ಮುದಗಲ್ಲ: ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ (ಕೆಪಿಎಸ್‌ಸಿ)ಪ್ರಕಟಿಸಿರುವ ಕೆಎಎಸ್ ಅಧಿಕಾರಿಗಳ ಆಯ್ಕೆಪಟ್ಟಿಯಲ್ಲಿ ಸಮೀಪದ ಆಶಿಹಾಳ ತಾಂಡಾದ ಇಬ್ಬರು ಬಡ ಪ್ರತಿಭೆಗಳು ಸ್ಥಾನ ಪಡೆದಿದ್ದಾರೆ.
ಇದರಲ್ಲಿ ಒಬ್ಬರು ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ಹುದ್ದೆಗೆ ಆಯ್ಕೆಯಾದರೆ, ಇನ್ನೊಬ್ಬರು ಕಾರ್ಮಿಕ ಇಲಾಖೆ ಲೇಬರ್ ಕಮೀಷನರ್ ಹುದ್ದೆಗೆ ಆಯ್ಕೆಗೊಂಡು ತಾಂಡಾ ಹಾಗೂ ತಾಲೂಕಿನ ಕೀರ್ತಿ ಬೆಳಗಿಸಿದ್ದಾರೆ.
ಸುನೀಲಕುಮಾರ: ಎಸ್‌ಸಿ ಕೋಟಾದಡಿ ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ಹುದ್ದೆಗೆ ಆಯ್ಕೆಯಾದ ಸುನೀಲಕುಮಾರ ಬಾಳಪ್ಪ ರಾಠೊಡ ಬೆಂಗಳೂರಿನಲ್ಲಿ ಬಿಇ ವ್ಯಾಸಂಗ ಮುಗಿಸಿದ್ದಾರೆ. ಹೈದ್ರಾಬಾದ್‌ನ ಐಎಎಸ್ ಮತ್ತು ಕೆಎಎಸ್ ಕೋಚಿಂಗ್ ಸೇಂಟರ್‌ನಲ್ಲಿ ತರಬೇತಿ ಪಡೆದಿದ್ದಾರೆ. ಈ ಹಿಂದೆ ಕೆಎಎಸ್ ಪರೀಕ್ಷೆ ಬರೆದಿದ್ದ ಇವರು ಎಲಿಜಿಬಲ್ ಆಗಿದ್ದರು. ಆದರೆ ಸಂದರ್ಶನದಲ್ಲಿ ಫೇಲಾಗಿದ್ದರು.
ಎರಡನೇ ಬಾರಿಗೆ ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಈತನ ತಂದೆ ಬಾಳಪ್ಪ, ತಾಯಿ ಆರತಿಬಾಯಿ ಆಶಿಹಾಳ ತಾಂಡಾದಲ್ಲಿ ವಾಸವಾಗಿದ್ದಾರೆ. ಅವಿನಾಶ ನಾಯ್ಕ: ಎಸ್‌ಸಿ ಕೆಟಗೇರಿಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ಲೇಬರ್ ಕಮಿಷನರ್ ಹುದ್ದೆಗೆ ಆಯ್ಕೆಯಾದ ಆಶಿಹಾಳ ತಾಂಡಾದ ಡಾ| ಅವಿನಾಶ ಬುಡ್ನಾನಾಯ್ಕ ವೃತ್ತಿಯಲ್ಲಿ ಸರ್ಕಾರಿ ವೈದ್ಯರಾಗಿದ್ದಾರೆ. ಬಾಗಲಕೋಟೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಎರಡು ಬಾರಿ ಐಎಎಸ್ ಪರೀಕ್ಷೆ ಮತ್ತು ಎರಡು ಬಾರಿ ಕೆಎಎಸ್ ಪರೀಕ್ಷೆಯಲ್ಲಿ ಪಾಸಾಗಿದ್ದರು. ಆದರೆ ಮೌಖೀಕ ಸಂದರ್ಶನದಲ್ಲಿ ಅಂಕ ಗಳಿಸುವಲ್ಲಿ ಯಶಸ್ವಿ ಆಗಿದ್ದಿಲ್ಲ.
ಈ ಬಾರಿಯ ಕೆಪಿಎಸ್‌ಸಿ ಪರೀಕ್ಷೆಯಲ್ಲಿ 67ನೇ ರ್‍ಯಾಂಕ್ ಗಳಿಸುವ ಮೂಲಕ ಲೇಬರ್ ಕಮೀಷನರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಬಾಲ್ಯದಿಂದಲೂ ಛಲವಂತನಾಗಿದ್ದ ಅವಿನಾಶ ಚುರುಕಾಗಿದ್ದ ಎಂದು ಪಾಲಕರು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದರು. ಅವಿನಾಶನ ತಂದೆ ಬುಡ್ನಾನಾಯ್ಕ ಬಾಗಲಕೋಟೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ತಾಯಿ ಲಕ್ಷ್ಮೀ ಬಾಗಲಕೋಟೆಯಲ್ಲಿ ವಾಸವಾಗಿದ್ದಾರೆ.