Advertisement

MUDA Case: ತಪ್ಪನ್ನು ಮುಚ್ಚಿ ಹಾಕಲು ಲೋಕಾಯುಕ್ತಕ್ಕೆ ಮನೀಶ್‌ ಖರ್ಬೀಕರ್‌ ನೇಮಕ

01:52 AM Oct 01, 2024 | Team Udayavani |

ಬೆಂಗಳೂರು: ಮುಡಾ ಪ್ರಕರಣದಲ್ಲಿ ತಮ್ಮ ತಪ್ಪನ್ನು ಮುಚ್ಚಿ ಹಾಕಿ ರಕ್ಷಣೆ ಪಡೆಯುವುದಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನೀಶ್‌ ಖರ್ಬೀಕರ್‌ ಅವರನ್ನು ಲೋಕಾಯುಕ್ತದ ಎಡಿಜಿಪಿಯಾಗಿ ನೇಮಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್‌ ಆರೋಪಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜುಲೈನಲ್ಲಿ ನಡೆದ ವಿಧಾನಮಂಡಲ ಅಧಿವೇಶನದ ಕೊನೆಯ ದಿನ ಸಿದ್ದರಾಮಯ್ಯನವರು ಖರ್ಬೀಕರ್‌ ಅವರನ್ನು ಲೋಕಾಯುಕ್ತ ಎಡಿಜಿಪಿಯಾಗಿ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ. ಮುಡಾ ಪ್ರಕರಣ ಲೋಕಾಯುಕ್ತ ವಿಚಾರಣೆಗೆ ಬರಬಹುದೆಂಬ ಕಾರಣಕ್ಕಾಗಿಯೇ ಈ ರೀತಿ ಮಾಡಿದ್ದಾರೆ. ಹೀಗಾಗಿ ಮುಡಾ ನಿವೇಶನ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಲೋಕಾಯುಕ್ತ ಪೊಲೀಸ್‌ ಅಧಿಕಾರಿಗೆ ಹೆಚ್ಚುವರಿಯಾಗಿ ಸರಕಾರದ ಅಧೀನ ಸಂಸ್ಥೆಗಳ ತನಿಖೆ ಜವಾಬ್ದಾರಿ ಕೊಟ್ಟ ಉದಾಹರಣೆ ಇಡೀ ದೇಶದಲ್ಲೇ  ಇಲ್ಲ. ಇಂತಹ ಕೆಟ್ಟ ಪರಂಪರೆಗೆ ಸಿದ್ದರಾಮಯ್ಯ ನಾಂದಿ ಹಾಡಿದ್ದಾರೆ. ಎಸ್‌ಐಟಿ ಎಡಿಜಿಪಿಯಾಗಿ ಸಣ್ಣಪುಟ್ಟ ಅಧಿಕಾರಿಗಳನ್ನು ಬಂಧಿಸಿದ್ದಷ್ಟೇ ಖರ್ಬೀಕರ್‌ ಅವರ ಹೆಚ್ಚುಗಾರಿಕೆ. ತಮ್ಮನ್ನು ರಕ್ಷಿಸಿಕೊಳ್ಳಲು ಮುಖ್ಯಮಂತ್ರಿ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹಿಂದಿನ ಅವಧಿಯಲ್ಲಿ ಅವರ ವಿರುದ್ಧ ಲೋಕಾಯುಕ್ತದಲ್ಲಿ 70ಕ್ಕೂ ಹೆಚ್ಚು ಪ್ರಕರಣಗಳು ತನಿಖಾ ಹಂತದಲ್ಲಿ ಇರುವಾಗಲೇ ಲೋಕಾಯುಕ್ತದ ಶಕ್ತಿ ಕುಂದಿಸುವ ಕೆಲಸ ಮಾಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next