು ಕಂದು ಬಣ್ಣಕ್ಕೆ ತಿರುಗಿರಬಹುದು. ಇದನ್ನು ತಡೆಗಟ್ಟಿ ಜನರ ಆರೋಗ್ಯ ಕಾಪಾಡಲು ಸಂಬಂಧಪಟ್ಟ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕಿದೆ .

ಬಾಳೆಹಣ್ಣಿನಲ್ಲಿ ಕಪ್ಪುರಂಧ್ರ ಕ್ಯಾಲ್ಸಿಯಂ ಕಾರ್ಬೈಡ್‌ ಇಂಜೆಕ್ಟ್ ಮಾಡಿದ್ದರ ಸಂಕೇತ ಇರಬಹುದು. ಇದು ಮಾನವ ದೇಹಕ್ಕೆ ವಿಷಕಾರಿ. ಜನರು ಇಂಥ ಬಾಳೆಹಣ್ಣು ಸೇವನೆಯಿಂದ ದೂರ ಇರುವುದು ಉತ್ತಮ. ಸಿಪ್ಪೆ ಸುಲಿದ ಮೇಲೆ ಹಣ್ಣು ನೋಡದೆ ತಿನ್ನಬಾರದು.
ಡಾ| ಉತ್ಕರ್ಷ, ನಾಗೂರ

Advertisement

ಕೃತಕವಾಗಿ ಮಾಗಿಸಲು ಬಳಸುವ ಮಿಥೈಲ್‌, ಕ್ಯಾಲ್ಸಿಯಂ ಕಾರ್ಬೈಡ್‌ ಸುಲಭವಾಗಿ ದೊರೆಯುತ್ತಿಲ್ಲ. ಆದರೂ ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಶೀಘ್ರ ತನಿಖೆ ನಡೆಸಿ ದಂಧೆ ಮಟ್ಟಹಾಕುತ್ತೇವೆ.
ಶಂಕರಗೌಡ ಕಂತಲಗಾಂವಿ,
ಆಹಾರ ಗುಣಮಟ್ಟ ಸುರಕ್ಷತಾ ಅಧಿಕಾರಿ, ಮುದ್ದೇಬಿಹಾಳ

ಡಿ.ಬಿ.ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next