ಸಾಗರ: ತಾಲೂಕಿನ ಮಹತ್ವಾಕಾಂಕ್ಷೆಯ ಕಳಸವಳ್ಳಿ ಅಂಬಾರಗೋಡ್ಲು ನಡುವಿನ ಹೊಳೆಬಾಗಿಲು ಸೇತುವೆಗೆ ಅಗತ್ಯವಾದ ಮಣ್ಣಿನ ದಿಬ್ಬ ನಿರ್ಮಿಸಲು ಸಿಗಂದೂರು ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಮಣ್ಣು ತೆಗೆಯಲು ಮುಂದಾದ ಸೇತುವೆ ನಿರ್ಮಿಸುತ್ತಿರುವ ದಿಲೀಪ್ ಕಂಪನಿಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಯಂತ್ರಗಳನ್ನು ಹಿಂದಕ್ಕೆ ಕಳಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ದ್ವೀಪಕ್ಕೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡು ಹೊಳೆಬಾಗಿಲು ಸೇತುವೆ ಕಾಮಗಾರಿಯ ಪಿಲ್ಲರುಗಳಿಂದ ರಸ್ತೆಗೆ ಮಣ್ಣು ದಂಡೆ ನಿರ್ಮಿಸಲು ಸಾವಿರಾರು ಲಾರಿ ಲೋಡ್ ಮಣ್ಣು ಅಗತ್ಯವಿದ್ದು ಏಕಾಏಕಿ ಖಾಸಗಿಯವರಿಗೆ ಮಂಜೂರಾಗಿದೆ ಎನ್ನಲಾದ ಭೂಮಿಯಲ್ಲಿ ಮಣ್ಣು ಅಗೆಯುವ ಕಾಮಗಾರಿ ಮಂಗಳವಾರ ಸಂಜೆ ಶುರು ಮಾಡಿದ್ದಕ್ಕೆ ಸ್ಥಳೀಯ ನಾಗರಿಕರು ವಿರೋಧ ವ್ಯಕ್ತಪಡಿಸಿದರು.
ಕಂಪನಿ ಮಣ್ಣು ತೆಗೆದಿರುವ ಭೂ ಭಾಗವು ಕಳಸವಳ್ಳಿ ಗ್ರಾಮದ 71 ಮತ್ತು 72 ಸರ್ವೇ ನಂಬರ್ ಭೂಮಿ ಈಗಾಗಲೇ ವನ್ಯಜೀವಿ ವಲಯ ಎಂದು ಘೋಷಣೆ ಆಗಿದ್ದು 2009ರ ಹೊತ್ತಿಗೆ ಪಶ್ಚಿಮ ಘಟ್ಟ ಕಾರ್ಯಪಡೆ ಮತ್ತು ಅರಣ್ಯ ಇಲಾಖೆಯಿಂದ ದೇವರ ಕಾಡು ಎಂದು ಘೋಷಣೆ ಆಗಿದ್ದರೂ ಖಾಸಗಿ ವ್ಯಕ್ತಿಗಳಿಗೆ ಬಗರ್‌ಹುಕುಂ ಅಡಿಯಲ್ಲಿ ಮಂಜೂರಾತಿ ಆಗಿರುವ ಬಗ್ಗೆ ಪಹಣಿಯಲ್ಲಿ ನಮೂದಾಗಿದ್ದು ಕಾಡನ್ನು ಖಾಸಗಿಯವರಿಗೆ ಮಾಡಿರುವ ಬಗ್ಗೆ ಸ್ಥಳೀಯರಾದ ಮಂಜಪ್ಪ, ಶ್ರೀಕಾಂತ್ ಸಿಗಂದೂರು, ಯಶವಂತ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಕಾನೂನು ಸುವ್ಯವಸ್ಥೆ ಭಂಗತರುವವರ ವಿರುದ್ದ ಕಠಿಣ ಕ್ರಮ : ಎಸ್.ಪಿ.ಚೇತನ್ ಎಚ್ಚರಿಕೆ
ಈ ನಡುವೆ ಸೇತುವೆ ನಿರ್ಮಾಣ ಮಾಡುತ್ತಾ ಇರುವ ಕಂಪನಿ ದ್ವೀಪದ ರೈತರ ಬಳಿ ಮಣ್ಣು ಪುಕ್ಕಟೆ ಪಡೆಯಲು ಬೇಡಿಕೆ ಇಡುತ್ತಿದ್ದು ಈ ನಿಲುವನ್ನು ಸಹಮತ ವೇದಿಕೆ ತುಮರಿ ಖಂಡಿಸಿದೆ.
ವೇದಿಕೆಯ ಪ್ರಮುಖ ಪೃಥ್ವಿರಾಜ್ ಮಾರಲಗೋಡು, ಸೇತುವೆ ಕಂಪನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆದ ಅಧಿಕೃತ ಭೂ ಹಕ್ಕು ಹೊಂದಿದ ರೈತರಿಂದ ಮಣ್ಣನ್ನು ಯೋಗ್ಯ ಬೆಲೆ ಕೊಟ್ಟು ಖರೀದಿಸಬೇಕು. ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಮಣ್ಣು ಬ್ಯಾಂಕ್ ನಿರ್ಮಾಣಕ್ಕೂ ಅನುದಾನ ಕಾಯ್ದಿರಿಸಿದೆ. ಹೀಗಿರುವಾಗ ರೈತರು ಹಕ್ಕು ಹೊಂದಿರುವ ಮಣ್ಣನ್ನು ಯೋಗ್ಯ ಬೆಲೆ ಕೊಟ್ಟು ಖರೀದಿಸುವುದು ನ್ಯಾಯಸಮ್ಮತವಾಗಿದ್ದು ಕಂಪನಿ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.