Advertisement

Mudbidri: 4 ತಿಂಗಳಲ್ಲಿ 3 ಮನೆ ಕಟ್ಟಿದ ಒಂಟಿ ಸಾಹಸಿ

01:07 PM Sep 15, 2024 | Team Udayavani |

ಮೂಡುಬಿದಿರೆ: ಅವರೊಬ್ಬ ಸಾಮಾನ್ಯ ಆ್ಯಂಬುಲೆನ್ಸ್‌ ಚಾಲಕ. ತುಂಬ ಸ್ಥಿತಿವಂತರೇನೂ ಅಲ್ಲ. ಆದರೆ ಕಷ್ಟಕ್ಕೆ ಮರುಗುವ ಹೃದಯ. ಈ ಹೃದಯವಂತ ಇದೀಗ ನಾಲ್ಕು ತಿಂಗಳಲ್ಲಿ ಮೂರು ಬಡವರಿಗೆ ಮನೆ ಕಟ್ಟಿಕೊಟ್ಟಿದ್ದಾರೆ. ಅವರೇ ಮೂಡುಬಿದಿರೆಯ ಅನಿಲ್‌ ಮೆಂಡೋನ್ಸಾ. ಕೇರ್‌ ಚಾರಿಟೆಬಲ್‌ ಟ್ರಸ್ಟ್‌ ಹೆಸರಲ್ಲಿ ಸೇವೆ ಮಾಡುತ್ತಿದ್ದಾರೆ.

Advertisement

ಕರಿಂಜೆಯಲ್ಲಿ ‘ಅನುಗ್ರಹ’, ಅಲಂಗಾರ್‌ನಲ್ಲಿ ‘ಆಶೀರ್ವಾದ’ ನಿರ್ಮಿಸಿದ ಬೆನ್ನಲ್ಲೇ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ನೆತ್ತೋಡಿಯ ನೆಕ್ಕಿದಡ್ಪು ಗುಡ್ಡದಲ್ಲಿ ‘ಆಸರೆ’ ಎಂಬ ಮೂರನೇ ಮನೆಯನ್ನು ಪೂರ್ಣ ಗೊಳಿಸುವ ಹಂತದಲ್ಲಿದ್ದಾರೆ.

ಅಸಹಾಯಕ ಕುಟುಂಬಕ್ಕೆ ಆಸರೆ
ಗೇರುಬೀಜ ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿರುವ ವನಿತಾ ಅವರು ಪತಿ ಶ್ರೀನಿವಾಸ ಜತೆಗೂಡಿ ನೆತ್ತೋಡಿಯ ನೆಕ್ಕಿದಡ್ಪು ಗುಡ್ಡದಲ್ಲಿ ಅಕ್ರಮ ಸಕ್ರಮದಲ್ಲಿ ಲಭ್ಯ ನಿವೇಶನದಲ್ಲಿ ಪುಟ್ಟ ಮನೆ ಕಟ್ಟುವ ಕನಸನ್ನು ಕಂಡಿದ್ದರು. ಆದರೆ ಎಂಟು ತಿಂಗಳುಗಳ ಹಿಂದೆ ಕೆಲಸ ಆರಂಭಿಸುವಾಗಲೇ ಪತಿಯನ್ನು ಕಳಕೊಂಡರು. ಅವರ ಜತೆ ಹೈಸ್ಕೂಲು, ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಇಬ್ಬರು ಪುತ್ರರೂ ಇದ್ದಾರೆ. ಕೈಯಲ್ಲಿ ಬಿಡಿಗಾಸಿಲ್ಲ, ಬದುಕು ಸಾಗಿಸುವುದೇ ಕಷ್ಟಕರವಾಗಿರುವಾಗ ಈ ಅರ್ಧದಲ್ಲೇ ನಿಂತ ಮನೆ ನಿರ್ಮಾಣ ಕಾರ್ಯವನ್ನು ಮುಂದುವರಿ ಸುವುದಾದರೂ ಹೇಗೆ ಎಂಬ ಪ್ರಶ್ನೆ ಎದುರಾಗಿತ್ತು.

ಅನಿಲ್‌ ಮೆಂಡೋನ್ಸಾ ನೆರವು
ಈ ವಿಚಾರ ಅಲಂಗಾರಿನಲ್ಲಿ ಎರಡನೇ ಮನೆಯನ್ನು ಪುನರ್‌ನಿರ್ಮಿಸುತ್ತಿದ್ದ ಅನಿಲ್‌ ಮೆಂಡೋನ್ಸಾ ಅವರಿಗೆ ಆಕಸ್ಮಿಕವಾಗಿ ತಿಳಿಯಿತು. ಅವರ ಕೈಯಲ್ಲೂ ಹಣವಿರಲಿಲ್ಲ. ಆದರೂ ಈ ಕುಟುಂಬಕ್ಕೆ ನೆರವಾಗಲೇಬೇಕು ಎಂದು ನಿರ್ಧರಿಸಿದರು. ಅವರಿಗೆ ಇನ್ನೂ ಕೆಲವು ಹೃದಯವಂತರು ಜತೆಯಾದರು.

