ನೇರಳಕಟ್ಟೆ: ಹೆಮ್ಮಕ್ಕಿ ಕ್ರಾಸ್ – ಚಿತ್ತೂರು ಮುಖ್ಯ ರಸ್ತೆಯ ಹಾಡಿಬಿರ್ಗಿ ಕ್ರಾಸ್‌ನಿಂದ ಕೆರಾಡಿಗೆ ಸಂಪರ್ಕಿಸುವ ಮುಖ್ಯ ರಸ್ತೆಯು ಮಳೆಗೆ ಅಲ್ಲಲ್ಲಿ ಹಲವೆಡೆ ರಾಡಿಯೆದ್ದು, ಸಂಚಾರವೇ ದುಸ್ತರಗೊಡಿದೆ. ಸುಮಾರು 1 ಕಿ.ಮೀ. ಉದ್ದದ ರಸ್ತೆಯಲ್ಲಿ 400 ಮೀ.ನಷ್ಟು ದೂರದವರಗೆ ವಾಹನ ಸಂಚರಿಸಲು ಸಾಧ್ಯವಿಲ್ಲದಷ್ಟು ಹೊಂಡಮಯಗೊಂಡಿದೆ.
ಹಾಡಿಬಿರ್ಗಿಯಿಂದ ಕೆರಾಡಿ ಗ್ರಾ.ಪಂ., ಪೇಟೆಗೆ ಸಂಪರ್ಕಿಸುವ ರಸ್ತೆ ಇದಾಗಿದೆ. ಇದಲ್ಲದೆ ಶ್ರೀ ವರಸಿದ್ಧಿ ವಿನಾಯಕ ಕಾಲೇಜು, ಬ್ಯಾಂಕ್, ಉಪ ಆರೋಗ್ಯ ಕೇಂದ್ರ, ಕೆರಾಡಿ ಶಾಲೆ, ಮೂಡುಗಲ್ಲು ಕಡೆಗೂ ಸಂಪರ್ಕ ಕಲ್ಪಿಸುವ ರಸ್ತೆ ಇದೆ. ನಿತ್ಯ ನೂರಾರು ವಾಹನ, ಬಸ್‌ಗಳು, ಶಾಲಾ ವಾಹನಗಳು ಸಂಚರಿಸುವ ಮಾರ್ಗ ಇದಾಗಿದೆ. ಕೆರಾಡಿ ಭಾಗದ ಶೇ. 90ರಷ್ಟು ಮಂದಿ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ.
ಕೇವಲ ಒಂದು ಕಿ.ಮೀ. ದೂರದ ರಸ್ತೆಯ 400 ಮೀ.ನಷ್ಟು ಈಗಲೇ ಹಲವೆಡೆ ಈ ರಸ್ತೆ ಹದಗೆಟ್ಟಿದ್ದು, ಇನ್ನು ಮಳೆ ಮುಂದುವರಿದಷ್ಟು ರಸ್ತೆ ಮಧ್ಯೆ ಇನ್ನಷ್ಟು ಕಡೆಗಳಲ್ಲಿ ಹೊಂಡ-ಗುಂಡಿ ಬೀಳುವ ಸಾಧ್ಯತೆಗಳಿವೆ.
ಕಾಂಕ್ರೀಟ್ ಕಾಮಗಾರಿಗೆ ಬೇಡಿಕೆ
ಹಾಡಿಬಿರ್ಗಿ ಕ್ರಾಸ್-ಕೆರಾಡಿ ರಸ್ತೆ ಹಾಳಾಗಲು ಮುಖ್ಯ ಕಾರಣ ರಸ್ತೆಯ ಎರಡೂ ಬದಿಗಳಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಆಗಿದೆ. ಒಂದೆರಡು ಕಡೆಗಳಲ್ಲಿ ಅಗತ್ಯವಿದ್ದರೂ ಮೋರಿ ಅಳವಡಿಸಿಲ್ಲ. ಅದಲ್ಲದೆ ಒಂದು ಕಡೆಯಿಂದ ಜೇಡಿಮಣ್ಣಿನ ಬರೆಯಿದ್ದು, ಅದು ವರ್ಷ- ವರ್ಷವೂ ಮಳೆಗಾಲದಲ್ಲಿ ಕುಸಿಯುತ್ತದೆ. ಹಾಗಾಗಿ ಈ 400 ಮೀ. ಉದ್ದದ ರಸ್ತೆಗೆ ಡಾಮರು ಹಾಕಿದರೂ ಒಂದೇ ಮಳೆಗಾಲದಲ್ಲಿ ಎದ್ದು ಹೋಗುತ್ತದೆ. ಕಾಂಕ್ರೀಟ್‌ಕಾಮಗಾರಿ ನಡೆಸಿದರೆ ಮಾತ್ರ ಅನುಕೂಲವಾಗಬಹುದು ಎನ್ನುವುದು ಜನಾಭಿಪ್ರಾಯ.
ಕಾಂಕ್ರೀಟ್ ಕಾಮಗಾರಿಗಾಗಿ ಶಾಸಕರಿಗೆ ಮನವಿ: ಕೆರಾಡಿ ಪಂ. ವ್ಯಾಪ್ತಿಯಲ್ಲಿ ಶಾಸಕರಿಂದ 18 ಕೋ.ರೂ. ಅನುದಾನವನ್ನು ನೀಡಿದ್ದಾರೆ. ಈ ಪಂಚಾಯತ್ ರಸ್ತೆಯು ಹದಗೆಟ್ಟು ಜನಸಾಮಾನ್ಯರಿಗೆ ತೊಂದರೆ ಆಗುತ್ತಿರುವ ಬಗ್ಗೆ ನಾವು ಶಾಸಕರ ಗಮನಕ್ಕೆ ತಂದಿದ್ದೇವೆ. ಕಾಂಕ್ರೀಟ್ ಕಾಮಗಾರಿಗಾಗಿ ಅನುದಾನಕ್ಕೆ ಮನವಿ ಸಲ್ಲಿಸಿದ್ದೇವೆ. ಮುಂದಿನ ಹಂತದಲ್ಲಿ ಆದ್ಯತೆ ನೆಲೆಯಲ್ಲಿ ಈ ರಸ್ತೆಗೆ ಅನುದಾನ ನೀಡುವ ಭರವಸೆ ನೀಡಿದ್ದಾರೆ. –
ಸುದರ್ಶನ್ ಶೆಟ್ಟಿ, ಕೆರಾಡಿ ಗ್ರಾ.ಪಂ. ಉಪಾಧ್ಯಕ್ಷರು