Advertisement

MUDA Case: ಕತ್ತಲಾದ ಮೇಲೆ ಜಗ್ಗಿದ್ಯಾಕೆ? ಬಗ್ಗಿದ್ಯಾಕೆ?: ಸಿಎಂಗೆ ನಾರಾಯಣಸ್ವಾಮಿ ಲೇವಡಿ

12:01 AM Oct 02, 2024 | Team Udayavani |

ಬೆಂಗಳೂರು: “ನಾನು ಜಗ್ಗುವುದಿಲ್ಲ, ಬಗ್ಗುವುದಿಲ್ಲ, ಏನೇ ಬಂದರೂ ಎದುರಿಸುತ್ತೇನೆ’ ಎನ್ನುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಕತ್ತಲಾದ ಮೇಲೆ ಜಗ್ಗಿದ್ಯಾಕೆ? ಬಗ್ಗಿದ್ಯಾಕೆ?’ ರಾತೋರಾತ್ರಿ ಇಂಥ ಪರಿವರ್ತನೆಗೆ ಕಾರಣವೇನು ? ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 14 ನಿವೇಶನಗಳನ್ನು ಮುಡಾಕ್ಕೆ ಹಿಂತಿರುಗಿಸುವುದಾಗಿ ಅವರ ಪತ್ನಿ ಪತ್ರ ಕೊಟ್ಟಿದ್ದಾರೆ. ಆದರೆ ಅದರಲ್ಲಿ ದಿನಾಂಕವೇ ಇಲ್ಲ. ಆದ್ದರಿಂದ ಅದು ಖಾತ್ರಿಯೇನಲ್ಲ. ಇದರಿಂದ ನಿಮ್ಮ ಕಪಟತನ ಬಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾರೂ ಕೂಡ ಈ ರೀತಿ ಉದ್ಧಟತನ ತೋರಬಾರದು ಎಂದರು.

ವಾಲ್ಮೀಕಿ ನಿಗಮದ್ದು 187 ಕೋಟಿ ರೂ.ಗಳ ಹಗರಣವಲ್ಲ, 87 ಕೋಟಿ ರೂ. ಹಗರಣ ಎಂದು ಸದನದಲ್ಲೇ ಒಪ್ಪಿಕೊಂಡರು. ಮುಡಾದ ತಮ್ಮ ನಿವೇಶನಗಳಿಗೆ 62 ಕೋ.ರೂ. ಬರಬೇಕು; ಕೊಡುತ್ತೀರಾ ಎಂದು ಪತ್ರಕರ್ತರನ್ನು ಪ್ರಶ್ನಿಸಿದ್ದರು. ಈಗ ನಿವೇಶನ ಮರಳಿಸಿದ್ದಾರೆ. ಇದರಿಂದ ಅಪರಾಧ ಮನ್ನಾ ಆಗುವುದಿಲ್ಲ ಎಂದರು.

ಸಮರ್ಥಿಸಿದ ಎಲ್ಲರೂ ರಾಜೀನಾಮೆ ಕೊಡಲಿ: ಲೆಹರ್‌ ಸಿಂಗ್‌ ಆಗ್ರಹ
ಮುಡಾ ಪ್ರಕರಣದಲ್ಲಿ ಇಡೀ ಸಚಿವ ಸಂಪುಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡಿದೆ. ಕಾಂಗ್ರೆಸ್‌ ಹೈಕಮಾಂಡ್‌ ಹಾಗೂ ಸಮಸ್ತ ಆಡಳಿತ ಯಂತ್ರವೇ ಸಮರ್ಥಿಸಿಕೊಂಡಿದ್ದು ಪ್ರತಿಯೊಬ್ಬರೂ ರಾಜೀನಾಮೆ ನೀಡಬೇಕು. ಇಲ್ಲವಾದರೆ ರಾಜ್ಯದ ಜನರ ಕ್ಷಮೆಯಾಚಿಸಬೇಕೆಂದು ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next