Advertisement

ಅನಿಲ್‌ ಮೆಂಡೋನ್ಸಾ ಸದಸ್ಯರಾಗಿರುವ ಮೂಡುಬಿದಿರೆ ಲಯನ್ಸ್‌ ಕ್ಲಬ್‌ 20,000 ರೂ. ನೀಡಿತು. ಗೆಳೆಯ ಗಾಡ್ವಿನ್‌ ಫೆರ್ನಾಂಡಿಸ್‌ 300 ಕೆಂಪು ಕಲ್ಲು ಕೊಟ್ಟರು. ಕೃಷಿಕ, ಗುತ್ತಿಗೆದಾರ ಅಲ್ವಿನ್‌ ಮಿನೇಜಸ್‌ ಶೌಚಾಲಯದ ಗುಂಡಿ ತೆಗೆದುಕೊಟ್ಟರು. ಇದೀಗ ಮನೆ ಪೂರ್ಣಗೊಳ್ಳುವ ಹಂತದಲ್ಲಿದೆ.

25 ಸೂರಿನ ಕನಸು, ಬೇಕು ಸಹಾಯ
ಮೂಡುಬಿದಿರೆಯಲ್ಲಿ “ಐರಾವತ” ಆ್ಯಂಬುಲೆನ್ಸ್‌ ಮಾಲಕ -ಚಾಲಕರಾಗಿರುವ ಅನಿಲ್‌ ಮೆಂಡೋನ್ಸ ಅವರೇನೂ ಧನಿಕರಲ್ಲ. ಆದರೆ, ಸಹಾಯ ಮಾಡುವ ಮನಸು ಶ್ರೀಮಂತವಾಗಿದೆ. ಕೇರ್‌ ಚಾರಿಟೆಬಲ್‌ ಟ್ರಸ್ಟ್‌ನಡಿ ನಾಲ್ಕು ತಿಂಗಳಲ್ಲಿ ಮೂರು ಮನೆ ಕಟ್ಟಿದ ಅವರು 25 ಸೂರುಗಳ ಕನಸು ಹೊತ್ತಿದ್ದಾರೆ. ಹಾಗಂತ ಅವರ ಬಳಿ ದುಡ್ಡಿಲ್ಲ. ಯಾರಾದರೂ ಸಹೃದಯಿಗಳು ನೆರವು ನೀಡಿದರೆ ಬಡವರಿಗೆ ಬದುಕು ನೀಡಬಹುದು ಎನ್ನುವುದು ಅವರ ಆಸೆ.

ತಾನೇ ಕಲ್ಲು ಹೊತ್ತ ಅನಿಲ್‌
ವನಿತಾ ಅವರು ಮನೆ ಕಟ್ಟುತ್ತಿರುವ ಜಾಗಕ್ಕೆ ಹೋಗುವ ದಾರಿ ಇಕ್ಕಟ್ಟಾಗಿದೆ. ನೆತ್ತೋಡಿ ರಸ್ತೆಯಿಂದ ಇಳಿಜಾರು ಇಳಿದು ಮತ್ತೆ ಏರು ಹಾದಿಯಲ್ಲಿ ಸಾಗಬೇಕು. ಮಳೆ ಬಿದ್ದಾಗ ಕೆಸರು. ವಾಹನಗಳೂ ಹೋಗುವುದಿಲ್ಲ. ಹೀಗಾಗಿ ಕೆಸರಾದ ಮಾರ್ಗದಲ್ಲಿ ಸ್ವತಃ ಅನಿಲ್‌ ಅವರೇ ಕಲ್ಲು ಹೊತ್ತು ರಾಶಿ ಹಾಕಿದರು. ಅವರೇ ಪೈಂಟ್‌ ಕೂಡ ಕೊಡುತ್ತ ಇದ್ದಾರೆ!

ಸೆ. 23ಕ್ಕೆ ಗೃಹಪ್ರವೇಶ; ನೀರಿಲ್ಲ , ದಾರಿ ಬೇಕು!
ಸಿಟ್‌ಔಟ್‌, ಪುಟ್ಟ ಚಾವಡಿ, ಮಲಗುವ ಕೋಣೆ, ಆಗ್ನೇಯದಲ್ಲಿ ಅಡುಗೆ ಕೋಣೆಗಳಿರುವ ಪುಟ್ಟ ಮನೆ ಇದು. ಪಕ್ಕದಲ್ಲೇ ಶೌಚಾಲಯ ನಿರ್ಮಾಣ ವಾಗಲಿದೆ. ಸೆ. 23ಕ್ಕೆ ವನಿತಾ ಮತ್ತು ಮಕ್ಕಳು ‘ಆಸರೆ’ ಪಡೆದು ನೆಲೆ ಕಾಣಲಿದ್ದಾರೆ.

ಮನೆಯೇನೋ ಆಗುತ್ತಿದೆ. ಆದರೆ ನೀರಿನ ಸಂಪರ್ಕ ಸಿಕ್ಕಿಲ್ಲ. ಇನ್ನು ಆವರಣಗೋಡೆ ಸಹಿತ ಹಲವಾರು ಕೆಲಸಗಳು ಆಗಬೇಕಿದೆ. ಮೂಡುಬಿದಿರೆ ಪುರಸಭೆಯವರು ಮನೆಗೆ ಹೋಗುವ ಹಾದಿಗೆ ಕಾಯಕಲ್ಪ ನೀಡುವ ಜತೆಗೆ ಏನಾದರೂ ನೆರವು ನೀಡಿದ್ದರೆ ಒಳ್ಳೆಯದಿತ್ತೆನ್ನುತ್ತಾರೆ ಅನಿಲ್‌.

-ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next