Advertisement

MUDA Case:ಸಿಎಂ ಸಿದ್ದರಾಮಯ್ಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌,ರಾಜ್ಯಪಾಲರ ಅನುಮತಿಗೆ ಮೇಲುಗೈ

12:35 PM Sep 24, 2024 | Team Udayavani |

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದೊಡ್ಡ ಸದ್ದು ಮಾಡಿರುವ ಹಾಗೂ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಕಾನೂನು ಸಮರಕ್ಕೆ ಸಾಕ್ಷಿಯಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(MUDA)ದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮಂಗಳವಾರ (ಸೆ.24) ಸಿಎಂ ಸಿದ್ದರಾಮಯ್ಯ ಅರ್ಜಿಯನ್ನು ವಜಾಗೊಳಿಸಿ  ಮಹತ್ವದ ತೀರ್ಪನ್ನು ಪ್ರಕಟಿಸಿದೆ.

Advertisement

ರಾಜ್ಯಪಾಲರು ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿ, ರಾಜ್ಯಪಾಲರ ಅನುಮತಿ ನೀಡಿರುವುದನ್ನು ಎತ್ತಿಹಿಡಿದಿದೆ. ಇದರೊಂದಿಗೆ ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯ ಅತಂತ್ರವಾದಂತಾಗಿದೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತಮ್ಮ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ಕುರಿತು ನ್ಯಾ|ಎಂ.ನಾಗಪ್ರಸನ್ನ ಅವರಿರುವ ಏಕಸದಸ್ಯ ನ್ಯಾಯಪೀಠವು ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಿದ್ದರಾಮಯ್ಯ ಪರ ಹಿರಿಯ ವಕೀಲರಾದ ಅಭಿಷೇಕ್‌ ಮನು ಸಿಂಘ್ವಿ ಭಾಗಿ.

ಮುಖ್ಯಮಂತ್ರಿಗಳ ಅರ್ಜಿ ಕುರಿತು ಘಟಾನುಘಟಿ ಹಿರಿಯ ವಕೀಲರು ಸುದೀರ್ಘ ವಾದ-ಪ್ರತಿವಾದ ಆಲಿಸಿ ಏಕಸದಸ್ಯ ನ್ಯಾಯಪೀಠವು ತೀರ್ಪನ್ನು ಕಾಯ್ದಿರಿಸಿತ್ತು. ಮುಖ್ಯಮಂತ್ರಿಗಳ ಅರ್ಜಿ ವಜಾಗೊಂಡರೆ ಅಥವಾ ಪುರಸ್ಕಾರವಾದರೆ ಮುಂದೇನಾಗಬಹುದು ಎಂಬ ಚರ್ಚೆ ಭರ್ಜರಿಯಾಗಿ ನಡೆಯುತ್ತಿರುವ ನಡುವೆ ಈ ಬೆಳವಣಿಗೆ ನಡೆದಿದ್ದು, ಸಿದ್ದರಾಮಯ್ಯಗೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾದಂತಾಗಿದೆ.

Advertisement

ತೀರ್ಪಿನಲ್ಲೇನಿದೆ?

ಮುಖ್ಯಮಂತ್ರಿಗಳ ವಿರುದ್ಧ ಖಾಸಗಿ ದೂರುದಾರರು ಅನುಮತಿ ಕೋರಬಹುದು. ಸಂವಿಧಾನದ ಕಲಂ 17 ಎ ಅಡಿ ಅನುಮತಿ ಕೋರಿದ್ದು ಸರಿಯಾಗಿದೆ. ಸಚಿವ ಸಂಪುಟದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದ ಕ್ರಮ ಸೂಕ್ತವಾಗಿದೆ. ರಾಜ್ಯಪಾಲರು ವಿವೇಚನೆ ಬಳಸಿ 17ಎ ಅಡಿ ಆದೇಶ ನೀಡಿರುವುದು ಕಾನೂನುಬದ್ಧವಾಗಿದೆ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿ ರಾಜ್ಯಪಾಲರಾದ ಗೆಹ್ಲೋಟ್‌ ಆ.17ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳು ಆ.19ರಂದು ಹೈಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಿದ್ದರು.

ಮುಖ್ಯಾಂಶಗಳು:

*ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ನೀಡಿದ ಪ್ರಾಸಿಕ್ಯೂಷನ್‌ ಗೆ ತಡೆ ನೀಡಲು ನಕಾರ.

*ತೀರ್ಪನ ಬೆನ್ನಲ್ಲೇ ಮೌನಕ್ಕೆ ಜಾರಿದ ಸಿದ್ದರಾಮಯ್ಯ. ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ ಸಿಎಂ.

*ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯಗೆ ಶಾಕ್

*ಪ್ರಾಸಿಕ್ಯೂಷನ್‌ ಬಗ್ಗೆ ಹೈಕೋರ್ಟ್‌ ನಿಂದ ಮಹತ್ವದ ತೀರ್ಪು ಪ್ರಕಟಿಸಿದ ನ್ಯಾ.ಎಂ.ನಾಗಪ್ರಸನ್ನ ಪೀಠ

*ಹೈಕೋರ್ಟ್‌ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ

*ಸಿಎಂ ಸಿದ್ದರಾಮಯ್ಯ ಎತ್ತಿದ್ದ ಎಲ್ಲಾ ಕಾನೂನಿನ ಪ್ರಶ್ನೆಗಳು ತಿರಸ್ಕೃತ

*ತೀರ್ಪಿನ ನಂತರ ಹಿರಿಯ ವಕೀಲರ ಜತೆ ಸಿಎಂ ಸಿದ್ದರಾಮಯ್ಯ ಸಮಾಲೋಚನೆ

*ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ರಾಜ್ಯಪಾಲರು ಕಾನೂನು ಸಮ್ಮತವಾಗಿ ಅನುಮತಿ ನೀಡಿದ್ದಾರೆ ದೂರುದಾರ ಸ್ನೇಹಮಯಿ ಕೃಷ್ಣ.

Advertisement

Udayavani is now on Telegram. Click here to join our channel and stay updated with the latest news.

Next