Advertisement

MUDA Case: ಆಲಂ ಪಾಷಾ ಅರ್ಜಿ ವಜಾಗೊಳಿಸಿದ ಕೋರ್ಟ್‌

10:26 PM Aug 13, 2024 | Team Udayavani |

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ನಿವೇಶನ ಹಂಚಿಕೆ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಖಾಸಗಿ ದೂರುಗಳನ್ನು ವಿಚಾರಣೆಗೆ ಸ್ವೀಕರಿಸದಂತೆ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ.

Advertisement

ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ಸ್ನೇಹಮಯಿ ಕೃಷ್ಣ ಎಂಬುವವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ಆರಂಭವಾಗಿತ್ತು. ಅದೇ ವೇಳೆ ಆಲಂ ಪಾಷಾ, ತಾವು ಸಲ್ಲಿಸಿದ್ದ ಮಧ್ಯಂತರ ಅರ್ಜಿ ಆಲಿಸುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು. ಅದಕ್ಕೆ ನ್ಯಾಯಾಧೀಶರು, ನೀವು ಯಾವ ನಿಯಮಗಳ ಅಡಿ ಅರ್ಜಿ ಸಲ್ಲಿಸಿದ್ದೀರಾ? ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಆಲಂ ಪಾಷಾ, ತಾವು ಪಬ್ಲಿಕ್‌ ಪ್ರಾಸಿಕ್ಯೂಷನ್‌ಗೆ ನೆರವಾಗುವಂತೆ ವಾದ ಮಂಡಿಸುವುದಾಗಿ ಹೇಳಿದರು.

ಅದಕ್ಕೆ ಮರು ಪ್ರಶ್ನಿಸಿದ ನ್ಯಾಯಾಧೀಶರು, ಆದರೆ, ಪಿಸಿಆರ್‌ ಪರಿಗಣಿಸಿದ ಬಳಿಕ ಅಲ್ಲವೇ ನಿಮ್ಮ ವಾದ ಆಲಿಸುವುದು? ಈ ಸಂದರ್ಭದಲ್ಲಿ ನಿಮ್ಮ ಮಧ್ಯಪ್ರವೇಶದಿಂದ ಗೊಂದಲ ಸೃಷ್ಟಿಯಾಗಲಿದೆ. ನಿಮಗೆ ಪ್ರಶ್ನಿಸುವ ಅಧಿಕಾರವೇನು? ಎಂದು ಮತ್ತೆ ಪ್ರಶ್ನಿಸಿದರು. ಅದಕ್ಕೆ ಆಲಂ ಪಾಷಾ, ಸಾರ್ವಜನಿಕ ಹಿತಾಸಕ್ತಿಯಿಂದ ಅರ್ಜಿ ಹಾಕಲಾಗಿದೆ ಎಂದು ವಾದಿಸಿದರು. ಮರು ಪ್ರಶ್ನಿಸಿದ ನ್ಯಾಯಾಧೀಶರು, ಪ್ರಕರಣದಲ್ಲಿ ನಿಮ್ಮ ಪಾತ್ರ ಏನು? ನೀವು ಸಂತ್ರಸ್ತರಾ? ಅಥವಾ ಆರೋಪಿಯಾ? ಏನೆಂದು ದಾಖಲಿಸಿಕೊಳ್ಳಬೇಕು? ಎಂದು ಇನ್ನೊಮ್ಮೆ ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸ್ನೇಹಮಹಿ ಕೃಷ್ಣ ಪರ ವಕೀಲೆ ಲಕ್ಷ್ಮೀ ಅಯ್ಯಂಗಾರ್‌, ಪ್ರಕರಣದಲ್ಲಿ 3ನೇ ವ್ಯಕ್ತಿ ಮಧ್ಯಪ್ರವೇಶಕ್ಕೆ ಅಧಿಕಾರವಿಲ್ಲ. ಈ ರೀತಿ ಕೋರ್ಟ್‌ ಸಮಯ ವ್ಯರ್ಥ ಮಾಡಿದ್ದಕ್ಕೆ ದಂಡ ಹಾಕಬೇಕು. ಜತೆಗೆ ಮನವಿ ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.

ಪಿಸಿಆರ್‌ ವ್ಯಾಖ್ಯಾನಕ್ಕೆ ಜಡ್ಜ್ ಗರಂ

Advertisement

ಇನ್ನು ವಿಚಾರಣೆ ವೇಳೆ ಆಲಂ ಪಾಷಾ, ಪಿಸಿಆರ್‌ ಅಂದರೆ ಇತ್ತೀಚೆಗೆ ಪೊಲೀಸ್‌ ಕಂಟ್ರೋಲ್‌ ರೂಮ್‌ ಅಂತಾಗಿದೆ ಎಂದರು. ಅದಕ್ಕೆ ಗರಂ ಆದ ನ್ಯಾಯಾಧೀಶರು, ಇಲ್ಲಿ ರಾಜಕೀಯ ಡ್ರಾಮಾ ಮಾಡಬೇಡಿ. ಇದು ಕೋರ್ಟ್‌ ಎಂಬುದನ್ನು ತಿಳಿದುಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ, ನೀವು ಸಲ್ಲಿಸಿರುವ ಅರ್ಜಿ ರದ್ದುಗೊಳಿಸಲು ಅರ್ಹವಾಗಿದೆ. ಜತೆಗೆ ಮೊದಲು ನೀವು ಯಾವ ಅಧಿಕಾರದಲ್ಲಿ ಇದನ್ನು ಪಶ್ನಿಸುತ್ತಿದ್ದೀರಾ? ಎಂದು ತಿಳಿಸಿ ಎಂದು ಅರ್ಜಿ ವಜಾಗೊಳಿಸಿ ಆದೇಶಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ಸ್ನೇಹಮಯಿ ಕೃಷ್ಣ ಮತ್ತು ಟಿ.ಜೆ.ಅಬ್ರಾಹಂ ಪ್ರತ್ಯೇಕವಾಗಿ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next