Advertisement

MUDA Scam: ಸದನದಲ್ಲಿ ಬಿಜೆಪಿ-ಜೆಡಿಎಸ್‌ ಅಹೋರಾತ್ರಿ ಧರಣಿ

07:57 PM Jul 24, 2024 | Team Udayavani |

ಬೆಂಗಳೂರು:  ಮುಂಗಾರು ಅಧಿವೇಶನದಲ್ಲಿ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಸ್ತಾಪಿಸಿ ಆಡಳಿತರೂಢ ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಳಿಕ ಬುಧವಾರ  (ಜು. 24) ಬಿಜೆಪಿ, ಸದನದಲ್ಲಿ ಮುಡಾ ಹಗರಣ  ಕುರಿತು ಚರ್ಚೆಗೆ ಅವಕಾಶ ಕೊಟ್ಟಿಲ್ಲ ಎಂದು ಬಿಜೆಪಿ ಸದಸ್ಯರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.

Advertisement

ಮುಡಾ ಹಗರಣ ಕುರಿತು ಬಿಜೆಪಿ ಸದಸ್ಯರು ಪ್ರಸ್ತಾಪಿಸಿ  ಪ್ರಶ್ನೋತ್ತರ ಕಲಾಪ ಬದಿಗೊತ್ತಿ ಚರ್ಚೆಗೆ ಅವಕಾಶ ನೀಡುವಂತೆ  ವಿಧಾನ ಸಭೆಯಲ್ಲಿ ಆಗ್ರಹಿಸಿದರು ಆದ್ರೆ, ಇದಕ್ಕೆ ಒಪ್ಪದ ಸ್ಪೀಕರ್,  ಚರ್ಚೆಗೆ ತೆಗೆದುಕೊಳ್ಳುವಂಥದ್ದು ಏನಿದೆ ಎಂದು ಪ್ರಶ್ನಿಸಿದರು. ಚರ್ಚೆಗೆ ಅವಕಾಶ ನೀಡಲು ಒಪ್ಪದ ಸ್ಪೀಕರ್​ ನಡೆಯಿಂದ ಬಿಜೆಪಿ, ಜೆಡಿಎಸ್ ಸದಸ್ಯರು ಆಕ್ರೋಶಗೊಂಡರು.

ಆದರೂ ಬಿಜೆಪಿ ಆಗ್ರಹಕ್ಕೆ ಮಣಿಯದ ಸ್ಪೀಕರ್, ನ್ಯಾಯಾಂಗ ತನಿಖೆ ನಡೆಯುತ್ತಿದೆ. ಅಲ್ಲಿ ಹೋಗಿ ದಾಖಲೆ ಕೊಡಿ ಎಂದು ಹೇಳಿದರು. ಇದರಿಂದ ರೊಚ್ಚಿಗೆದ್ದ ಬಿಜೆಪಿ ಸದಸ್ಯರು, ಅಲ್ಲಿಗೆ ಹೋಗಿ ದಾಖಲೆ ಕೊಡುವುದಾದರೆ ಸದನ ಏಕೆ ಬೇಕು ಎಂದು ಆಕ್ರೋಶ ಹೊರ ಹಾಕಿದರು. ಬಳಿಕ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಪೋಸ್ಟರ್ ಗಳೊಂದಿಗೆ ಸದನದ ಬಾವಿಗೆ ಇಳಿದು ಧರಣಿ ಆರಂಭಿಸಿದ್ದಾರೆ.  ಇದರಿಂದ ಸಿಟ್ಟಿಗೆದ್ದ ಸ್ಪೀಕರ್, ಪೋಸ್ಟರ್ ತಂದರೆ ನಿಯಮಾನುಸಾರ ಕ್ರ‌ಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಅಲ್ಲದೇ ಖಾದರ್  ಕೆಪಿಸಿಸಿ ಅಧ್ಯಕ್ಷರಾಗಲು ಲಾಯಕ್ ಎಂದ ವಿಪಕ್ಷ ನಾಯಕ ಅಶೋಕ್ ಗುಡುಗಿದ್ದು, ಸ್ಪೀಕರ್ ಗೆ ಕನ್ನಡ ಅರ್ಥ ಆಗಲ್ಲ, ತುಳುವಿನಲ್ಲಿ ಘೋಷಣೆ ಕೂಗಿ ಎಂದರು.


ಎರಡು ಸದನದಲ್ಲಿ ಬಿಜೆಪಿ ಅಹೋರಾತ್ರಿ ಧರಣಿ
ಇನ್ನು ಚರ್ಚೆಗೆ ಸ್ಪೀಕರ್ ಅವಕಾಶ ನೀಡದಿದ್ದರಿಂದ ರೊಚ್ಚಿಗೆದ್ದಿರುವ ಬಿಜೆಪಿ, ಜೆಡಿಎಸ್ ಸದಸ್ಯರು, ವಿಧಾನಸಭೆ ಮತ್ತು ವಿಧಾನಪರಿಷತ್​​ನಲ್ಲಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದ್ದು, ಈ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಬಿಜೆಪಿ ಜೆಡಿಎಸ್ ಸದಸ್ಯರು ಜಂಟಿ ಅಹೋರಾತ್ರಿ ಹೋರಾಟ ನಡೆಸಲಿದ್ದಾರೆ.


ಸಿಎಂ ಸದನದಲ್ಲಿ ಹೇಳಲಿ:   

Advertisement

ಇನ್ನು ಈ ಬಗ್ಗೆ ಮಾತನಾಡಿರುವ ಅಶೋಕ್, ಮುಡಾ ಹಗರಣದಲ್ಲಿ ಸರ್ಕಾರ ಹೆದರಿ ಓಡಿ ಹೋಗಿದೆ. ಹೇಡಿಗಳಂತೆ ಸರ್ಕಾರದ ನಡೆದುಕೊಳ್ಳುತ್ತಿದೆ. 14 ಮುಡಾ ಸೈಟ್ ನ್ಯಾಯವಾಗಿ ತೆಗೆದುಕೊಂಡಿದ್ದೆ ಎಂದು ಸಿಎಂ ಸದನದಲ್ಲಿ ಹೇಳಬೇಕು. ಕೇವಲ ಹೊರಗಡೆ ಹೇಳುವುದಲ್ಲ. ದಲಿತರ ಜಾಗ ಲೂಟಿ‌ ಹೊಡೆಯುವ ಕೆಲಸ ಆಗಿದೆ. ಸಿದ್ದರಾಮಯ್ಯ ಡಿಸಿಎಂ, ಸಿಎಂ ಆಗಿದ್ದಾಗ ಮುಡಾ ಹಗರಣ ಆಗಿದೆ. ದಲಿತರ ಜಮೀನು ಲೂಟಿ ಹೊಡೆದು ದಲಿತ ಸಮುದಾಯಕ್ಕೆ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ. ಮುಡಾ ಹಗರಣದ ಬಗ್ಗೆ ಮಾತನಾಡಿದ್ರೆ ಸಿಎಂ ಮಾನ ಮರ್ಯಾದೆ ‌ಹೋಗುತ್ತೆ ಎಂದು ಸ್ಪೀಕರ್ ಚರ್ಚೆಗೆ ಅವಕಾಶ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next