Advertisement

ಸೂರು ವಂಚಿತ ದುರ್ಗಿಮುರ್ಗಿ ಜನಾಂಗ!

01:42 PM Jan 17, 2020 | Naveen |

ಮುದಗಲ್ಲ: ಸಮೀಪದ ನಾಗರಹಾಳ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ವಾಸಿಸುತ್ತಿರುವ ದುರ್ಗಿಮುರ್ಗಿ ಜನಾಂಗದವರು ಇದುವರೆಗೂ ಸೂರು ವಂಚಿತರಾಗಿದ್ದು, ಖಾಸಗಿ ವ್ಯಕ್ತಿಗಳ ಖಾಲಿ ನಿವೇಶನದಲ್ಲಿ ಜೋಪಡಿಗಳಲ್ಲಿ ವಾಸಿಸುತ್ತಿದ್ದಾರೆ.

Advertisement

ಬಾಗಲಕೋಟೆ ಜಿಲ್ಲೆಯ ಕಮತಗಿ ಗ್ರಾಮದ ಹತ್ತಾರು ಕುಟುಂಬಗಳು ನಾಗರಹಾಳ ಗ್ರಾಮಕ್ಕೆ ಬಂದು ನೆಲೆಸಿವೆ. ಹಲವು ವರ್ಷಗಳಿಂದ ವಾಸಿಸುತ್ತಿರುವ ಇವರಿಗೆ ಚುನಾವಣೆ ಗುರುತಿನ ಚೀಟಿ ಹೊರತುಪಡಿಸಿ, ಬೇರ್ಯಾವ ದಾಖಲೆಗಳನ್ನು ಸರ್ಕಾರ ಇದುವರೆಗೆ ಒದಗಿಸಿಲ್ಲ. ಇದರಿಂದ ಸರ್ಕಾರದ ನಾನಾ ಯೋಜನೆಗಳಿಂದ ವಂಚಿತರಾಗಿದ್ದಾರೆ. ದೊಡ್ಡವರು ಜೀವನೋಪಾಯಕ್ಕಾಗಿ ಗ್ರಾಮೀಣ ಪ್ರದೇಶಕ್ಕೆ ತೆರಳಿ ಕೂದಲುಗಳನ್ನು ಸಂಗ್ರಹಿಸುವುದು, ಪಿನ್‌, ಪ್ಲಾಸ್ಟಿಕ್‌ ಇತರೆ ವಸ್ತುಗಳನ್ನು ಮಾರುತ್ತಾರೆ. ಸ್ವಂತ ನಿವೇಶನ, ಮನೆ ಇಲ್ಲದ ಇವರು ಮಳೆ, ಗಾಳಿ, ಬಿಸಿಲು, ಚಳಿ ಎನ್ನದೇ ಬಯಲಲ್ಲಿ ಜೋಪಡಿ ಹಾಕಿಕೊಂಡು ಬದುಕಿನ ಬಂಡಿ ದೂಡುತ್ತಿದ್ದಾರೆ.

ಶಿಕ್ಷಣ ವಂಚಿತರು: ದುರ್ಗಿಮುರ್ಗಿ ಜನಾಂಗದವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ದೊಡ್ಡವರು ಗ್ರಾಮೀಣ ಪ್ರದೇಶಕ್ಕೆ ತೆರಳಿ ಪಿನ್‌, ಪ್ಲಾಸ್ಟಿಕ್‌, ಆಟಿಕೆ ಸಾಮಾನ ಮಾರಿದರೆ, ಮಕ್ಕಳು ಭಿಕ್ಷಾಟನೆ ಮಾಡುತ್ತಾರೆ. ಈ ಮಕ್ಕಳಿಗೆ ಕನಿಷ್ಠ ಶಿಕ್ಷಣವನ್ನಾದರೂ ಕೊಡಿಸಲು ಸರ್ಕಾರ, ಅಧಿಕಾರಿಗಳು ವಿಫಲರಾಗಿದ್ದಾರೆ. ಇಂತಹ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಸರ್ಕಾರ ಸಾಕಷ್ಟು ಹಣ ವ್ಯಯಿಸುತ್ತಿದೆ. ಆದರೂ ಅದು ಅರ್ಹರಿಗೆ ತಲುಪುತ್ತಿಲ್ಲ. ವಾಸ್ತವವಾಗಿ ಸರ್ಕಾರದ ಹಣ, ಯೋಜನೆ ಸದ್ಬಳಕೆ ಆಗುವ ಬದಲು ಸರ್ಕಾರೇತರ ಸಂಸ್ಥೆ, ಅಧಿಕಾರಿಗಳ ಪಾಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಇಂತಹ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡುತ್ತದೆ. ಆದರೆ ಅ ಧಿಕಾರಿಗಳ ಬೇಜವಬ್ದಾರಿಯಿಂದ ಈ ಸಮುದಾಯಕ್ಕೆ ಮೂಲ ಸೌಲಭ್ಯಗಳು ಮರೀಚಿಕೆಯಾಗಿವೆ. ಇನ್ನಾದರೂ ಸರ್ಕಾರ, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇವರಿಗೆ ನಿವೇಶನ ಒದಗಿಸಿ, ಮನೆ ನಿರ್ಮಿಸಿಕೊಡಬೇಕು. ಸರ್ಕಾರದ ಯೋಜನೆ ತಲುಪಿಸಬೇಕು. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ.

ಕಳೆದ 20 ವರ್ಷಗಳಿಂದ ಇದೇ ಗ್ರಾಮದಲ್ಲಿ ವಾಸವಿದ್ದು, ಸರಕಾರದಿಂದ ಯಾವುದೇ ಯೋಜನೆಗಳು ನಮ್ಮ ಪಾಲಿಗೆ ಇಲ್ಲದಂತಾಗಿವೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾಗಿದೆ.
ಜಂಬಣ್ಣ, ಬಂಡೆಪ್ಪ,
ದುರ್ಗಿಮುರ್ಗಿ ಜನಾಂಗದವರು

Advertisement

ದುರ್ಗಿಮುರ್ಗಿ ಜನಾಂಗದ ಕೆಲವರಿಗೆ ವಸತಿ ವ್ಯವಸ್ಥೆ ನೀಡಲಾಗಿದೆ. ಇನ್ನೂ ಕೆಲವರಿಗೆ ಮೂಲ ದಾಖಲಾತಿ ಕೊರತೆಯಿಂದ ಸೌಲಭ್ಯ ಕಲ್ಪಿಸಲಾಗಿಲ್ಲ. ಮುಂದಿನ ದಿನಗಳಲ್ಲಿ ವಸತಿ ಮತ್ತು ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು.
ಸೋಮನಗೌಡ ಪಾಟೀಲ,
ಪಿಡಿಒ ನಾಗರಹಾಳ ಗ್ರಾಪಂ

ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next