ಮುದ್ದೇಬಿಹಾಳ: ವಾಸ್ತವ ವರದಿ ತಯಾರಿಸದಿದ್ದರೆ ಅನ್ಯಾಯಕ್ಕೊಳಗಾಗುವ ರೈತ ಅಸಹಾಯಕತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ತಲೆದೋರಬಹುದು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಪ್ರವಾಹ ನಿರ್ವಹಣೆ ನೋಡಲ್ ಅಧಿಕಾರಿಗಳು ಮೇಲಧಿಕಾರಿಗಳು, ಕೆಳಹಂತದ ಸಿಬ್ಬಂದಿಯೊಂದಿಗೆ ಪರಸ್ಪರ ಸಮನ್ವಯ ಸಾಧಿಸಿಕೊಂಡು ಸಂತ್ರಸ್ತರಿಗೆ ಅನ್ಯಾಯ ಆಗದಂತೆ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದ್ದಾರೆ.
ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ರವಿವಾರ ನೋಡಲ್ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನ, ಜಾನುವಾರುಗಳು ವಾಸಮಾಡುವ ಪ್ರತಿ ಮನೆಯನ್ನೂ ಸಮೀಕ್ಷೆ ನಡೆಸಬೇಕು. ಬೆಳೆ ಹಾನಿ ಬಗ್ಗೆ ಹೆಚ್ಚು ನಿಖರತೆ ಇರಬೇಕು. ಇವೆಲ್ಲವುಗಳ ವಾಸ್ತವ ವರದಿ ತಯಾರಿಸಬೇಕು. ಇದಕ್ಕಾಗಿ ಎಲ್ಲ ಹಂತಗಳ ಅಧಿಕಾರಿಗಳು ಪರಸ್ಪರ ಸಂಪರ್ಕದಲ್ಲಿದ್ದು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಮನೆಗಳಿಗೆ ಒಂದು ಬಾರಿ ಪ್ರವಾಹದ ನೀರು ಹೊಕ್ಕ ಮೇಲೆ ಅವು ವಾಸಕ್ಕೆ ಅಯೋಗ್ಯವಾಗುತ್ತವೆ ಎನ್ನುವುದನ್ನು ಸಮೀಕ್ಷೆ ಮಾಡುವವರು ಗಮನದಲ್ಲಿಟ್ಟುಕೊಳ್ಳಬೇಕು. ಪ್ರವಾಹದ ನೀರು ಇಳಿದ ಮೇಲೂ ಅಲ್ಲಿ ಸಾಕಷ್ಟು ಸಮಸ್ಯೆಗಳು ತಲೆದೋರುತ್ತವೆ ಎನ್ನುವುದನ್ನು ಅರಿಯಬೇಕು. ಕೃಷಿಗಾಗಿ, ಮನೆಯಲ್ಲಿ ನಿತ್ಯದ ಬಳಕೆಗಾಗಿ ಬಳಸುವ ಎಲ್ಲವನ್ನೂ ಸಮೀಕ್ಷೆಯಲ್ಲಿ ಪರಿಗಣಿಸಬೇಕು. ಯಾವೊಂದು ವಸ್ತು, ಸಾಮಗ್ರಿ, ಸಲಕರಣೆ ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು ಎಂದರು.
ಜನ, ಜಾನುವಾರುಗಳಿಗೆ ಆಗಿರುವ ತೊಂದರೆ, ಅನಾರೋಗ್ಯಕ್ಕೀಡಾದವರ ಆರೋಗ್ಯ ಕಾಳಜಿ ಮುಂತಾದವುಗಳಿಗೆ ಹೆಚ್ಚು ಆದ್ಯತೆ ಕೊಡಬೇಕು. ಪಶು ಸಂಗೋಪನೆ ಇಲಾಖೆಯವರು ಜಾನುವಾರುಗಳ ವರದಿ ತಯಾರಿಸಬೇಕು. ಆರೋಗ್ಯ ಇಲಾಖೆಯವರು ಸಂತ್ರಸ್ತರಿಗೆ, ಪ್ರವಾಹ ಪೀಡಿತರಿಗೆ ಆರೋಗ್ಯ ಸಂಬಂಧಿತ ನೆರವು ನೀಡಿ ಔಷಧಗಳ ಕೊರತೆ ಆಗದಂತೆ ಜಾಗೃತೆ ವಹಿಸಬೇಕು. ಕೃಷಿ, ತೋಟಗಾರಿಕೆ ಇಲಾಖೆಯವರು ಬೆಳೆ ಹಾನಿಯ ವಾಸ್ತವ ವರದಿ ತಯಾರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ವಿಜಯಪುರ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಇದುವರೆಗೂ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಸಂತ್ರಸ್ತರ ರಕ್ಷಣೆಗೆ, ಸೌಲಭ್ಯ ಕಲ್ಪಿಸಲು ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿದರು. ಹಾನಿ ಸಮೀಕ್ಷೆಗಾಗಿ ಜಿಲ್ಲಾಡಳಿತ ನಿಗದಿತ ನಮೂನೆಯ ಫಾರ್ಮ್ನ್ನು ಸಿದ್ಧಪಡಿಸಿದ್ದು ಅದರಲ್ಲಿರುವಂತೆ ಸಮೀಕ್ಷೆ ನಡೆಸಲಾಗುತ್ತದೆ. ಸದ್ಯ ಗ್ರಾಮಗಳಲ್ಲಿ ಇನ್ನೂ ನೀರಿದೆ. ಎಲ್ಲ ನೀರು ಇಳಿದ ಮೇಲೆ ಹಾನಿಯ ನಿಖರ ಮಾಹಿತಿ ದೊರಕಲಿದ್ದು ಆನಂತರವೇ ಸಮೀಕ್ಷೆ ಪ್ರಾರಂಭಿಸಲಾಗುತ್ತದೆ ಎಂದರು.
ಜಿಪಂ ಅಧಿಕಾರಿ ಸಿ.ಬಿ. ಕುಂಬಾರ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಹೇಶ ಪೋತದಾರ, ವಿಜಯಪುರ ಎಸಿ ಕಚೇರಿ ತಹಶೀಲ್ದಾರ್ ಜಿ.ಎಸ್. ಹಿರೇಮಠ, ಮುದ್ದೇಬಿಹಾಳ ತಹಶೀಲ್ದಾರ್ ವಿನಯ್‌ಕುಮಾರ ಪಾಟೀಲ, ನೋಡಲ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.