ಬಾಗಲಕೋಟೆ: ಸುಕ್ಷೇತ್ರದ ಮುಚಖಂಡಿ ಗ್ರಾಮದ ಆರಾಧ್ಯ ದೈವ ವೀರಭದ್ರೇಶ್ವರ ಅಗ್ಗಿ ಉತ್ಸವ ಶ್ರಾವಣ ಮಾಸದ ಕೊನೆಯ ಮಂಗಳವಾರ ಅದ್ಧೂರಿಯಾಗಿ ಜರುಗಿತು.
ಕಳೆದ ಎರಡ್ಮೂರು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಅಗ್ಗಿ ಉತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಿರಲಿಲ್ಲ. ಈ ಭಾರಿ ಭಕ್ತರು ಸಂಭ್ರಮದಿಂದ ಜಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಶ್ರಾವಣ ಮಾಸದ ಕೊನೆಯ ಮಂಗಳವಾರ ಅಗ್ಗಿ ಉತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ವೀರಭದ್ರೇಶ್ವರನಿಗೆ ಮಹಾರುದ್ರಾಭಿಷೇಕ, ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ವೀರಭದ್ರೇಶ್ವರ ದೇವರಿಗೆ ಹಣ್ಣುಗಳು, ವಿವಿಧ ರೀತಿಯ ಅಲಂಕಾರ ಮಾಡಲಾಗಿತ್ತು.
ಬೆಳಗ್ಗೆಯಿಂದಲೇ ವೀರಭದ್ರೇಶ್ವರನ ದರ್ಶನ ಪಡೆಯಲು ಬಾಗಲಕೋಟೆ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗದಿಂದ ಭಕ್ತರು ಆಗಮಿಸಿ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದುಕೊಂಡರು.
ಅಗ್ಗಿ ಕುಂಡದಲ್ಲಿ ಹಾಯ್ದ ಭಕ್ತರು: ಸಂಜೆ 4 ಗಂಟೆಗೆ ದೇವಸ್ಥಾನದ ಆವರಣದಿಂದ ಮುಚಖಂಡಿ ಗ್ರಾಮದ ದ್ವಾರದ ಬಾಗಿಲುವರೆಗೆ ಚಿಕ್ಕ ರಥೋತ್ಸವ ನಡೆಯಿತು. ರಥೋತ್ಸವ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಚುರುಮುರಿ, ಬಾಳೆ ಹಣ್ಣು ಸಮರ್ಪಿಸಿದರು. ರಸ್ತೆಯ ಇಕ್ಕೆಲುಗಳಲ್ಲಿ ನಿಂತರ ಭಕ್ತರು ರಥೋತ್ಸವ ಸಾಗುತ್ತಿದ್ದಂತೆ ನಮಿಸಿದರು. ನಂತರ ಸಂಜೆ 5 ಗಂಟೆಗೆ ದೇವಸ್ಥಾನ ಆವರಣದ ಮುಂದೆ ಅಗ್ಗಿಕುಂಡದಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ವೀರಭದ್ರೇಶ್ವರ ನೆರವೇರಿಸಲಿ ಎಂದು ಅಗ್ಗಿ ಕುಂಡದಲ್ಲಿ ಹಾಯ್ದು ತಮ್ಮ ಭಕ್ತಿಯನ್ನು ಅರ್ಪಿಸಿದರು.
ಅಗ್ಗಿ ಉತ್ಸವದಲ್ಲಿ ನಾನಾ ಭಾಗದಿಂದ ಆಗಮಿಸಿದ್ದ ಜನರಿಗೆ ಮನರಂಜನೆಗಾಗಿ ಚಿಕ್ಕಮಕ್ಕಳಾದಿಯಾಗಿ ದೊಡ್ಡವರಿಗೆ ಆಟವಾಡಲು ತೊಟ್ಟಿಲು ಹಾಗೂ ಜಂಪ್ ಮಾಡುವ ಸಾಮಾಗ್ರಿಗಳನ್ನು ಹಾಕಲಾಗಿತ್ತು.
ಶ್ರಾವಣ ಮಾಸದ ಮಂಗಳವಾರ ಜರುಗಿದ ಅಗ್ಗಿ ಉತ್ಸವವನ್ನು ಮುಚಖಂಡಿ ಗ್ರಾಮದ ವೀರಭದ್ರೇಶ್ವರ ಜೀರ್ಣೋದ್ಧಾರ ಕಮೀಟಿ ಹಾಗೂ ಗ್ರಾಮಸ್ಥರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.