Advertisement

ಪೌರ ನೌಕರರ ಬೇಡಿಕೆ ಈಡೇರಿಕೆಗೆ ಶೀಘ್ರ ಅಗತ್ಯ ಕ್ರಮ : ಸಚಿವ ಎಂಟಿಬಿ ನಾಗರಾಜ್‌

05:47 PM Jul 26, 2022 | Team Udayavani |

ಬೆಂಗಳೂರು: ಪೌರ ಸೇವಾ ನೌಕರರ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಗುತ್ತಿಗೆ ಪದ್ದತಿಯನ್ನು ರದ್ದುಪಡಿಸಿ, ನೌಕರರನ್ನು ನೇರ ವೇತನ ಪಾವತಿ ಯೋಜನೆಗೆ ಒಳಪಡಿಸುವುದು ಸೇರಿದಂತೆ ಎಲ್ಲ ಬೇಡಿಕೆಗಳ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ ಭರವಸೆ ನೀಡಿದ್ದಾರೆ.

Advertisement

ವಿಧಾನಸೌಧದಲ್ಲಿ ಇಂದು ರಾಜ್ಯ ಪೌರ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಅವರ 17 ಬೇಡಿಕೆಗಳ ಸಂಬಂಧ ಸಭೆ ನಡೆಸಿದ ಸಚಿವರು,ಪೌರಾಡಳಿತ ಇಲಾಖೆಯ ಹಂತದಲ್ಲೇ ಈಡೇರಿಸಬಹುದಾದ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸಲಾಗುವುದು ಎಂದರು.

ಪೌರಾಡಳಿತ ಇಲಾಖೆಯಲ್ಲಿನ ಪೌರ ಕಾರ್ಮಿಕರನ್ನು ಹೊರತುಪಡಿಸಿ ಇತರ ಸೇವೆಗಳ ನೇಮಕಾತಿಯಲ್ಲಿ ಗುತ್ತಿಗೆ ಪದ್ದತಿ ರದ್ದುಪಡಿಸಿ, ಇಲಾಖೆಯಲ್ಲೇ ವಿಲೀನಗೊಳಿಸಬೇಕು, ಆರೋಗ್ಯ ಸುಧಾರಣೆಗೆ ಯೋಜನೆ, ಉಪಹಾರ ಭತ್ಯೆ, ಗೃಹ ಭಾಗ್ಯ,ಮಕ್ಕಳಿಗೆ ವಿಶೇಷ ವಿದ್ಯಾರ್ಥಿ ವೇತನ ಹಾಗೂ ಅನ್ಯ ಇಲಾಖೆಗಳ ಅಧಿಕಾರಿಗಳನ್ನು ಅವರ ಮಾತೃ ಇಲಾಖೆಗೆ ವಾಪಸ್ ಕಳುಹಿಸಿ ಕೆಎಂಎಎಸ್ ಅಧಿಕಾರಿಗಳನ್ನೇ ನಗರಸಭೆ ಮುಖ್ಯಾಧಿಕಾರಿಗಳನ್ನಾಗಿ ನೇಮಕ ಮಾಡುವುದೂ ಸೇರಿದಂತೆ 17 ಬೇಡಿಕೆಗಳ ಸಂಬಂಧ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್, ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕ ಶಿವಸ್ವಾಮಿ, ರಾಜ್ಯ ಪೌರ ನೌಕರರ ಸಂಘದ ಅಧ್ಯಕ್ಷ ಕೆ.ಪ್ರಭಾಕರ, ಪ್ರಧಾನ ಕಾರ್ಯದರ್ಶಿ ಪಿ. ವೆಂಕಟೇಶ್‌ ಸೇರಿದಂತೆ ಇತರೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next