Advertisement

MUDA Case: ನ್ಯಾಯ ನನ್ನ ಪರವಿದೆ, ರಾಜಕೀಯ ಪ್ರೇರಿತ ಕೇಸ್‌ ಎದುರಿಸಿ ಗೆಲ್ಲುವೆ: ಸಿಎಂ

10:06 PM Sep 27, 2024 | Team Udayavani |

ಮೈಸೂರು: ಮುಡಾ ಪ್ರಕರಣದಲ್ಲಿ ಕಾನೂನು ಪ್ರಕಾರ ಹೋರಾಟ ಮಾಡಲಾಗುವುದು. ನನ್ನ ಜೊತೆಗಿನ ಜನಬೆಂಬಲದಿಂದ ಬೆದರಿರುವ ವಿಪಕ್ಷಗಳು ನನ್ನ ಮೇಲೆ ರಾಜಕೀಯ ಪ್ರೇರಿತ ಕೇಸ್ ಹಾಕಿರುವುದು ಇದೇ ಮೊದಲು. ನ್ಯಾಯ ನನ್ನ ಪರವಾಗಿದೆ, ಇದನ್ನು ಎದುರಿಸಿ ಗೆಲ್ಲುತ್ತೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಿರುವಾಗ ನಾನೇಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ವಿಪಕ್ಷಗಳ ರಾಜೀನಾಮೆ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಎಂದಿಗೂ ಸಂವಿಧಾನ ವಿರುದ್ಧ ಅಥವಾ ಕಾನೂನು ವಿರುದ್ಧವಾಗಿ ಯಾವುದೇ ಕೆಲಸ ಮಾಡಿಲ್ಲ. ಹಿಂದೆಯೂ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಹೀಗಿರುವಾಗ ನಾನೇಕೆ ರಾಜೀನಾಮೆ ನೀಡ ಬೇಕು. ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನನ್ನು ಕಂಡರೆ ವಿಪಕ್ಷಗಳಿಗೆ ಭಯ. ಈ ಕಾರಣಕ್ಕಾಗಿಯೇ ನನ್ನನ್ನು ಪದೇ ಪದೇ ಟಾರ್ಗೆಟ್‌ ಮಾಡುತ್ತಿದ್ದಾರೆ. ನನ್ನ ಇಡೀ ರಾಜಕೀಯ ಜೀವನದಲ್ಲಿ ಇದೇ ಮೊದಲ ಪ್ರಕರಣ ಆಗಿದೆ. ಇದು ರಾಜಕೀಯ ಸಂಬಂಧದ ಮೊದಲ ಪ್ರಕರಣ. ದಯವಿಟ್ಟು ಈ ಸಾಲನ್ನು ಗಮನವಿಟ್ಟು ಕೇಳಿ ಎಂದ ಅವರು, ನನ್ನ ವಿರುದ್ಧ ಕೇಳಿ ಬಂದಿರುವ ಆರೋಪ ಸಂಬಂಧ ಕಾನೂನು ಹೋರಾಟವನ್ನು ನಮ್ಮ ವಕೀಲರು ಮಾಡುತ್ತಾರೆ ಎಂದರು.

ನನಗೆ ಯಾವ ಭಯವೂ ಇಲ್ಲ
ನನ್ನ ವಿರುದ್ಧ ಕೋರ್ಟ್‌ನಲ್ಲಿ ಆದೇಶ ಬಂದಿರುವುದಕ್ಕೆ ನನಗೆ ಯಾವ ಭಯವೂ ಇಲ್ಲ. ನಾನು ಭಯಗೊಂಡ ರೀತಿ ಕಾಣುತ್ತಿದ್ದೀನ ಎಂದು ಪ್ರಶ್ನಿ ಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಎಸಿಬಿಯೇ ಇದೆ. ಇದಕ್ಕೆ ಯಾಕೆ ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಲ್ಲ. ನಾನು ಲೋಕಾಯುಕ್ತವನ್ನು ಮುಚ್ಚಿರಲಿಲ್ಲ. ಎಸಿಬಿ ರಚನೆ ಮಾಡಿದ್ದೆ ಅಷ್ಟೇ ಎಂದರು.

ಆಡಳಿತದಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಸರಿಯಲ್ಲ: 
ಸಂವಿಧಾನದಿಂದ ಆಯ್ಕೆಯಾದ ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ದೇಶದಲ್ಲಿ ಎಲ್ಲೆಲ್ಲಿ ವಿರೋಧಪಕ್ಷಗಳ ಸರ್ಕಾರವಿದೆಯೋ, ಅಲ್ಲಿ ಕೇಂದ್ರ ಸರ್ಕಾರ ಇಡಿ, ಸಿಬಿಐ ಹಾಗೂ ರಾಜಭವನದ ಕಚೇರಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಷ್ಟ್ರಪತಿ ಅಥವಾ ರಾಜ್ಯಪಾಲರಾಗಲಿ ಸಂವಿಧಾನದ ಪ್ರಕಾರ ಕೆಲಸ ಮಾಡಲು ನೇಮಕಗೊಂಡವರು. ಯಾವುದೇ ಚುನಾವಣೆಯ ಮೂಲಕ ಆಯ್ಕೆಯಾದವರಲ್ಲ. ಅವರು ಸಂವಿಧಾನದಲ್ಲಿ ಪ್ರಮುಖರು. ಆದರೆ ಜನಪ್ರತಿನಿಧಿಗಳು ಚುನಾವಣೆಯ ಮೂಲಕ ಆಯ್ಕೆಯಾಗಿ ಆಡಳಿತದಲ್ಲಿ ಪ್ರಮುಖರು. ಇಂತಹ ಪ್ರಮುಖ ವ್ಯತ್ಯಾಸವಿರುವಾಗ ಯಾವುದೇ ರಾಜ್ಯದ ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ . ಈ ವಿಷಯದ ಕುರಿತು ರಾಷ್ಟ್ರದಾದ್ಯಂತ ಚರ್ಚೆಯಾಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next