Advertisement

Mudbidri: ದುರ್ಬಲ ನೀರ್ಕೆರೆ ಸೇತುವೆ; ಹೊಸ ವರುಷಕ್ಕೆ ಹೊಸತು?

02:38 PM Jan 02, 2025 | Team Udayavani |

ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ನೀರ್ಕೆರೆಯಲ್ಲಿರುವ 31 ವರ್ಷ ಹಳೆಯ ಸೇತುವೆ ಹೊಸ ವರುರ್ಷಕ್ಕೆ ಹೊಸತಾಗಿ ನಿರ್ಮಾಣವಾಗಲಿದೆ. ಈ ಸೇತುವೆ ತೀರಾ ದುರ್ಬಲವಾಗಿದ್ದು, ಘನ ವಾಹನಗಳ ಓಡಾಟ ಹೆಚ್ಚಾಗಿರುವಂತೆಯೇ ಸೇತುವೆ ಗಡಗಡ ನಡುಗುತ್ತಲಿದೆ. ಜಲ್ಲಿ, ಕಲ್ಲು ಹೊತ್ತ ಭಾರೀ ಭಾರೀ ವಾಹನಗಳು ನಿರಂತರ ಓಡಾಡುತ್ತಲಿವೆ. ಸೇತುವೆಯ ಧಾರಣ ಶಕ್ತಿ ಇದನ್ನೆಲ್ಲ ತಡೆದುಕೊಳ್ಳುವ ಸ್ಥಿತಿಯಲ್ಲಿಲ್ಲ, ಬುಡವೂ ಕರಗುತ್ತ ಬಂದಿದೆ.

Advertisement

ಎರಡು ಗ್ರಾಮಗಳ ಸಂಪರ್ಕ ಸೇತುವೆ
ಈ ಸೇತುವೆ ಒಂದೊಮ್ಮೆ ಕುಸಿದು ಹೋದಲ್ಲಿ ಅಶ್ವತ್ಥಪುರ ಮತ್ತು ನೀರ್ಕೆರೆ ನಡುವಿನ ಸಂಪರ್ಕವೇ ಕಡಿದು ಹೋದಂತಾಗುವ ಅಪಾಯವಿದೆ. ಈ ಪರಿಸರದವರು ಆರೇಳು ಕಿ.ಮೀ. ಸುತ್ತಿ ಮಂಗಳೂರು-ಮೂಡುಬಿದಿರೆ ರಾ.ಹೆ. ತಲುಪಬೇಕಾಗುವ ಸ್ಥಿತಿ ನಿರ್ಮಾಣವಾಗಲಿದೆ. ಶಾಲೆ, ಕಾಲೇಜು, ಕಚೇರಿಗಳಿಗೆ ಹೋಗುವವರಿಗೆ, ಕೃಷಿಕರಿಗೆ ಬಹಳ ಸಮಸ್ಯೆಯಾಗಲಿದೆ. ಇದನ್ನೆಲ್ಲ ಮನಗಂಡು, ಹೊಸ ಸೇತುವೆ ನಿರ್ಮಾಣಕ್ಕಾಗಿ ಜನತೆ ಶಾಸಕ ಉಮಾನಾಥ ಕೋಟ್ಯಾನ್‌ ಮೂಲಕ ಬೇಡಿಕೆ ಇರಿಸಿದ್ದು ಇನ್ನೇನು ಈ ಸೇತುವೆ ಹೊಸ ವರುಷಕ್ಕೆ ಹೊಸದಾಗಿ ನಿರ್ಮಾಣವಾಗುವ ಬೆಳವಣಿಗೆ ಕಂಡಿದೆ.

ಇದೀಗ ತಿಳಿದುಬಂದ ಪ್ರಕಾರ, 9.90 ಕೋಟಿ ರೂ. ವೆಚ್ಚದಲ್ಲಿ 9.5 ಮೀ. ಅಗಲ, 40 ಮೀ. ಉದ್ದದ ಸೇತುವೆ ನಿರ್ಮಾಣಗೊಳ್ಳಲಿದೆ. ಜಲಜೀವನ್‌ ಮಿಷನ್‌ನ ಪೈಪ್‌ಲೈನ್‌ ಹಾದುಹೋಗಲು ಪ್ರತ್ಯೇಕ ವ್ಯವಸ್ಥೆ, ತಾತ್ಕಾಲಿಕ ರಸ್ತೆ ನಿರ್ಮಿಸಿ ಜನ, ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸುವುದಾಗಲಿದೆ ಎಂದು ತಿಳಿದುಬಂದಿದೆ. ಮೂವತ್ತು ವರ್ಷಗಳಲ್ಲೇ ಸೇತುವೆ ಜೀರ್ಣವಾಗಿ ಹೋಯಿತೇ? ಹೊಸದಾಗಿ ನಿರ್ಮಾಣವಾಗುವ ಇಷ್ಟು ಚಿಕ್ಕ ಸೇತುವೆಗೆ ಇಷ್ಟೊಂದು ದೊಡ್ಡ ಮೊತ್ತದ ಎಸ್ಟಿಮೇಟೆ? ಎಂದು ಜನ ಹುಬ್ಬನ್ನೇರಿಸುವಂತೆಯೇ ಏನಾದರಾಗಲೀ ಸೇತುವೆ ಆಗುವುದಲ್ಲ ಎಂದು ಕಾಯುತ್ತಲಿದ್ದಾರೆ.

ಸೇತುವೆ ದುರ್ಬಲ
1987ರಲ್ಲಿ ಶಾಸಕರಾಗಿದ್ದ ಅಮರನಾಥ ಶೆಟ್ಟಿ ಅವರು ಎರಡನೇ ಬಾರಿ ಸಚಿವರಾದಾಗ ಈ ಸೇತುವೆಯ ಶಂಕುಸ್ಥಾಪನೆ ನೆರವೇರಿಸಲಾಗಿದ್ದು 1993ರಲ್ಲಿ ಸೋಮಪ್ಪ ಸುವರ್ಣರ ಕಾಲದಲ್ಲಿ ಉದ್ಘಾಟನೆಯಾಗಿತ್ತು. ಇದಾಗಿ ಬರೇ 31 ವರ್ಷಗಳಷ್ಟೇ ಉರುಳಿವೆ, ಸೇತುವೆ ದುರ್ಬಲವಾಗಿ ಹೋಗಿದೆ. ಸರಕಾರಿ ನಿಯಮದ ಪ್ರಕಾರ ಮೂವತ್ತು ವರ್ಷ ದಾಟಿದ ಕಟ್ಟಡ, ಸೇತುವೆ ಮೊದಲಾದ ನಿರ್ಮಾಣಗಳನ್ನು ಕಿತ್ತು ಹೊಸದಾಗಿ ನಿರ್ಮಿಸಲು ಅವಕಾಶವಿದೆ. ಈ ಅವಕಾಶದ ಸದುಪಯೋಗ ನೀರ್ಕೆರೆ ಸೇತುವೆಗೂ ಬರುವಂತಾಗಿದೆ.

-ಧನಂಜಯ ಮೂಡುಬಿದಿರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next