ದೇವಪ್ಪ ರಾಠೊಡ
ಮುದಗಲ್ಲ: ವಿಶಿಷ್ಟಾದ್ವೈತ ಸಿದ್ಧಾಂತದ ತಳಹದಿ ಮೇಲೆ ನಿರ್ಮಾಣಗೊಂಡ ತಲೆಕಟ್ಟು ಗ್ರಾಮದ ಶ್ರೀ ಅಂಕಲಿಮಠವು ರಾಜ್ಯ ಮತ್ತು ನೆರೆ ರಾಜ್ಯಗಳಲ್ಲಿ ಪ್ರಸಿದ್ದಿ ಪಡೆದಿದೆ. ಸುಮಾರು 300 ವರ್ಷಕ್ಕೂ ಹೆಚ್ಚು ಇತಿಹಾಸ ಇರುವ ಶ್ರೀಮಠದ ಮೂಲ ಪುರುಷರಾದ ಶ್ರೀ ನಿರುಪಾದಿಧೀಶ್ವರರು ತಮ್ಮ ಜೀವಿತಾವಧಿಯಲ್ಲಿಯೇ 12 ಮಠಗಳನ್ನು ಸ್ಥಾಪಿಸಿದರು.
ಅಂಕಲಿಮಠ (ತಲೆಕಟ್ಟು) ಮುದಗಲ್ಲ ಪಟ್ಟಣ ದಕ್ಷಿಣ ಭಾಗದಿಂದ 12 ಕಿ.ಮೀ. ದೂರದಲ್ಲಿದೆ. ಶ್ರೀಮಠವು ನಿತ್ಯ ತ್ರಿವಿಧ ದಾಸೋಹ ತಾಣವಾಗಿರುವದು ವಿಶೇಷ. ಜಾತಿ, ಧರ್ಮವನ್ನು ಮೀರಿ ಸರ್ವಜನಾಂಗದ ಭಕ್ತಿಯ ಮಠವಾಗಿರುವ ಶ್ರೀ ಅಂಕಲಿಮಠ ಇಂದು ಲಕ್ಷಾಂತರ ಭಕ್ತ ಸಮೂಹದ ಆರಾಧ್ಯ ಕ್ಷೇತ್ರವಾಗಿರುವುದು ವಿಶೇಷ.
ಹಿನ್ನೆಲೆ: ಗೋಕಾಕ ಜಿಲ್ಲೆಯ ಅಂಕಲಗಿ ಗ್ರಾಮದ ಶ್ರೀ ಅಡವಿ ಸಿದ್ದೇಶ್ವರರು ತಮ್ಮ ಪರಮ ಶಿಷ್ಯರಾಗಿದ್ದ ಶ್ರೀ ನಿರುಪಾದಿಧೀಶ್ವರರಿಗೆ ಅಂಕಲಿಮಠಕ್ಕೆ ಹೊರಡಲು ಅಪ್ಪಣೆ ನೀಡಿದರು. ಗುರುವಿನ ಮಾತಿನಂತೆ ಹೊರಟು ನಿಂತ ಶ್ರೀಗಳಿಗೆ ಅವರ ಗುರುಗಳು ವಿಭೂತಿ (ಭಸ್ಮ) ಕಟ್ಟಿ, ಅಕ್ಕಿ, ಕಾಯಿಯನ್ನು ಕೊಟ್ಟು ಕಳುಹಿಸಿದರು. ಶಿರಬಂದನಪುರ ಆಗಿದ್ದ ಇಗಿನ ಅಂಕಲಿಮಠಕ್ಕೆ ನಿರುಪಾದಿಧೀಶ್ವರು ಬಂದು ಮಠವನ್ನು ಸ್ಥಾಪಿಸಿದ್ದು ಇಂದಿಗೂ ತ್ರಿವಿಧ ದಾಸೋಹ ಕ್ಷೇತ್ರವಾಗಿ ಭಕ್ತರ ಮನದಲ್ಲಿ ಶ್ರೀಮಠ ಪೂಜ್ಯನೀಯ ಸ್ಥಾನ ಪಡೆದಿದೆ.
ಅಂದು ಮುಳ್ಳು ಕಂಟಿಗಳಿಂದ ಕೂಡಿದ್ದ ಈ ಸ್ಥಳದಲ್ಲಿ ದುಷ್ಟಶಕ್ತಿ ಪ್ರಭಾವದಲ್ಲಿತ್ತು. ಆದರೆ ದೇವಿ ವರಶಕ್ತಿ ಪಡೆದುಕೊಂಡಿದ್ದ ಶ್ರೀ ನಿರುಪಾದಿಧೀಶ್ವರರು ಈ ಸ್ಥಳವನ್ನು ತಮ್ಮ ಆರಾಧ್ಯದೇವಿ ಸ್ಥಾಪನೆಗೆ ಬಳಸಿಕೊಂಡು ಆ ಸ್ಥಳವನ್ನು ಸ್ವಚ್ಛಗೊಳಿಸಿ ಛಲಬಿಡದ ಹಠವಾದಿಯಂತೆ ಮಠ ಸ್ಥಾಪಿಸಿದರು. ತಮ್ಮ ಗುರುಗಳು ನೀಡಿದ ವಿಭೂತಿ ಗಟ್ಟಿಯನ್ನು ಪ್ರತಿಷ್ಠಾಪಿಸಿದರು. ಅಂದಿನಿಂದ ಇಂದಿನವರೆಗೆ ಅಂಕಲಿಮಠ ಸುಕ್ಷೇತ್ರ ವರ್ಷಪೂರ್ತಿ ಜ್ಞಾನ, ಭಕ್ತಿ ಹಾಗೂ ಅನ್ನಸಂತರ್ಪಣೆ ಮೂಲಕ ತ್ರಿವಿಧ ದಾಸೋಹ ಕ್ಷೇತ್ರವೆಂದೇ ಹೆಸರು ಪಡೆದಿದೆ. ಶ್ರೀ ನಿರುಪಾದೀಶ್ವರರು ಅನೇಕ ಪವಾಡಗಳನ್ನು ಮಾಡುತ್ತ ನಡೆದಾಡುವ ದೇವರು ಎನಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಶ್ರೀ ಮಠದ ಜಾತ್ರಾ ಮಹೋತ್ಸವ ಜರುಗಲಿದ್ದು ಲಕ್ಷಾಂತರ ಭಕ್ತ ಸಮೂಹ ಸಾಕ್ಷೀಕರಿಸಲಿದೆ.