ಉಳ್ಳಾಲ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದರೆ ಒಳಿತು. ಕಾನೂನುಬದ್ಧವಾಗಿ ಹೋರಾಡಲು ಮುಖ್ಯಮಂತ್ರಿಗೆ ಅವಕಾಶವಿದ್ದು, ಸಾರ್ವಜನಿಕರ ದೃಷ್ಟಿಕೋನದಿಂದ ರಾಜೀನಾಮೆ ಸೂಕ್ತವಾಗಿದೆ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ಬಗ್ಗೆ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶವನ್ನು ಪ್ರಶ್ನಿಸಿದ ಸಿದ್ದರಾಮಯ್ಯರ ವಿರುದ್ಧ ವಾಸ್ತವಾಂಶಗಳ ಬಗ್ಗೆ ತನಿಖೆ ಅಗತ್ಯವಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಯಾವುದೇ ತಪ್ಪು ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಆದರೆ ಪ್ರಸ್ತುತ ಆರೋಪಗಳ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ಹಿಂದೆ ರೈಲ್ವೆ ಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲು ದುರ್ಘ ಟನೆ ಸಂದರ್ಭ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂದಿನ ರಾಜಕೀಯ ದಲ್ಲಿ ಅಂತಹ ಪ್ರವೃತ್ತಿ ಇಲ್ಲ.
ರಾಜೀನಾಮೆ ಕೊಡಬೇಕು ಅಥವಾ ಕೊಡ ಬಾರದು ಎಂಬುದು ಅವರಿಗೆ ಬಿಟ್ಟದ್ದು. ಈ ಪ್ರಕರಣವನ್ನು ಸಿಬಿಐ ಅಥವಾ ಲೋಕಾಯುಕ್ತದಂತಹ ಸಂಸ್ಥೆಗೆ ಒಪ್ಪಿಸಬೇಕು ಎಂದು ನಾನು ಹೇಳುವುದಿಲ್ಲ. ಪ್ರತಿ ಯೊಂದು ತನಿಖಾ ಸಂಸ್ಥೆಯೂ ತನ್ನ ಕರ್ತವ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತದೆ ಎಂದು ಭಾವಿಸುತ್ತೇನೆ.
ಹೈಕೋರ್ಟ್ ತೀರ್ಪು ನೀಡಿರು ವುದು ಮುಡಾ ವಿಷಯದಲ್ಲಿ ಮಾತ್ರ. ಮೇಲ್ನೋಟಕ್ಕೆ ಪುರಾವೆ ಇದೆ ಎಂದು ಹೈಕೋರ್ಟ್ ಹೇಳಿದೆ. ಹಾಗಿರುವಾಗ ರಾಜೀನಾಮೆ ನೀಡಬೇಕು ಎಂದರು.
ಸರಕಾರಿ ನೌಕರರು ಮತ್ತು ಜನಪ್ರತಿನಿಧಿಗಳು ಅಪರಾಧ ಮಾಡಿದಾಗ ಪ್ರಕರಣ ದಾಖಲಿಸಲು ಇರುವ ನಿಬಂಧನೆಯನ್ನು ರದ್ದುಗೊಳಿಸಬೇಕು ಎಂದೂ ನ್ಯಾ| ಹೆಗ್ಡೆ ಹೇಳಿದ್ದಾರೆ.