Advertisement

MUDA Case: ಮಧ್ಯರಾತ್ರಿವರೆಗೆ ಕಡತ ವಿಲೇವಾರಿ ಮಾಡಿದ ಸಿಎಂ ಸಿದ್ದರಾಮಯ್ಯ?

04:26 AM Oct 03, 2024 | Team Udayavani |

ಬೆಂಗಳೂರು: ಮುಡಾ ಹಗರಣ ಹೊರಬಂದ ಬಳಿಕ ತಮ್ಮ ಮುಂದಿರುವ ಕಡತ ವಿಲೇವಾರಿಗೆ ಹೆಚ್ಚು ಆದ್ಯತೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಗಳವಾರ ತಡರಾತ್ರಿವರೆಗೆ ಕುಳಿತು ವರ್ಗಾವಣೆ ಸೇರಿದಂತೆ ಪ್ರಮುಖ ಕಡತಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.

Advertisement

ಬುಧವಾರ ಇಡೀ ದಿನ ಗಾಂಧಿ ಜಯಂತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಗುರುವಾರ ದಸರಾ ಕಾರ್ಯಕ್ರಮದ ನಿಮಿತ್ತ ಮೈಸೂರಿನಲ್ಲಿ ಇರಲಿದ್ದಾರೆ. ಶುಕ್ರವಾರ ಹಾಗೂ ಶನಿವಾರ ರಾಯಚೂರು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಸಿಎಂ, ಮಂಗಳವಾರ ರಾತ್ರಿಯೇ ಹಲವು ಮಹತ್ವದ ಕಡತಗಳಿಗೆ ಸಹಿ ಮಾಡಿದ್ದಾರೆ.

ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಲ್ಲದ ಮನಸ್ಸಿನಿಂದಲೇ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳು, ಸಂಜೆ ವಿಧಾನಸೌಧದಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಕುರಿತ ಸಭೆಯಲ್ಲೂ ಹೆಚ್ಚು ಆಸಕ್ತಿ ವಹಿಸಿರಲಿಲ್ಲ. ವಿಧಾನಸೌಧದಿಂದ ತಮ್ಮ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ, ರಾತ್ರಿವರೆಗೆ ಮುಡಾ ಪ್ರಕರಣದ ಆಗು-ಹೋಗುಗಳ ಕುರಿತು ಅಧಿಕಾರಿಗಳು ಹಾಗೂ ಆಪ್ತರೊಂದಿಗೆ ಚರ್ಚಿಸಿದ್ದಾರೆ.

ರಾತ್ರಿ ಊಟ ಮುಗಿಸಿದ ಅನಂತರ ಕಡತ ವಿಲೇವಾರಿ ಯಜ್ಞ ಕೈಗೊಂಡ ಸಿಎಂ, ಮಧ್ಯರಾತ್ರಿ 2 ಗಂಟೆವರೆಗೆ ತಮ್ಮ ಮುಂದಿದ್ದ ಕಡತಗಳಿಗೆ ಸಹಿ ಮಾಡಿದ್ದಾರೆ. ಈ ಪೈಕಿ ಬಹುತೇಕ ವರ್ಗಾವಣೆಗೆ ಸಂಬಂಧಿಸಿದ ಕಡತಗಳೇ ಇದ್ದವು. ಅದಲ್ಲದೆ ಇನ್ನೂ ಕೆಲ ಪ್ರಮುಖ ಕಡತಗಳಿಗೂ ಸಹಿ ಮಾಡಿದ್ದಾರೆ ಎಂದು ಸಿಎಂ ಆಪ್ತಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next