Advertisement

ಹೊಸ ಕನಸ ಹೊಸಿಲಲ್ಲಿ ಮುಚಿ-ತೆರೆದ ಕನ್ನಡ ಶಾಲೆಗಳು

11:10 AM Nov 01, 2017 | |

ಪುತ್ತೂರು: ತಾಲೂಕಿನ ಎರಡು ಸರಕಾರಿ ಕನ್ನಡ ಶಾಲೆಗಳು ಹೊಸ ಕನಸ ಹೊಸೆಯಲು ಸಜ್ಜಾಗಿವೆ. ನಾರ್ಯಬೈಲು ಕಿ.ಪ್ರಾ. ಶಾಲೆ ಎರಡು ವರ್ಷ ಬಾಗಿಲು ಮುಚ್ಚಿ, ಮತ್ತೆ ಆರಂಭವಾಗಿದೆ. ತೆಗ್ಗು ಕಿ.ಪ್ರಾ. ಶಾಲೆ ಬಾಗಿಲು ಮುಚ್ಚುವ ಅಂಚಿಗೆ ಹೋಗಿ ಹಿಂದೆ ಬಂದಿದೆ. ಇದರ ಹಿಂದೆ ಸ್ಥಳೀಯರ ಕೊಡುಗೆಯನ್ನು ಮರೆಯುವಂತಿಲ್ಲ.

Advertisement

ಕನ್ನಡ ರಾಜ್ಯೋತ್ಸವ ಆಚರಣೆಯ ಮೊದಲ ನೋಟವೇ ಕನ್ನಡ ಶಾಲೆಗಳು. ಪ್ರತಿ ವರ್ಷದ ನವಂಬರ್‌ 1ರಂದು ಕನ್ನಡ ಶಾಲೆಗಳಲ್ಲಿ ಕನ್ನಡ ಧ್ವಜ ಹಾರಿಸಲಾಗುತ್ತದೆ. ಕನ್ನಡ ನಾಡಗೀತೆ ಹಾಡಿ, ಮಕ್ಕಳ ಬಾಯಿ ಸಿಹಿ ಮಾಡಿ, ಕನ್ನಡಾಭಿಮಾನದ ಮಾತುಗಳು ಹೊರಹೊಮ್ಮುತ್ತವೆ. ಎಳೆ ಮನಸ್ಸುಗಳನ್ನು ಕನ್ನಡದ ಕಲಿಗಳಾಗಿ ರೂಪಿಸುವ ಮಹತ್ವದ ಕಾರ್ಯಕ್ರಮವಿದು. ಈ ನಿಟ್ಟಿನಲ್ಲಿ ಕನ್ನಡ ಶಾಲೆಗಳು ಗರಡಿ ಮನೆಗಳಿದ್ದಂತೆ. ಇಂತಹ ಗರಡಿ ಮನೆಗಳೇ ಇಂದು ನಿಸ್ತೇಜವಾಗುವ ಭೀತಿಗೆ ಹೋಗಿದ್ದವು. ಇನ್ನು ಕೆಲವು ಬಾಗಿಲನ್ನೇ ಮುಚ್ಚಿಕೊಂಡಿವೆ. ಈ ಶಾಲೆಗಳ ಪೈಕಿ ತೆಗ್ಗು ಹಾಗೂ ನಾರ್ಯಬೈಲು ಶಾಲೆ ಹೊಸ ಸಾಧನೆ ಮಾಡಿವೆ. ಸ್ಥಳೀಯರ ಕನ್ನಡಾಭಿಮಾನಕ್ಕೆ ಶಾಲೆ ತಲೆ ಎತ್ತಿ ನಿಂತಿವೆ. ಹೊಸ ಕನಸು ಬಿತ್ತುವ ಕಾಯಕದಲ್ಲಿ ನಿರತವಾಗಿವೆ.

