ಮುದ್ದೇಬಿಹಾಳ: ಮೊಗೆದಷ್ಟು ಬೊಗಸೆ ತುಂಬ ಎನ್ನುವಂತೆ ಇಲ್ಲಿನ ಕೆಬಿಎಂಪಿ ಶಾಲೆ ಸುತ್ತಲೂ ಸಮಸ್ಯೆಗಳ ಸಾಗರವೇ ಉದ್ಭವವಾಗಿರುವುದು ಬೆಳಕಿಗೆ ಬಂದಿದೆ. ಸ್ವಚ್ಛತೆ ಇಲ್ಲಿ ಮರೀಚಿಕೆಯಾಗಿದೆ. ಬಸ್‌ನಿಲ್ದಾಣದ ಸಾರ್ವಜನಿಕ ಶೌಚಾಲಯದಿಂದ ಹೊರಸೂಸುವ ಗಲೀಜು, ಬಸ್ ನಿಲ್ದಾಣ ಮತ್ತು ನಿಲ್ದಾಣ ಹೊರಭಾಗದ ಸಣ್ಣ ಪುಟ್ಟ ವ್ಯಾಪಾರಸ್ಥರು ತಂದೊಗೆಯುವ ಕಸಕಡ್ಡಿ, ಬಾಲಕ ಮತ್ತು ಬಾಲಕಿಯರ ಶೌಚಾಲಯ, ಮೂತ್ರಾಲಯದಲ್ಲಿನ ಅನೈರ್ಮಲ್ಯ ವಾತಾವರಣ, ಕಾಂಪೌಂಡ್‌ನ ಒಡೆದ ಭಾಗದಿಂದ ಒಳ ನುಗ್ಗುವ ಹಂದಿಗಳು, ಶಾಲೆಯ ಒಂದು ಭಾಗದಲ್ಲಿ ಇರುವ ಹೋಟೆಲುಗಳ ಸಮಸ್ತ ಕಸ.
Advertisement
ಇವೆಲ್ಲ ಸರ್ಕಾರಿ ಶಾಲೆ ವಾತಾವರಣವನ್ನೇ ಹಾಳುಗೆಡವಿದ್ದು ಇಲ್ಲಿ ಆರೋಗ್ಯ ನಾಸ್ತಿ ಎನ್ನುವಂತಿರುವುದು ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಾಗಿದೆ. ಶಾಲೆ ಕಾಂಪೌಂಡ್‌ಗೆ ಹೊಂದಿಕೊಂಡು ಬಸ್‌ನಿಲ್ದಾಣ ಇದೆ. ಶಾಲೆಯ ಒಂದು ಭಾಗದ ಅಂದಾಜು 15 ಕೊಠಡಿಗಳಿಗೆ ನಿಲ್ದಾಣದಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ. ನಿಲ್ದಾಣದ ಸಾರ್ವಜನಿಕ ಶೌಚಾಲಯದ ಕೊಳಚೆ ಸುರಕ್ಷಿತವಾಗಿ ವಿಸರ್ಜನೆ ಆಗಲು ಯಾವುದೇ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆ ಗಂಭೀರವಾಗಿಸಿದೆ. ಪ್ರತಿ ತಿಂಗಳಿಗೊಮ್ಮೆ ಕೊಳಚೆ ಸ್ವತ್ಛಗೊಳಿಸಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ.
Related Articles
Advertisement
ಬಾಲಕಿಯರ ಶೌಚಾಲಯದ ಮೇಲ್ಭಾಗ ಯಾವುದೇ ಮೇಲ್ಛಾವಣಿ ಇಲ್ಲದಿರುವುದು ಕಿಡಿಗೇಡಿಗಳು ಪಕ್ಕದ ಹೋಟೆಲ್ ಮೇಲೆ ಏರಿ, ಇಲ್ಲವೇ ನಿಲ್ದಾಣದ ಕೆಳಮಟ್ಟದ ಕಾಂಪೌಂಡ್ ಮೇಲೆ ನಿಂತು ಕಳ್ಳತನದಿಂದ ಫೋಟೊ ತೆಗೆದು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಮಕ್ಕಳ ಮಾನ ಹರಾಜು ಹಾಕಿದ ಘಟನೆಗಳು ನಡೆದಿವೆ. ಬಾಲಕರ ಶೌಚಾಲಯ ಹೆಸರಿಗೆ ಮಾತ್ರ ಇದ್ದು ಬಳಕೆ ಆಗುವುದೇ ಇಲ್ಲ.
ಶಾಲೆ ಹಿಂದಿನ ಬಯಲು ಜಾಗದಲ್ಲೇ ಮಲ, ಮೂತ್ರ ವಿಸರ್ಜನೆ ನಿರಂತರ ನಡೆದು ಶಾಲಾ ವಾತಾವರಣ ಹಾಳುಗೆಡವಿದೆ. ಒಟ್ಟಾರೆ ಹೇಳುವುದಾದರೆ ಶಾಲೆಯ ಬಸ್ ನಿಲ್ದಾಣ ಮತ್ತು ಹೋಟೆಲುಗಳು ಇರುವ ಭಾಗ ತಿಪ್ಪೆಗುಂಡಿಯಂತಾಗಿದೆ. ಶಿಕ್ಷಕರು ಮಕ್ಕಳನ್ನು ಕರೆದುಕೊಂಡು ಸ್ವತ್ಛತೆ ನಡೆಸಿದರೂ ಪ್ರಯೋಜನ ಶೂನ್ಯ ಎನ್ನುವಂತಿದೆ.
ಇದೆಲ್ಲ ಅವ್ಯವಸ್ಥೆ ಹೋಗಲಾಡಿಸಿ ಶಾಲೆಯ ಒಳಗಿನ ಆವರಣವನ್ನು ಗಲೀಜು, ಮಲೀನರಹಿತವಾಗಿ ಕಾಪಾಡಬೇಕಾದರೆ ಜೆಸಿಬಿ ಯಂತ್ರ ಬಳಸಿ ಶಾಲೆಯ ಕೊಠಡಿಗಳ ಹಿಂದಿನ ಮಲೀನತೆಯನ್ನೆಲ್ಲಾ ಬೇರೆಡೆ ಸಾಗಿಸಬೇಕು. ಕಾಂಪೌಂಡ್ ಎತ್ತರಿಸಿ ಸುತ್ತಲಿನ ನೆಲವನ್ನು ಸಮತಟ್ಟು ಮಾಡಿ ಅಲ್ಲಿ ಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಿ ಕೈತೋಟ ನಿರ್ಮಿಸಬೇಕು. ಇದರಿಂದ ಪರಿಸರವೂ ಸುಂದರವಾಗಿ ಬದಲಾಗಿ ಮಕ್ಕಳಿಗೆ, ಶಿಕ್ಷಕರಿಗೆ ಮನೋಲ್ಲಾಸ ಜೊತೆಗೆ ಕೈ ತೋಟದಲ್ಲಿ ಪ್ರಾಯೋಗಿಕ ತರಬೇತಿ ಕೊಡುವುದು ಹೆಚ್ಚು ಫಲಪ್ರದ ಆಗಬಹುದಾಗಿದೆ ಎನ್ನುವ ಮಾತು ಶಿಕ್ಷಣ ತಜ್ಞರಿಂದ ಕೇಳಿ ಬರುತ್ತಿದೆ.