Advertisement

MUDA ತನಿಖೆ :ಮಹಾತ್ಮ ಗಾಂಧಿ ಅವರ ಜೀವನ ನನಗೆ ಧೈರ್ಯ ನೀಡಿದೆ: ಸಿದ್ದರಾಮಯ್ಯ

02:19 PM Oct 02, 2024 | Team Udayavani |

ಬೆಂಗಳೂರು: ಮುಡಾ ಹಗರಣದ ಕುರಿತು ಲೋಕಾಯುಕ್ತ ಪೊಲೀಸರು ಮತ್ತು ಇಡಿ ತನಿಖೆ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ”ಮಹಾತ್ಮ ಗಾಂಧಿಯವರ ಜೀವನ ಮತ್ತು ಆಲೋಚನೆಗಳು ನನ್ನ ಹೋರಾಟದಲ್ಲಿ ಧೈರ್ಯ, ಶಕ್ತಿ ಮತ್ತು ಭರವಸೆಯನ್ನು ನೀಡಿವೆ” ಎಂದು ಬುಧವಾರ(ಅ2) ಹೇಳಿಕೆ ನೀಡಿದ್ದಾರೆ.

Advertisement

ಮಹಾತ್ಮ ಗಾಂಧೀಜಿಯವರ 155ನೇ ಜನ್ಮ ದಿನಾಚರಣೆ ಅಂಗವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗಾಂಧಿ ಭವನದಿಂದ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆವರೆಗೆ ಮೆರವಣಿಗೆ ನಡೆಸಿದರು.

“ಕೋಮುವಾದ, ಸರ್ವಾಧಿಕಾರ ಮತ್ತು ಹಿಂಸಾಚಾರದಿಂದ ತುಂಬಿರುವ ಜಗತ್ತಿನಲ್ಲಿ, ಸತ್ಯ, ಶಾಂತಿ ಮತ್ತು ಅಹಿಂಸೆಯ ಮೂರ್ತರೂಪವಾದ ಮಹಾತ್ಮ ಗಾಂಧಿ ಮಾತ್ರ ನಮ್ಮನ್ನು ಕೈ ಹಿಡಿದು ಮುನ್ನಡೆಸಬಲ್ಲರು” ಎಂದು ಪೋಸ್ಟ್ ಮಾಡಿದ್ದಾರೆ.

“ಸತ್ಯದ ನಿಜವಾದ ಪರೀಕ್ಷೆಯನ್ನು ಎದುರಿಸುವ ನನ್ನ ಪ್ರಸ್ತುತ ಹೋರಾಟದಲ್ಲಿಯೂ ಬಾಪು ಅವರ ಜೀವನ ಮತ್ತು ಆಲೋಚನೆಗಳು ನನಗೆ ಧೈರ್ಯ, ಶಕ್ತಿ ಮತ್ತು ಭರವಸೆಯನ್ನು ನೀಡಿವೆ. ನಾಡಿನ ಸಮಸ್ತ ಜನತೆಗೆ ಗಾಂಧಿ ಜಯಂತಿಯ ಶುಭಾಶಯಗಳು” ಎಂದು ತನಿಖೆಯನ್ನು ಉಲ್ಲೇಖಿಸದೆ ಪೋಸ್ಟ್ ಮಾಡಿದ್ದಾರೆ.

Advertisement

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬಿಬಿಎಂಪಿ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆ ಮತ್ತು ಸ್ವಚ್ಚತಾ ಆಂದೋಲನಾ ಪ್ರತಿಜ್ಞಾ ವಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

”ಮಹಾತ್ಮ ಗಾಂಧಿ ಅವರು ಮೊದಲು ಇಡೀ ಗ್ರಾಮೀಣ ಭಾರತವನ್ನು ಸುತ್ತಾಡಿ ನಮ್ಮ ಜನರ ಬದುಕು ಮತ್ತು ಬವಣೆಯನ್ನು ಅರ್ಥ ಮಾಡಿಕೊಂಡು, ಬಳಿಕ‌ ಅದಕ್ಕೆ ತಕ್ಕಂತೆ ಸ್ವಾತಂತ್ರ್ಯ ಹೋರಾಟ ಸಂಘಟಿಸಿದರು. ಸ್ವತಃ ಜೈಲು ಸೇರಿ ಹೋರಾಟ ಮುಂದುವರೆಸಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಕರೆ ನೀಡಿ 1947 ರಲ್ಲಿ ಬ್ರಿಟಿಷರು ಭಾರತದಿಂದ ಹೋಗುವಂತೆ ಮಾಡಿದರು. ಸ್ವಾತಂತ್ರ್ಯ ಭಾರತದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯಗಳನ್ನು ಈಡೇರಿಸುವ ಸಾಮಾಜಿಕ, ಆರ್ಥಿಕ ಕಾರ್ಯಕ್ರಮಗಳನ್ನು ನಾವು ರೂಪಿಸಿ ಜಾರಿ ಮಾಡಿದ್ದೇವೆ. ನಮ್ಮ ಗ್ಯಾರಂಟಿ ಕಾರ್ಯಕ್ರಮಗಳೂ ಕೂಡ ಬಡವರಿಗೆ ಆರ್ಥಿಕ‌ ಸ್ವಾತಂತ್ರ್ಯ ಒದಗಿಸಿಕೊಡುವುದಾಗಿದೆ” ಎಂದರು.

”ಗಾಂಧಿಯವರ ಸರ್ವೋದಯ, ಅಂಬೇಡ್ಕರ್ ಅವರ ಅಂತ್ಯೋದಯ ನಮ್ಮ ಸರ್ಕಾರದ ಧ್ಯೇಯ. ಗ್ರಾಮಗಳ ಉದ್ಧಾರ ಆಗದೆ ದೇಶ ಉದ್ಧಾರವಾಗಲು ಸಾಧ್ಯವಿಲ್ಲ ಎಂದು ನಾವು ಗ್ರಾಮಗಳ ಪ್ರಗತಿಗೆ ಕಾರ್ಯಕ್ರಮ ರೂಪಿಸಿದ್ದೇವೆ. ಆತ್ಮ ಸಾಕ್ಷಿಯ ನ್ಯಾಯಾಲಯ ಎಲ್ಲಾ ನ್ಯಾಯಾಲಯಗಳಿಗಿಂತ ಮಿಗಿಲಾದದು. ಆದ್ದರಿಂದ ನಾವು ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವುದೇ ಗಾಂಧಿಯವರಿಗೆ ನಾವು ಸಲ್ಲಿಸುವ ದೊಡ್ಡ ಗೌರವ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next