ನಾರ್ಯಬೈಲು ಕಿ.ಪ್ರಾ. ಶಾಲೆ 2011ರಲ್ಲಿ ಶಾಶ್ವತವಾಗಿ ಬಾಗಿಲು ಮುಚ್ಚಿಯೇ ಬಿಟ್ಟಿತು ಎಂದು ಭಾವಿಸಲಾಯಿತು. ಶಿಕ್ಷಕರನ್ನು ಬದಲಾಯಿಸಬೇಕು ಎಂಬ ಪೋಷಕರ ಆಗ್ರಹವೇ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ಪ್ರೇರೇಪಿಸಿತು ಎಂದೂ ಹೇಳಲಾಗಿದೆ. ಸ್ಥಳೀಯರ, ಶಿಕ್ಷಣಾಭಿಮಾನಿಗಳ ಒತ್ತಾಸೆಗೆ ಮಣಿದ ಇಲಾಖೆ, 2013ರಲ್ಲಿ ಮತ್ತೆ ಶಾಲೆಯನ್ನು ತೆರೆಯಲು ಮುಂದಾಯಿತು. 2013ರಲ್ಲಿ 14 ವಿದ್ಯಾರ್ಥಿಗಳು, 2014ರಲ್ಲಿ 18, 2015ರಲ್ಲಿ 19, 2016ರಲ್ಲಿ 18, 2017ರಲ್ಲಿ 23 ವಿದ್ಯಾರ್ಥಿಗಳಿದ್ದಾರೆ. ಅಂದರೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಓರ್ವ ಶಿಕ್ಷಕರು ಹಾಗೂ ಓರ್ವ ಅತಿಥಿ ಶಿಕ್ಷಕರು ಇದ್ದಾರೆ.

ತೆಗ್ಗು ಕಿ.ಪ್ರಾ. ಶಾಲೆಯ ಮೂಲಸೌಕರ್ಯ ಕೊರತೆಯಿಂದ ಬೇಸತ್ತ ಪೋಷಕರು, ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು 2016ರಲ್ಲಿ ಪಟ್ಟು ಹಿಡಿದರು. ಬೀಳುವ ಸ್ಥಿತಿಯಲ್ಲಿದ್ದ ಕಟ್ಟಡ, ಗ್ರಾಮೀಣ ಭಾಗದ ಈ ಶಾಲೆಗೆ
ಶಿಕ್ಷಕರನ್ನೇ ನೀಡದೇ ಇರುವುದು ಪೋಷಕರ ಆಕ್ರೋಶಕ್ಕೆ ಕಾರಣ. ಸ್ಥಳೀಯರ ಒತ್ತಾಯಕ್ಕೆ ಕಟ್ಟು ಬಿದ್ದ ಇಲಾಖೆ, ಶಾಲೆಯನ್ನು ಪುನರಾರಂಭಿಸಿತು. ಬೇಕಾದ ಸವಲತ್ತು ನೀಡಿತ್ತು. ದಾನಿಗಳು ಕನ್ನಡ ಶಾಲೆ ಉಳಿಸುವ ಕೆಲಸದಲ್ಲಿ ಕೈಜೋಡಿಸಿದರು.

50ನೇ ವರ್ಷದ ಸಂಭ್ರಮದಲ್ಲಿರುವ ತೆಗ್ಗು ಕಿ.ಪ್ರಾ. ಶಾಲೆ ಈ ವರ್ಷ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜುಲೈನಲ್ಲಿ ಶಾಲಾ ಹುಟ್ಟುಹಬ್ಬ ಹಾಗೂ ಗಿಡ ನೆಡುವ ಕಾರ್ಯಕ್ರಮ, ಆಗಸ್ಟ್‌ನಲ್ಲಿ ವಿವಿಧ ಯೋಜನೆಗಳ ಶಿಲಾನ್ಯಾಸ,
ಸೆಪ್ಟಂಬರ್‌ನಲ್ಲಿ ವರ್ಣ ಕಾರ್ಯಾಗಾರ, ಅಕ್ಟೋಬರ್‌ನಲ್ಲಿ ಕಣ್ಣಿನ ಚಿಕಿತ್ಸಾ ಶಿಬಿರ ನಡೆದಿದೆ. ನವೆಂಬರ್‌ನಲ್ಲಿ ಬೀದಿ ನಾಟಕ, ಡಿಸೆಂಬರ್‌ನಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹ ಮಿಲನ, ಮನೆ-ಮನೆ ಯಕ್ಷಗಾನ ತಾಳಮದ್ದಳೆ, ಮುಕ್ತ ಹಗ್ಗಜಗ್ಗಾಟ, ಜನವರಿಯಲ್ಲಿ ತೆಗ್ಗು ತೇರು ಹಮ್ಮಿಕೊಳ್ಳಲಾಗಿದೆ. ಶಾಲೆಯನ್ನು ಮಾದರಿ ಮಾಡುವಲ್ಲಿ ಶಿಕ್ಷಕರು, ಸ್ಥಳೀಯರು ಶ್ರಮಿಸುತ್ತಿದ್ದಾರೆ. ಸದ್ಯ ತೆಗ್ಗು ಶಾಲೆಯಲ್ಲಿ 73 ವಿದ್ಯಾರ್ಥಿಗಳಿದ್ದಾರೆ.

