Advertisement

ಗ್ರಾಮೀಣ ಪರಿಸರದಲ್ಲಿ ಶೈಕ್ಷಣಿಕ ಸಾಧನೆಗೈದ ಮುದರಂಗಡಿ ಸರಕಾರಿ ಪ.ಪೂ.ಕಾಲೇಜು

12:01 AM May 12, 2019 | Sriram |

ಶಿರ್ವ: ಗ್ರಾಮೀಣ ಪ್ರದೇಶದ ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಿ ಸದೃಢ ಮತ್ತು ಆರೋಗ್ಯವಂತ ಸಮಾಜವನ್ನು ನಿರ್ಮಿಸುವ ಸದುದ್ದೇಶದಿಂದ ಮುದರಂಗಡಿ ಸರಕಾರಿ ಪ್ರೌಢ ಶಾಲೆಯು 1978ರಲ್ಲಿ ಪ್ರಾರಂಭಗೊಂಡು ಗ್ರಾಮೀಣ ಪರಿಸರದಲ್ಲಿ ಶೈಕ್ಷಣಿಕ ಸಾಧನೆಗೈದಿದೆ.

Advertisement

1994ರಲ್ಲಿ ಸರಕಾರಿ ಪದವಿಪೂರ್ವ ಕಾಲೇಜಾಗಿ ಮೇಲ್ದರ್ಜೇ ಗೇರಿಸಲ್ಪಟ್ಟು ಗ್ರಾಮೀಣ ಪ್ರದೇಶಗಳಾದ ಪಿಲಾರು, ಸಾಂತೂರು, ಕುತ್ಯಾರು, ಅಡ್ವೆ, ನಂದಿಕೂರು, ಕಂಚಿನಡ್ಕ, ಪಾದೆಬೆಟ್ಟು, ಎಲ್ಲೂರು, ಪಣಿಯೂರು, ಅದಮಾರು, ಬೆಳಪು,ಕಳತ್ತೂರು ಪರಿಸರದ ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ.

ಶಿರ್ವ- ಮುದರಂಗಡಿ ಮುಖ್ಯರಸ್ತೆಯ ಬದಿಯಲ್ಲಿ 6.77 ಎಕ್ರೆ ವಿಶಾಲ ಮತ್ತು ಪ್ರಶಾಂತ ವಾತಾವರಣದಲ್ಲಿ ಸ್ಥಾಪಿಸಲ್ಪಟ್ಟ ವಿದ್ಯಾಸಂಸ್ಥೆಯು ಯಾವುದೇ ಡೊನೇಶನ್‌ ಇಲ್ಲದೆ ಸರಕಾರಿ ಶುಲ್ಕದೊಂದಿಗೆ ಗುಣಮಟ್ಟದ, ಶಿಸ್ತುಬದ್ಧ ಶಿಕ್ಷಣ ನೀಡುತ್ತಿದೆ.

ವಾಣಿಜ್ಯ ಮತ್ತು ಕಲಾ ವಿಭಾಗ
ಸಂಸ್ಥೆಯ ಪದವಿಪೂರ್ವ ವಿಭಾಗದಲ್ಲಿ ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದಾಗಿದೆ. ಕನ್ನಡ ಮತ್ತು ಆಂಗ್ಲ ಭಾಷೆಯೊಂದಿಗೆ ಕಲಾ ವಿಭಾಗದಲ್ಲಿ ಇತಿಹಾಸ,ಅರ್ಥಶಾಸ್ತ್ರ,ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ಪಠ್ಯ ವಿಷಯಗಳಿದ್ದು ವಾಣಿಜ್ಯ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರ ಪಠ್ಯ ವಿಷಯಗಳಿರುತ್ತವೆ.

ಉತ್ತಮ ಫಲಿತಾಂಶ
2019 ಮಾರ್ಚ್‌ನಲ್ಲಿ ಜರಗಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. 1ವಿಶಿಷ್ಟ ಶ್ರೇಣಿ, 18 ಪ್ರಥಮ ಶ್ರೇಣಿ, 6 ದ್ವಿತೀಯ ಮತ್ತು 2 ತೃತೀಯ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಸಂಸ್ಥೆಯು ಗುಣಾತ್ಮಕ ಫಲಿತಾಂಶ ಪಡೆದಿದೆ. ಕಳೆದ 5 ವರ್ಷಗಳಲ್ಲಿ ಸರಾಸರಿ ಶೇ. 95.2 ಫಲಿತಾಂಶ ಪಡೆದಿದ್ದು ದಾಖಲೆಯಾಗಿದೆ.

