Advertisement

ಮುಂದಿನ ವರ್ಷ ಪದವಿ ಹಂತದಲ್ಲಿ ಐಚ್ಛಿಕವಾಗಿ ತುಳು ಭಾಷೆ: ಎ.ಸಿ. ಭಂಡಾರಿ

05:42 AM Jan 18, 2019 | Team Udayavani |

ಮೂಡುಬಿದಿರೆ: ತುಳುನಾಡಿನ ಯುವಜನರು ತುಳು ಭಾಷೆ ಮತ್ತು ಅದರೊಂದಿಗೆ ಬೆಸೆದುಕೊಂಡಿರುವ ಸಂಸ್ಕೃತಿಯನ್ನು ಅರಿತು, ರೂಢಿಸಿ ಕೊಳ್ಳಬೇಕೆಂಬ ಉದ್ದೇಶದಿಂದ ಮಂಗ ಳೂರು ವಿ.ವಿ. ತುಳು ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಈಗಾಗಲೇ ಆರಂಭವಾಗಿದ್ದು ಮುಂದಿನ ವರ್ಷ ಪದವಿ ಹಂತದಲ್ಲಿ ತುಳು ಭಾಷೆಯನ್ನು ಐಚ್ಛಿಕವಾಗಿ ಅಭ್ಯಾಸ ಮಾಡಲು ಎಲ್ಲ ಸಿದ್ಧತೆ ನಡೆದಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಹೇಳಿದರು.

Advertisement

ಶ್ರೀ ಮಹಾವೀರ ಕಾಲೇಜಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಶ್ರೀ ಮಹಾವೀರ ಕಾಲೇಜು, ಹಳೆ ವಿದ್ಯಾರ್ಥಿ ಸಂಘ ಹಾಗೂ ತುಳುಕೂಟ ಬೆದ್ರ ಇವುಗಳ ಸಹಭಾಗಿತ್ವದಲ್ಲಿ ಗುರುವಾರ ನಡೆದ 13ನೇ ವರ್ಷದ, ಮಂಗಳೂರು ವಿ.ವಿ. ಅಂತರ್‌ಕಾಲೇಜು ಮಟ್ಟದ ತುಳು ಸಾಂಸ್ಕೃತಿಕ ಹಬ್ಬ ‘ತುಳು ನಾಡ ಸಿರಿ- ಮದಿಪು- 2019’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆರನೇ ತರಗತಿಯಿಂದ ಹತ್ತನೇ ತರಗತಿವರೆಗೆ ತುಳು ಭಾಷಾ ಕಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ತುಳು ಭಾಷೆಯನ್ನು ಅಧ್ಯಯನ ಮಾಡಿದ ಎಲ್ಲ 417 ಮಂದಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಶೇ.90ರಷ್ಟು ಮಂದಿ ನೂರಕ್ಕೆ ನೂರು ಅಂಕ ಗಳಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಪದವಿ ಪೂರ್ವ ಮಟ್ಟದಲ್ಲೂ ತುಳು ಭಾಷಾ ಅಧ್ಯಯನಕ್ಕೆ ಅವಕಾಶ ಕಲ್ಪಿಸುವ ಪ್ರಸ್ತಾವನೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

ಓರ್ವ ವ್ಯಕ್ತಿಗೆ 9 ಭಾಷೆಗಳನ್ನು ಕಲಿಯುವ ಸಾಮರ್ಥ್ಯವಿದ್ದು, ಹಲವು ಭಾಷೆಗಳನ್ನು ಕಲಿತಷ್ಟು ನಮಗೆ ಒಳ್ಳೆಯದು ಎಂದ ಅವರು, ತುಳುವಿಗೆ ಅನ್ಯಭಾಷಾ ಸಾಹಿತ್ಯ ಸಂಪತ್ತು ಹರಿದುಬಂದಿರುವಂತೆಯೇ ತುಳು ವಿನ ಮಹತ್ವಪೂರ್ಣ ಕೃತಿಗಳು ಇಂಗ್ಲಿಷ್‌ ಸಹಿತ ಹಲವು ಭಾಷೆಗಳಿಗೆ ಅನುವಾದಗೊಳ್ಳುತ್ತಿರುವುದು ಈ ಭಾಷೆ ಲೋಕ ಮನ್ನಣೆಗಳಿಸಲು ಸಾಧ್ಯವಾಗುತ್ತಿದೆ ಎಂದರು.