Advertisement

4 ಶಾಲೆಗಳಿಗೆ ಕನ್ನಡ ರಾಜ್ಯೋತ್ಸವವಿಲ್ಲ
ಇಂದು ಕನ್ನಡ ರಾಜ್ಯೋತ್ಸವ. ನಾಡಿನ ವಿದ್ಯಾರ್ಥಿಗಳು ಹೊಸ ದಿರಿಸಿನೊಂದಿಗೆ ಶಾಲಾ ಮೈದಾನದಲ್ಲಿ ಸೇರಿ, ನಾಡಗೀತೆ ಹಾಡುವ ಸಂಭ್ರಮದಲ್ಲಿದ್ದಾರೆ. ಆದರೆ ಪುತ್ತೂರು ತಾಲೂಕಿನ ನಾಲ್ಕು ಶಾಲಾ ಕಟ್ಟಡಗಳು ಈ ಸಂತೋಷದಿಂದ ವಂಚಿತವಾಗಿವೆ. 

ಕಳೆದ ಕೆಲವು ವರ್ಷದಲ್ಲಿ ನಾಲ್ಕು ಕನ್ನಡ ಶಾಲೆಗಳ ಬಾಗಿಲು ಮುಚ್ಚಿವೆ. ಸಬ್ಬಡ್ಕ ಹಿರಿಯ ಪ್ರಾಥಮಿಕ ಶಾಲೆ, ಬೆದ್ರಾಳ ಕಿರಿಯ ಪ್ರಾಥಮಿಕ ಶಾಲೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಕಿ.ಪ್ರಾ. ಶಾಲೆ, ಪಾರ ಕಿ.ಪ್ರಾ. ಶಾಲೆ ಈ ಬಾರಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿಲ್ಲ.

ಅಮೂಲ್ಯ ದಾಖಲೆ
ಪ್ರಾಥಮಿಕ ಶಾಲೆಗಳು ಜೀವನದ ಅವಿಭಾಜ್ಯ ಅಂಗ. ಮಗು ಹುಟ್ಟಿದ ದಾಖಲೆ, ಪ್ರಾಥಮಿಕ ಶಿಕ್ಷಣದ ದಾಖಲೆ ಇಲ್ಲಿ ಭದ್ರವಾಗಿರುತ್ತವೆ. ವಿದ್ಯಾರ್ಥಿ ಬೆಳೆದು ದೊಡ್ಡ ಹುದ್ದೆಗೆ ಹೋದರೂ, ಪ್ರಾಥಮಿಕ ಶಾಲೆಯ ದಾಖಲೆ ಒಂದಲ್ಲ
ಒಂದು ಸಂದರ್ಭ ಅಗತ್ಯಕ್ಕೆ ಬಂದೇ ಬರುತ್ತದೆ. ಇಂತಹ ನೂರಾರು ವರ್ಷಗಳ ದಾಖಲೆಗಳು ಇಲ್ಲಿ ಭದ್ರವಾಗಿರುತ್ತವೆ. ಆದರೆ ಶಾಲೆಯ ಕದ ಮುಚ್ಚುತ್ತಿದ್ದಂತೆ ದಾಖಲೆಗಳನ್ನು ಸಮೀಪದ ಶಾಲೆಗೆ ಹಸ್ತಾಂತರ ಮಾಡಬೇಕಾಗುತ್ತದೆ.
ಪುತ್ತೂರು ತಾಲೂಕಿನಲ್ಲಿ ಕದ ಮುಚ್ಚಿದ ಶಾಲೆಗಳ ದಾಖಲೆಗಳನ್ನು ಸಮೀಪದ ಶಾಲೆಗೆ ಹಸ್ತಾಂತರ ಮಾಡಿದ್ದು, ಇದರ ಮಾಹಿತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿದೆ.

ಧ್ವಜ ಗೊಂದಲ
ರಾಷ್ಟ್ರಧ್ವಜ ಹಾರಿಸಿದ ಕಂಬದಲ್ಲಿ ನಾಡಧ್ವಜ ಹಾರಿಸುವ ವಿಚಾರದಲ್ಲಿ ಮೂಡಿರುವ ಗೊಂದಲದ ಹಿನ್ನೆಲೆಯಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವ ಹೇಗೆ ಆಚರಿಸಲಿದ್ದಾರೆ ಎಂಬ ಕುತೂಹಲವೂ ಮನೆ ಮಾಡಿದೆ. ಇದುವರೆಗೆ ಇಲಾಖೆ ಈ
ಬಗ್ಗೆ ಯಾವುದೇ ಸೂಚನೆ ನೀಡಿಲ್ಲ.

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next