Advertisement

ಉಪನ್ಯಾಸಕ ವೃಂದ
ವಾಣಿಜ್ಯ ಶಾಸ್ತ್ರದಲ್ಲಿ 25 ವರ್ಷಗಳ ಬೋಧನ ಅನುಭವದ ಜತೆಗೆ 3 ವರ್ಷ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಂಶು ಪಾಲ ರಘುರಾಮ ನಾಯಕ್‌ ಅವರ ಜತೆಗೆ ಸರಾಸರಿ 20 ವರ್ಷಗಳ ಬೋಧನ ಅನುಭವವಿರುವ ಉಪನ್ಯಾಸಕ ವೃಂದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇತಿಹಾಸ ಉಪನ್ಯಾಸಕರ ಹುದ್ದೆ ತೆರವಾಗಿದ್ದರೂ ಸರಕಾರದಿಂದ ನೇಮಿಸಲ್ಪಟ್ಟ ಅತಿಥಿ ಉಪನ್ಯಾಸಕರು ಇತಿಹಾಸ ವಿಷಯವನ್ನು ಬೋಧಿಸುತ್ತಿದ್ದಾರೆ. ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದ ಸರಕಾರಿ ಪ.ಪೂ. ಕಾಲೇಜುಗಳಲ್ಲಿ ಸಂಸ್ಥೆಯು ರಾಜ್ಯಮಟ್ಟದಲ್ಲಿ ಸಂಸ್ಥೆಯು 3ನೇ ಸ್ಥಾನವನ್ನು ಪಡೆದಿದೆ.

ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳು
ಡೊನೇಶನ್‌ ಇಲ್ಲದೆ ಸರಕಾರ ನಿಗದಿಪಡಿಸಿದ ಶುಲ್ಕದೊಂದಿಗೆ ಅನುಭವಿ ವಿಷಯ ತಜ್ಞ ಮತ್ತು ಪರಿಣತಿ ಹೊಂದಿದ ಉಪನ್ಯಾಸಕರಿಂದ ಪಠ್ಯಬೋಧನೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಶಾಲಾ ಶೈಕ್ಷಣಿಕ ಪ್ರವಾಸ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳಿದ್ದು , ಅದಾನಿ ಪವರ್‌ ಕಾರ್ಪೋರೇಶನ್‌ನಿಂದ ವಿದ್ಯಾರ್ಥಿಗಳಿಗಾಗಿ ಉಚಿತ ನೋಟ್ಬುಕ್‌, ಕೊಡೆ, ಉಪಾಹಾರ ಇತ್ಯಾದಿಗಳನ್ನು ನೀಡಲಾಗುತ್ತಿದೆ.

ಕಾಲೇಜು ಅಭಿವೃದ್ಧಿ ಸಮಿತಿ
ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್‌. ಮೆಂಡನ್‌ ಆವರ ನೇತೃತ್ವದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯು ಕಾಲೇಜಿನ ಅಭಿವೃದ್ಧಿಗಾಗಿ ಹಲವಾರು ಕ್ರಿಯಾ ಯೋಜನೆಗಳನ್ನು ಹಮ್ಮಿಕೊಂಡಿದೆ. ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ರವೀಂದ್ರ ಪ್ರಭು,ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ತಾ.ಪಂ. ಸದಸ್ಯ ಮೈಕಲ್ ರಮೇಶ್‌ ಡಿ‡ ಸೋಜಾ, ಮುದರಂಗಡಿ ಗ್ರಾ.ಪಂ.ಅಧ್ಯಕ್ಷ ಡೇವಿಡ್‌ ಡಿ‡ಸೋಜಾ ಸಂಸ್ಥೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದಾರೆ.
ಸಂಸ್ಥೆಯ ಹಳೆವಿದ್ಯಾರ್ಥಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಸರಕಾರದ ಅನುದಾನ ನೀಡಿ ಸಂಸ್ಥೆಯ ಅಭಿವೃದ್ಧಿಯಲ್ಲಿ ವಿಶೇಷ ಮುತುವರ್ಜಿ ವಹಿಸುತ್ತಿದ್ದಾರೆ.

ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನದ ಸುಧೆಯನ್ನು ಹರಿಸುವ ಮೂಲಕ ಶಾಲೆಯು ಸರ್ವರ ಪ್ರೋತ್ಸಾಹ ಹಾಗೂ ಬೆಂಬಲದೊಂದಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡಿ ಮುದರಂಗಡಿ ಪೇಟೆಯ ಹೃದಯ ಭಾಗದಲ್ಲಿ ಜನಪ್ರಿಯ ಸರಕಾರಿ ಶಿಕ್ಷಣ ಸಂಸ್ಥೆಯಾಗಿ ಮೂಡಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next