ತಾಲೂಕು ಮಟ್ಟದಲ್ಲಿ ಹಲವು ತಾಲೂಕುಗಳಲ್ಲಿ ತುಳು ಸಾಹಿತ್ಯ ಸಮ್ಮೇಳನಗಳು ನಡೆದಿದ್ದು ಮಂಗಳೂರು ತಾಲೂಕಿನಲ್ಲಿ ಸದ್ಯವೇ ತುಳು ಸಮ್ಮೇಳನ ನಡೆಯಲಿದೆ’ ಎಂದು ಅವರು ತಿಳಿಸಿದರು.

Advertisement

ಸಮ್ಮಾನ
ಕಾಲೇಜಿನ ಹಳೆ ವಿದ್ಯಾರ್ಥಿ, ‘ಜನರ ಡಾಕ್ಟರ್‌’ ಎಂದೇ ಪರಿಚಿತರಾದ, ಜಿ.ವಿ. ಪೈ ಮೆಮೋರಿಯಲ್‌ ಚಾರಿಟೇಬಲ್‌ ಆಸ್ಪತ್ರೆಯ ಪ್ರಧಾನ ವೈದ್ಯಾಧಿಕಾರಿ ಡಾ| ಜಯಗೋಪಾಲ ತೋಳ್ಪಾಡಿ ಅವರನ್ನು ಸಮ್ಮಾ ನಿಸಲಾಯಿತು. ಸುಲೋಚನಾ ಪಚ್ಚಿನಡ್ಕ ಸಮ್ಮಾನ ಪತ್ರ ವಾಚಿಸಿದರು. ಉದ್ಯಮಿ ರಾಜೇಂದ್ರಕುಮಾರ್‌, ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸುರೇಶ್‌ ಶೆಟ್ಟಿ , ತುಳು ಕೂಟ ಬೆದ್ರ ದ ಅಧ್ಯಕ್ಷ ಚಂದ್ರಹಾಸ ದೇವಾಡಿಗ ಶುಭಾಶಂಸನೆಗೈದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಮಾತನಾಡಿ, ಉನ್ನತ ಶಿಕ್ಷಣಭಾಗ್ಯವಿಲ್ಲದ ಕಾಲದಲ್ಲಿ ಎಸ್‌ಎನ್‌ ಮೂಡುಬಿದಿರೆ ಸಹಿತ ಈ ಊರಿನ ವಿದ್ಯಾಭಿಮಾನಿಗಳು ಮಣಿಪಾಲ ಅಕಾಡೆಮಿ ಸಹಕಾರದಿಂದ ಮಹಾವೀರ ಕಾಲೇಜನ್ನು ಸ್ಥಾಪಿಸುವ ಮೂಲಕ ಈ ಊರಿನ ಅಭಿವೃದ್ಧಿಗೆ ನಾಂದಿ ಹಾಡಿದರು ಎಂದು ಸ್ಮರಿಸಿಕೊಂಡರು.

ಕಾಲೇಜಿನ ಪ್ರಾಚಾರ್ಯ ಪ್ರೊ| ಎಚ್. ಚಂದ್ರಶೇಖರ ದೀಕ್ಷಿತ್‌ ಪ್ರಸ್ತಾವನೆಗೈದರು.ಪ.ಪೂ. ಕಾಲೇಜಿನ ಪ್ರಾಚಾರ್ಯ ಪ್ರೊ| ಎಂ. ರಮೇಶ ಭಟ್, ಕಾಲೇಜಿನ ಕ್ಷೇಮಪಾಲನಾಧಿಕಾರಿ ಅಜಾಝ್ ಅಹ್ಮದ್‌, ಮುಖ್ಯ ಸಂಯೋಜಕಿ ನಳಿನಿ, ಸಂಯೋಜಕಿಯರಾದ ವಿಜಯಲಕ್ಷ್ಮೀ ಮಾರ್ಲ, ಪೂರ್ಣಿಮಾ, ವಿದ್ಯಾರ್ಥಿ ನಾಯಕ ವಿವೇಕ್‌, ವಿದ್ಯಾರ್ಥಿ ಸಂಯೋಜಕರಾದ ಶ್ವೇತಾ ಪೈ, ನಿಶಿತ್‌ ಶೆಟ್ಟಿ, ಶೈಲೇಶ್‌ ಕೋಟ್ಯಾನ್‌, ಸುಖೀತಾ ತುಳು ಸಂಘದ ಕಾರ್ಯದರ್ಶಿ ಶ್ರೇಯಾ ಉಪಸ್ಥಿತರಿದ್ದರು.

ಡಾ| ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿ ಪ್ರೊ| ಹರೀಶ್‌ ವಂದಿ ಸಿದರು. ಶ್ರೀರಾಜ್‌ ಸನಿಲ್‌ ನಿರೂಪಿಸಿದರು. ವಿ.ವಿ.ಯ 13 ಕಾಲೇಜುಗಳ ತಂಡಗಳು ಭಾಗವಹಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next