Advertisement
ಅಷ್ಟೇ ಅಲ್ಲ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಗೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮುಡಾಕ್ಕೆ ಅರ್ಜಿ ಸಲ್ಲಿಸಿದಾಗಲೂ ಸಿದ್ದರಾಮಯ್ಯ ಸಿಎಂ ಆಗಿದ್ದರು. ವಿವಾದಿತ ಜಮೀನು 1997ರಲ್ಲಿ ಭೂಸ್ವಾಧೀನ, 1998ರಲ್ಲಿ ಡಿನೋಟಿಫೈ ಮಾಡಲಾಯಿತು. 1996ರಿಂದ 1999ರ ವರೆಗೆ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. 2004ರಲ್ಲಿ ಮಾರಾಟ, 2005ರಲ್ಲಿ ಭೂಪರಿವರ್ತನೆ ಆಯಿತು. ಆಗಲೂ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. 2022ರಲ್ಲಿ ಅವರ ಪತ್ನಿಗೆ 14 ನಿವೇಶನ ಹಂಚಿಕೆ ಆಯಿತು. ಇದು ಅವರು ಅಧಿಕಾರದಲ್ಲಿ ಇಲ್ಲದಾಗ ನಡೆಯಿತು ಎನ್ನುತ್ತಾರೆ. ಆದರೆ 2022ರ ತೀರ್ಮಾನ ಆಗಿದ್ದು, 2017ರ ಮುಡಾ ನಿರ್ಣಯದಂತೆ. ಈಗ 2023ರ ಮೇ ತಿಂಗಳಿಂದ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ ಎಂದು ಸಿಎಂ ಪಾತ್ರದ ಬಗ್ಗೆ ದೃಷ್ಟಾಂತಗಳನ್ನು ಕಾಲಾನುಕ್ರಮವಾಗಿ ರಾಘವನ್ ನ್ಯಾಯಾಲಯಕ್ಕೆ ವಿವರಿಸಿದರು.
Related Articles
Advertisement
ಹೀಗಾಗಿ ರಾಜ್ಯಪಾಲರ ಆದೇಶದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಬಾರದು ಎಂದು ರಾಘವನ್ ಮನವಿ ಮಾಡಿದರು.
ದೂರುದಾರರ ವಾದವೇನು?
ಭೂಸ್ವಾಧೀನ, ಡಿನೋಟಿಫೈ ವೇಳೆ ಡಿಸಿಎಂ ಆಗಿದ್ದ ಸಿದ್ದರಾಮಯ್ಯ
ಮಾರಾಟ, ಭೂ ಪರಿವರ್ತನೆ ವೇಳೆಯೂ ಉಪಮುಖ್ಯಮಂತ್ರಿ
2022ರಲ್ಲಿ ಸಿಎಂ ಪತ್ನಿಗೆ ಸೈಟ್ ಸಿಕ್ಕಿದ್ದು 2017ರ ನಿರ್ಣಯದಂತೆ
ಸಿಎಂ ಪಾತ್ರದ ಬಗ್ಗೆ ಹಿಂದಿನ ವಿಚಾರಣೆ ವೇಳೆ ಕೇಳಿದ್ದ ಹೈಕೋರ್ಟ್
ಉತ್ತರಿಸಲು ಪ್ರಯತ್ನಿಸಿದ ಸ್ನೇಹಮಯಿ ಕೃಷ್ಣ ಪರ ವಕೀಲ ರಾಘವನ್
ಯುಟ್ಯೂಬ್‌ನಲ್ಲಿ 7 ಸಾವಿರಕ್ಕೂ ಹೆಚ್ಚು ವೀಕ್ಷಣೆ
ಸೋಮವಾರ ನಡೆದ ಹೈಕೋರ್ಟ್ ಕಲಾಪದ ನೇರ ಪ್ರಸಾರವನ್ನು ಯುಟ್ಯೂಬ್‌ನಲ್ಲಿ 7 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದರು.
ಆಡಳಿತದಲ್ಲಿ ಪಾವಿತ್ರ್ಯ ತರಲು ಕಾಯ್ದೆ ರಚನೆ: ರಾಘವನ್
ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17ಎ ಅಡಿ ಪೊಲೀಸ್ ಅಧಿಕಾರಿ ತನಿಖೆಗೆ ಅನುಮತಿ ಕೋರುವ ಅಗತ್ಯವೇ ಇಲ್ಲ. ಯಾರೂ ಮನವಿ ಮಾಡದಿದ್ದರೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಹುದು. ಸೆಕ್ಷನ್ 7ಸಿ ಅಡಿ ಅನುಚಿತ ಲಾಭ, ಅನುಕೂಲ ಪಡೆಯುವುದೂ ಅಪರಾಧ. ಕಾನೂನುಬಾಹಿರವಲ್ಲದಿದ್ದರೂ ಸರಕಾರಿ ನೌಕರನ ಮೇಲೆ ವೈಯಕ್ತಿಕ ಪ್ರಭಾವ ಬೀರಿ ಕೆಲಸ ಮಾಡಿಸಿಕೊಂಡರೂ ಈ ಸೆಕ್ಷನ್ ಅಡಿ ಅಪರಾಧವಾಗಲಿದೆ. ಒಬ್ಬ ಸಚಿವ ತನ್ನ ಇಲಾಖೆಯಲ್ಲದೆ ಬೇರೆ ಇಲಾಖೆಯ ಕೆಲಸದ ಮೇಲೆ ಪ್ರಭಾವ ಬೀರಿದರೂ ಅದು ಅಪರಾಧ. ಸಾರ್ವಜನಿಕ ಆಡಳಿತದಲ್ಲಿ ಪಾವಿತ್ರ್ಯ ಕಾಪಾಡಲು ಈ ಕಾಯ್ದೆ ರಚಿಸಲಾಗಿದೆ. ಏನೇ ಅಪರಾಧವಿಲ್ಲದಿದ್ದರೂ ಆಡಳಿತದ ಶುದ್ಧತೆ ಕಾಪಾಡಲೂ ಅಭಿಯೋಜನೆಗೆ ಅನುಮತಿ ನೀಡಬಹುದು. ಜನಸೇವಕರ ವಿಶ್ವಾಸಾರ್ಹತೆ ಬಗ್ಗೆ ಗುಲಗುಂಜಿಯಷ್ಟು ಅನುಮಾನ ಮೂಡಿದರೂ ಅದು ಅವರ ವೈಯಕ್ತಿಕ ವಿಚಾರ ಆಗುವುದಿಲ್ಲ, ಅವರು ಪ್ರತಿನಿಧಿಸುವ ವ್ಯವಸ್ಥೆಯ ವಿಚಾರ ಆಗುತ್ತದೆ. ಆಡಳಿತದಲ್ಲಿ ಎತ್ತರಕ್ಕೆ ಹೋದಷ್ಟೂ ತನಿಖೆಯ ಅಗತ್ಯ ಹೆಚ್ಚಿದೆ. ಹೀಗಾಗಿ ರಾಜ್ಯಪಾಲರ ಆದೇಶದಲ್ಲಿ ಕೋರ್ಟ್ ಮಧ್ಯಪ್ರವೇಶಿಸಬಾರದು. ತನಿಖೆ ಅಗತ್ಯವಿಲ್ಲವೆಂದಾದರೆ ಮುಡಾ ಹಗರಣದ ತನಿಖೆಗೆ ವಿಚಾರಣಾ ಆಯೋಗವನ್ನೇಕೆ ಸರಕಾರ ನೇಮಿಸಿದೆ ಎಂದು ರಾಘವನ್ ಪ್ರಶ್ನಿಸಿದರು.