Advertisement

MUDA: ನಿವೇಶನ ಪಡೆಯುವಾಗ ಆತ್ಮಸಾಕ್ಷಿ ಇರಲಿಲ್ಲವೇ: ಬಿಜೆಪಿ ತಿರುಗೇಟು

03:41 AM Oct 03, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ “ಆತ್ಮಸಾಕ್ಷಿ’ ಮಾತಿಗೆ ಗುದ್ದು ಕೊಟ್ಟಿರುವ ಬಿಜೆಪಿ ನಾಯಕರು, ನಿಮ್ಮ ಆತ್ಮಸಾಕ್ಷಿಗೆ ಮಂಕು ಕವಿದಿದೆಯೇ? ನಿವೇಶನ ಪಡೆಯುವಾಗ ಆತ್ಮಸಾಕ್ಷಿ ಇರಲಿಲ್ಲವೇ ಎಂದು ಕುಟುಕಿದ್ದಾರೆ.

Advertisement

ಬೆಂಗಳೂರಿನಲ್ಲಿ ಸಿಎಂ ಮಾತಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಿದ್ದರಾಮಯ್ಯ ಅವರೇ ನಿಮ್ಮ ಆತ್ಮಸಾಕ್ಷಿಗೆ ಮಂಕು ಕವಿದಿದೆಯೇ? ಗಾಂಧಿ ಜಯಂತಿಯಂದು ಮಹಾ ಗಾಂಧಿವಾದಿ ಎಂಬಂತೆ ಮಾತನಾಡುವ ನೀವು ನಿಮ್ಮ ಆತ್ಮಸಾಕ್ಷಿಯನ್ನು ಒಮ್ಮೆ ಬಡಿದೆಬ್ಬಿಸಿ ಕೇಳಿ. ವಾಲ್ಮೀಕಿ ನಿಗಮ, ಮುಡಾದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿರುವ ತಾವು ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯರೇ? ಎಂದು ಆತ್ಮಸಾಕ್ಷಿಯನ್ನು ಕೇಳಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಭಂಡತನ, ತಪ್ಪು ನಿರ್ಧಾರಗಳೇ ನಿಮಗೆ ಕಂಟಕ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಸಿಎಂ ಸಿದ್ದರಾಮಯ್ಯರನ್ನು ಮಾತಿನಿಂದಲೇ ಕುಟುಕಿದ್ದು, ಹಿಂದೆಯೇ ನಿವೇಶನಗಳನ್ನು ಹಿಂದಿರುಗಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮುಡಾ ವಿಚಾರದಲ್ಲಿ ಬಿಜೆಪಿ ಹೋರಾಟ ಕೈಗೆತ್ತಿಕೊಂಡಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ, ನಿಮ್ಮ ನಡವಳಿಕೆ, ಭಂಡತನ, ತಪ್ಪು ನಿರ್ಧಾರಗಳೇ ನಿಮಗೆ ಮುಂದಿನ ದಿನಗಳಲ್ಲಿ ಕಂಟಕವಾಗಲಿದೆ ಎಂದು ಎಚ್ಚರಿಸಿದರು.

ಒಂದೆಡೆ ಲೋಕಾಯುಕ್ತ ಪೊಲೀಸರು ಎಫ್ಐಆರ್‌ ದಾಖಲಿಸಿ ತನಿಖೆ ಆರಂಭ ಮಾಡಿದ್ದಾರೆ. ಇನ್ನೊಂದೆಡೆ ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಂತದಲ್ಲಿ ನಿವೇಶನಗಳನ್ನು ವಾಪಸ್‌ ಕೊಟ್ಟಿರುವುದು ಹಾಗೂ ತತ್‌ಕ್ಷಣವೇ ಅದರ ಖಾತೆಗಳನ್ನು ರದ್ದುಪಡಿಸಿದ ಮುಡಾದ ಕ್ರಮ ಸರಿಯಲ್ಲ. ಈ ಪ್ರಕ್ರಿಯೆ ಕೂಡ ಕಾನೂನುಬಾಹಿರ. ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

“ನಿವೇಶನ ಹಿಂದಿರುಗಿಸುತ್ತೀರಾ ಎಂಬ ಪ್ರಶ್ನೆಗೆ ಪತ್ರಕರ್ತರನ್ನೇ ಪ್ರಶ್ನಿಸಿದ್ದ ಸಿಎಂ, ಯಾಕೆ ಕೊಡಬೇಕು? 62 ಕೋಟಿ ರೂ. ಕೊಡಿಸುತ್ತೀರಾ ಎಂದಿದ್ದವರು ಈಗ ದಿಕ್ಕು ತಪ್ಪಿಸಲು ಅಥವಾ ಗೊಂದಲಕ್ಕೆ ದೂಡಲು ನಿವೇಶನ ವಾಪಸ್‌ ಕೊಟ್ಟಿದ್ದಾರೆ. ಅವರಿಗೀಗ 62 ಕೋಟಿ ರೂ. ಬೇಡವೇ?”
– ಸಿ.ಟಿ. ರವಿ, ವಿಧಾನಪರಿಷತ್‌ ಸದಸ್ಯ

Advertisement

“ಯಡಿಯೂರಪ್ಪ ವಿರುದ್ಧ ಆರೋಪ ಬಂದಾಗ ರಾಜೀನಾಮೆಗೆ ಆಗ್ರಹಿಸಿದ್ದ ಸಿದ್ದರಾಮಯ್ಯ ಈಗ ಅದೇ ರೀತಿಯ ತೀರ್ಮಾನವನ್ನು ಅವರು ತೆಗೆದುಕೊಳ್ಳುತ್ತಾರೆಂಬುದು ನನ್ನ ಭಾವನೆ. ಇಡೀ ದೇಶದಲ್ಲಿ ಕರ್ನಾಟಕದ ಇವತ್ತಿನ ವಿಚಾರಗಳು ಚರ್ಚೆ ಆಗುತ್ತಿವೆ.”
-ಕೋಟ ಶ್ರೀನಿವಾಸ ಪೂಜಾರಿ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next